SK Home Ad
Home ಸುದ್ದಿ ರಾಜ್ಯ ಮೈಸೂರು–ಅಜ್ಮೇರ್ ರೈಲು ಸೇವೆಯಲ್ಲಿ ಮಹತ್ವದ ಬದಲಾವಣೆ: ಎಕ್ಸ್‌ಪ್ರೆಸ್ ಸಂಚಾರಕ್ಕೆ ಸಮಯವೂ ಫಿಕ್ಸ್

ಮೈಸೂರು–ಅಜ್ಮೇರ್ ರೈಲು ಸೇವೆಯಲ್ಲಿ ಮಹತ್ವದ ಬದಲಾವಣೆ: ಎಕ್ಸ್‌ಪ್ರೆಸ್ ಸಂಚಾರಕ್ಕೆ ಸಮಯವೂ ಫಿಕ್ಸ್

0
93

ಮೈಸೂರು: ಮೈಸೂರು–ಅಜ್ಮೇರ್ ನಡುವೆ ಸಂಚರಿಸುತ್ತಿದ್ದ ವಿಶೇಷ ರೈಲಿಗೆ ಇದೀಗ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸೇವೆಯಾಗಿ ಕ್ರಮಬದ್ಧ ಸ್ವರೂಪ ನೀಡಲಾಗಿದೆ. ರೈಲು ಸಂಖ್ಯೆ 06281/06282ರ ವಿಶೇಷ ಸೇವೆಯನ್ನು 16281/16282 ಮೈಸೂರು–ಅಜ್ಮೇರ್ ಎಕ್ಸ್‌ಪ್ರೆಸ್‌ ಆಗಿ ಕ್ರಮಬದ್ಧಗೊಳಿಸಲಾಗಿದ್ದು, ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ.

ರೈಲ್ವೆ ಮಂಡಳಿಯ ಅನುಮೋದನೆಯಂತೆ ಮೈಸೂರು–ಅಜ್ಮೇರ್ ಎಕ್ಸ್‌ಪ್ರೆಸ್ ವಾರಕ್ಕೊಮ್ಮೆ ಸಂಚರಿಸಲಿದೆ. ಮೈಸೂರು ಜಂಕ್ಷನ್‌ನಿಂದ ಪ್ರತಿ ಶನಿವಾರ ಬೆಳಿಗ್ಗೆ 8 ಗಂಟೆಗೆ ರೈಲು ಹೊರಡಲಿದೆ. ಇದರ ಮೊದಲ ಕ್ರಮಬದ್ಧ ಸೇವೆ ಸೆಪ್ಟೆಂಬರ್ 5, 2026ರ ಶನಿವಾರ ಆರಂಭವಾಗಲಿದೆ.

ಹಿಂದಿರುಗುವ ಮಾರ್ಗದಲ್ಲಿ ಅಜ್ಮೇರ್‌ನಿಂದ ಪ್ರತಿ ಸೋಮವಾರ ಸಂಜೆ ರೈಲು ಹೊರಡಲಿದೆ. ಸೆಪ್ಟೆಂಬರ್ 7ರಂದು ಅಜ್ಮೇರ್‌ನಿಂದ ಸಂಜೆ 6.30ಕ್ಕೆ ರೈಲು ಹೊರಡುವುದಾಗಿ ಸಂಸದ ವಿ. ಸೋಮಣ್ಣ ಅವರು ಹಂಚಿಕೊಂಡಿರುವ ಮಾಹಿತಿಯಲ್ಲಿ ತಿಳಿಸಿದ್ದಾರೆ.

ಮೈಸೂರು–ಅಜ್ಮೇರ್ ನಡುವಿನ ಈ ರೈಲು ಸೇವೆ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ. ಮೈಸೂರು, ಹಾಸನ, ಅರಸೀಕೆರೆ, ಚಿತ್ರದುರ್ಗ, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮಿರಜ್, ಸಾಂಗ್ಲಿ, ಸತಾರಾ, ಪುಣೆ, ಲೋಣಾವಳ, ಕಲ್ಯಾಣ್, ವಸಾಯಿ ರಸ್ತೆ, ಸೂರತ್, ವಡೋದರ, ರತ್ಲಾಂ, ಮಂದಸೌರ್, ನೀಮಚ್, ಚಿತ್ತೋಡ್ಗಢ, ಭಿಲ್ವಾರಾ, ನಸೀರಾಬಾದ್ ಮೂಲಕ ಅಜ್ಮೇರ್ ತಲುಪಲಿದೆ.

ಈ ರೈಲು ಮಾರ್ಗದ ವಿಶೇಷತೆಯೆಂದರೆ ಕರ್ನಾಟಕದ ಹಲವು ಜಿಲ್ಲೆಗಳ ಪ್ರಯಾಣಿಕರಿಗೆ ರಾಜಸ್ಥಾನದ ಅಜ್ಮೇರ್ ಸೇರಿದಂತೆ ಉತ್ತರ ಭಾರತದ ಪ್ರಮುಖ ಪ್ರದೇಶಗಳಿಗೆ ನೇರ ರೈಲು ಸಂಪರ್ಕ ದೊರೆಯುವುದು. ವಿಶೇಷವಾಗಿ ಮೈಸೂರು, ಹಾಸನ, ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಈ ಸೇವೆ ಅನುಕೂಲವಾಗಲಿದೆ.

ವಿಶೇಷ ರೈಲು ಸೇವೆಯನ್ನು ಕ್ರಮಬದ್ಧಗೊಳಿಸಿರುವುದರಿಂದ, ಮೈಸೂರು–ಅಜ್ಮೇರ್ ನಡುವೆ ಪ್ರಯಾಣಿಸುವವರಿಗೆ ವಾರದ ನಿಗದಿತ ದಿನದಂದು ರೈಲು ಸೇವೆ ಲಭ್ಯವಾಗಲಿದೆ. ಈಗಾಗಲೇ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಿಶೇಷ ರೈಲಿಗೆ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ಸ್ವರೂಪ ನೀಡಿರುವುದು ದೀರ್ಘಾವಧಿಯ ರೈಲು ಸಂಪರ್ಕಕ್ಕೆ ಮಹತ್ವದ ಹೆಜ್ಜೆಯಾಗಿದೆ.

ಮೈಸೂರು–ಅಜ್ಮೇರ್ ರೈಲು ಸೇವೆಯನ್ನು ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಲಾಗಿದ್ದು, ಈ ಸಂಪರ್ಕದಿಂದ ಕರ್ನಾಟಕ ಮತ್ತು ರಾಜಸ್ಥಾನ ನಡುವಿನ ಪ್ರಯಾಣ ಮತ್ತಷ್ಟು ಸುಗಮವಾಗುವ ನಿರೀಕ್ಷೆಯಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.