ಬೆಳಗಾವಿ ನಗರ ಪೊಲೀಸ್ ಆಯುಕ್ತರ ಹುದ್ದೆಗೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಚರ್ಚೆ ಹಾಗೂ ಗೊಂದಲಕ್ಕೆ ಇದೀಗ ತೆರೆ ಬಿದ್ದಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ನಡೆಸಿದ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯಲ್ಲಿ ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿದ್ದ ಭೂಷಣ್ ಗುಲಾಬ್ರಾವ್ ಬೋರಸೆ ಅವರನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿತ್ತು. ಅವರ ಸ್ಥಾನಕ್ಕೆ 2012ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ನಿಕ್ಕಂ ಪ್ರಕಾಶ್ ಅಮೃತ್ ಅವರನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಲಾಗಿತ್ತು.
ಸರ್ಕಾರದ ಆದೇಶ ಹೊರಬಿದ್ದ ಬಳಿಕ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಗಮನಕ್ಕೆ ತರದೆ ವರ್ಗಾವಣೆ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಗಣೇಶೋತ್ಸವ ಸೇರಿದಂತೆ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ವರ್ಗಾವಣೆ ಆದೇಶದ ಅನುಷ್ಠಾನಕ್ಕೆ ತಾತ್ಕಾಲಿಕ ತಡೆ ಕುರಿತು ಸುದ್ದಿಗಳೂ ಹರಿದಾಡಿದ್ದವು.
ಆದರೆ ಇದೀಗ ನೂತನ ಬೆಳಗಾವಿ ಪೊಲೀಸ್ ಕಮಿಷನರ್ ನಿಕ್ಕಂ ಪ್ರಕಾಶ್ ಅಮೃತ್ ಅವರು ಗುರುವಾರ, ಸೆಪ್ಟೆಂಬರ್ 3ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ನಿರ್ಗಮಿತ ಕಮಿಷನರ್ ಭೂಷಣ್ ಬೋರಸೆ ಅವರು ನಿಕ್ಕಂ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.
ಕರ್ನಾಟಕ ಸರ್ಕಾರದ ಆಗಸ್ಟ್ 29ರ ಐಪಿಎಸ್ ವರ್ಗಾವಣೆ ಆದೇಶದಂತೆ, ಬೋರಸೆ ಅವರನ್ನು ಡಿಐಜಿ ಹಾಗೂ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತರಾಗಿ ನೇಮಿಸಲಾಗಿದ್ದು, ನಿಕ್ಕಂ ಪ್ರಕಾಶ್ ಅಮೃತ್ ಅವರಿಗೆ ಡಿಐಜಿ ಹಾಗೂ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಜವಾಬ್ದಾರಿ ನೀಡಲಾಗಿದೆ.
ಗಣೇಶೋತ್ಸವ ಸೇರಿದಂತೆ ಮುಂದಿನ ದಿನಗಳಲ್ಲಿ ಬೆಳಗಾವಿ ನಗರದಲ್ಲಿ ನಡೆಯಲಿರುವ ಪ್ರಮುಖ ಧಾರ್ಮಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ನೂತನ ಪೊಲೀಸ್ ಆಯುಕ್ತರ ಮುಂದಿರುವ ಪ್ರಮುಖ ಸವಾಲುಗಳಾಗಿವೆ. ಅಧಿಕಾರ ಸ್ವೀಕರಿಸಿದ ಬಳಿಕ ನಿಕ್ಕಂ ಪ್ರಕಾಶ್ ಅವರು ನಗರದ ಪೊಲೀಸ್ ವ್ಯವಸ್ಥೆ ಮತ್ತು ಬಂದೋಬಸ್ತ್ ಕುರಿತು ಯಾವ ರೀತಿಯ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















