SK Home Ad
Home ಅಂಕಣ ಅಂಕಣ ಬರಹ | ಆರೆಸ್ಸೆಸ್ ಮುಖ್ಯಸ್ಥ, ಸಚಿವರ ಮಾತಿಗೆ ಬೇಕು ಬದ್ಧತೆ

ಅಂಕಣ ಬರಹ | ಆರೆಸ್ಸೆಸ್ ಮುಖ್ಯಸ್ಥ, ಸಚಿವರ ಮಾತಿಗೆ ಬೇಕು ಬದ್ಧತೆ

0
2

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ವಿದೇಶಿ ನೆಲದಲ್ಲಿ ಅವರಾಡಿದ ಮಾತು ಜಿಜ್ಞಾಸೆಗೆ ಒಳಗಾಗಿದೆ… ಸ್ವಕ್ಷೇತ್ರದಲ್ಲಿ ಇವರಾಡಿದ `ಮಾತು ಅಪದ್ಧ ಎನಿಸಿಕೊಂಡಿದೆ! ವಿಷಯ ಒಂದೇ. ಮುಸ್ಲಿಂ, ಧರ್ಮ, ಸಿದ್ಧಾಂತ..!!

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಅಂಗವಾಗಿ ಆರ್‌ಎಸ್‌ಎಸ್ ಮುಖ್ಯಸ್ಥ, ಸರ ಸಂಘಚಾಲಕ ಡಾ. ಮೋಹನ ಭಾಗ್ವತ್, ಅಮೇರಿಕಾ- ಕೆನಡಾ-ಯುಕೆ ಪ್ರವಾಸದಲ್ಲಿದ್ದಾರೆ.

ಆರ್‌ಎಸ್‌ಎಸ್ ಸರ ಸಂಘ ಚಾಲಕರು ದೇಶ ಬಿಟ್ಟು ವಿದೇಶಿ ಪ್ರವಾಸ ಮಾಡಿರುವುದು ಇದೇ ಪ್ರಥಮ. ಇವರೇ ಈ ವಿಷಯದಲ್ಲಿ ಮೊದಲಿಗರು. ಭಾಗ್ವತ್ ನ್ಯೂಯಾರ್ಕ್ನ ಮ್ಯಾಡಿಸನ್ ಸ್ಕ್ವೆರ್ ಗಾರ್ಡನ್'ನಲ್ಲಿ ಆಯೋಜಿಸಲಾದ ವಿಶ್ವ ಏಕತೆ ಆಚರಣೆ (ಯೂನಿವರ್ಸಲ್ ಒನ್‌ನೆಸ್ ಸೆಲಿಬ್ರೇಶನ್) ಕಾರ್ಯಕ್ರಮದಲ್ಲಿಯಾರು ಮುಸ್ಲಿಂರನ್ನು ದ್ವೇಷಿಸುತ್ತಾರೋ, ಅವರು ಹಿಂದೂಗಳೇ ಅಲ್ಲ; ಮುಸ್ಲಿಂ ಸಮುದಾಯ ಸೇರಿದಂತೆ ಎಲ್ಲ ಅನ್ಯಜಾತಿಗಳನ್ನೂ ಹಿಂದೂಗಳು ಗೌರವಿಸುತ್ತಾರೆ’ ಎಂದರು. ಅಷ್ಟೇ ಅಲ್ಲ. `ಮುಸ್ಲಿಂರಿಲ್ಲದ ಹಿಂದೂಸ್ತಾನ ಹಿಂದೂಸ್ತಾನವೇ ಅಲ್ಲ’ ಹಿಂದೂಗಳ ಡಿಎನ್‌ಎ, ಉದಾರತೆ ಎಲ್ಲರನ್ನೂ ಒಳಗೊಂಡಿದೆ ಎಂದೂ ನುಡಿದರು.

ಮೋಹನ ಭಾಗ್ವತ್ ವಿದೇಶಿ ನೆಲದಲ್ಲಿ ಆಡಿರುವ ಸರ್ವಧರ್ಮ ಸಮಭಾವದ ಮಾತು, ಧಾರ್ಮಿಕ ಏಕತೆ, ವೈವಿಧ್ಯತೆ ಮತ್ತು ಉದಾರತೆಯ ನುಡಿಗಳ ಬಗ್ಗೆ ಪ್ರಶಂಸೆಯೇನೋ ವ್ಯಕ್ತವಾಗಿದೆ. ಆದರೆ ಭಾಗ್ವತ್‌ರು ಹಿಂದೂಸ್ತಾನದಲ್ಲೇಕೆ ಈ ಮಾತುಗಳನ್ನಾಡುವುದಿಲ್ಲ?

ಮುಸ್ಲಿಂ ಸೇರಿದಂತೆ ಇತರ ಧರ್ಮಗಳ ಬಗ್ಗೆ, ಹಲವು ಸಮುದಾಯಗಳ ಬಗ್ಗೆ ನಡೆಯುತ್ತಿರುವಂಥ ದಾಳಿಗಳು, ಆರೋಪಗಳು ಮತ್ತು ಪುಷ್ಟಿಗಳ ಬಗ್ಗೆ ಈ ನೆಲದಲ್ಲಿಯೇ ಮಾತನಾಡಿ, ತಾವೇ ಅಖಾಡಕ್ಕೆ ಧುಮುಕಿದ್ದರೆ ಹಲವು ಕೋಮು ಗಲಭೆ, ಅಶಾಂತಿ ಮತ್ತು ವಿವಾದಗಳನ್ನು ತಪ್ಪಿಸಬಹುದಿತ್ತಲ್ಲವೇ ಎನ್ನುವ ಮಾತೀಗ ಎದ್ದಿದೆ. ದೇಶದ ಒಳಗಿನ ಪರಿಸ್ಥಿತಿ, ಇಲ್ಲಿನ ಧಾರ್ಮಿಕ ಧ್ರುವೀಕರಣ, ಸಾಮಾಜಿಕ ತಾರತಮ್ಯ ಮತ್ತು ಕೆಲವು ಧೋರಣೆಗಳ ಬಗ್ಗೆ ಮೋಹನ್ ಭಾಗ್ವತ್ ಮರಳಿ ಬಂದು, ವಿದೇಶಿ ನೆಲದ ತಮ್ಮ ಹೇಳಿಕೆಯನ್ನು ಕಾರ್ಯರೂಪಕ್ಕಿಳಿಸಬೇಕಿದೆ.

ಮುಸ್ಲಿಂರಿಲ್ಲದ ಭಾರತ ಭಾರತವೇ ಅಲ್ಲ ಎನ್ನುವ ಸರ ಸಂಚಾಲಕರು ದೇಶದ ನೆಲದಲ್ಲಿಯೇ ಛಾಪಿಸುವುದರೊಂದಿಗೆ `ಪಾಕಿಸ್ತಾನಕ್ಕೆ ಹೋಗಿ’ ಎಂದು ಹೂಂಕರಿಸುವ ಮಂದಿಯನ್ನೂ ತಹಬಂದಿಗೆ ತರುವುದು ಅವರ ಜವಾಬ್ಧಾರಿಯೇ. ಹಾಗೆಯೇ, ಭಾಗ್ವತ್ ತಮ್ಮ ಹಿಂದಿನ ಹಲವು ಹೇಳಿಕೆಗಳಿಗೂ ಸ್ಪಷ್ಟೀಕರಣವನ್ನು ನೀಡಬೇಕಾಗಿದೆ ಈಗ.

ಭಾಗ್ವತ್ ಈ ಹಿಂದೆಯೂ ಮುಸ್ಲಿಂ ಧರ್ಮಗುರುಗಳು ಮತ್ತು ಬುದ್ಧಿಜೀವಿಗಳೊಂದಿಗೆ ಸಭೆ ನಡೆಸಿದ್ದರು. ಭಾರತದಲ್ಲಿ ವಾಸಿಸುವ ಎಲ್ಲರ ಡಿಎನ್‌ಎ ಒಂದೇ ಆಗಿದೆ ಎಂಬ ಹೇಳಿಕೆ ನೀಡಿ, ಅಲ್ಪಸಂಖ್ಯಾತರನ್ನು ತಲುಪುವ ಪ್ರಯತ್ನ ಮಾಡಿದ್ದರು. ತೀವ್ರಗಾಮಿ ಧ್ರುವೀಕರಣವನ್ನು ಅವರು ಕಡಿಮೆ ಮಾಡಿದ್ದು ಸುಳ್ಳಲ್ಲ. ತಮ್ಮ ಅಂಗ ಸಂಸ್ಥೆಯೇ ಆಗಿರುವ ಬಿಜೆಪಿ ಕಾರ್ಯವೈಖರಿಯ ಕುರಿತು ಆಗಾಗ ನೀಡಿರುವ ಪ್ರತಿಕ್ರಿಯೆಗೂ ಅವರು ಅಂಟಿಕೊಂಡು, ಇದನ್ನೂ ಮತ್ತೊಮ್ಮೆ ಸ್ಪಷ್ಟಪಡಿಸಬೇಕಿದೆ.

ಎಪ್ಪತ್ತೈದು ವರ್ಷ ವಯಸ್ಸಾದವರೆಲ್ಲ ಇತರರಿಗೆ ಅವಕಾಶ ಕೊಡಬೇಕು ಎಂದು ವರ್ಷಗಳ ಹಿಂದೆಯೇ ಹೇಳಿದ್ದರು. `ಆರ್‌ಎಸ್‌ಎಸ್, ಬಿಜೆಪಿ ಅಥವಾ ಯಾವುದೇ ಸಾರ್ವಜನಿಕ ನಾಯಕತ್ವ ಇರಲಿ, ಎಪ್ಪತ್ತೈದು ವರ್ಷ ತುಂಬಿದವರು ನಿವೃತ್ತಿ ಪಡೆದು ಹೊಸಬರಿಗೆ ಅವಕಾಶ ನೀಡಬೇಕು’ ಎನ್ನುವ ಆರ್‌ಎಸ್‌ಎಸ್ ಚೀಫ್ ಮಾತು ನಂತರ ಅನುಷ್ಠಾನಗೊಳ್ಳಲೇ ಇಲ್ಲ. ಮೋದಿಯವರಿಗೂ ಅಷ್ಟೇ. ಭಾಗ್ವತ್ ಸರ ಸಂಚಾಲಕರ ಹುದ್ದೆಗೂ ಅಷ್ಟೇ!

ನಂತರ ಅವರೇ `ತನ್ನ ನಾಯಕತ್ವ ಯಾರದ್ದು ಎಂಬುದನ್ನು ಬಿಜೆಪಿ ನೋಡಿಕೊಳ್ಳುತ್ತದೆ. ಇದು ಸಂಘ ಪರಿವಾರದ ಕೆಲಸವಲ್ಲ’ ಎಂದು ಹೇಳಿ ದೇಶವನ್ನು ಅವಾಕ್ಕಾಗಿಸಿದರವರು! ಅಷ್ಟೇ ಅಲ್ಲ ಈ ಮಾತಿನ ಮೂಲಕ ಆರ್‌ಎಸ್‌ಎಸ್ ಮತ್ತು ಬಿಜೆಪಿ ಒಳನಂಟಿನ ಮರ್ಮಗಳ ಹಲವು ಅಧ್ಯಾಯಗಳನ್ನೂ ಪರೋಕ್ಷವಾಗಿ ದೇಶದ ಎದಿರು ಅನಾವರಣ ಮಾಡಿದರು!!

2024ರ ಜುಲೈನಲ್ಲಿ ಜಾರ್ಖಂಡದಲ್ಲಿ ಕುಂಬ್ರಾದ ವಿಕಾಸ ಭಾರತಿ ಕಾರ್ಯಕ್ರದಲ್ಲಿ `ಈ ದೇಶದಲ್ಲಿ ಕೆಲವರು ಸೂಪರ್‌ಮ್ಯಾನ್ ಆಗಿ ಬಳಿಕ ದೇವರಾಗಲು ಹಾತೊರೆಯುತ್ತಾರೆ. ಸೂಪರ್ ಮ್ಯಾನ್ ನಂತರ ಭಗವಾನ್ ಆಗಿ ನಂತರ ವಿಶ್ವರೂಪ ಹೊಂದಲು ನೋಡುತ್ತಾರೆ’ ಎಂದಿದ್ದ ‘ ಸಂಘದ ಚೀಫ್ ಮಾತು ಪರೋಕ್ಷವಾಗಿ ಯಾರಿಗೆ ವಾಗ್ದಾಳಿಯಾಗಿತ್ತು? ಇದನ್ನೂ ಕೂಡ ಅವರು ಸ್ಪಷ್ಟಪಡಿಸಬೇಕಲ್ಲವೇ?

ಏಕೆಂದರೆ ಮೋಹನ್ ಭಾಗ್ವತ್ ನ್ಯೂಯಾರ್ಕ್- ಕೆನಡಾಗಳಲ್ಲಿ ಆಡಿರುವ ಮಾತು ನಿಜಕ್ಕೂ ಪ್ರೇರಣಾದಾಯಕ. ಅಷ್ಟೇ ಅಲ್ಲ, ಅವರ ಉದಾರತೆ ಬಹಿರಂಗವಾದಂತಾಗಿದೆ. ಹಿಂದೆಯೂ ಲವ್ ಜಿಹಾದ್, ಮತಾಂತರಗಳ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದರವರು. `ನಿಮ್ಮವರಿಗೆ ಸರಿಯಾದ ಸಂಸ್ಕಾರ, ಶಿಕ್ಷಣ ನೀಡಿ.. ಜೀವನ ಪದ್ಧತಿ ಕಲಿಸಿ ಆಗ ಮತಾಂತರ ಪ್ರಕ್ರಿಯೆ ಕಡಿಮೆಯಾಗುತ್ತದೆ’ ಮತಾಂತರ ಮತ್ತು ಲವ್ ಜಿಹಾದ್‌ಅನ್ನು ಬಹುತೇಕ ಮುಸ್ಲಿಂರನ್ನು ಇಚ್ಛಿಸುವುದೂ ಇಲ್ಲ; ಬೆಂಬಲಿಸುವುದೂ ಇಲ್ಲ. ಎಲ್ಲರನ್ನೂ ಒಂದೇ ಕನ್ನಡಿಯಲ್ಲಿ ನೋಡಬೇಡಿ. ಜಿಹಾದಿ, ಲವ್ ಜಿಹಾದ್ ಇತ್ಯಾದಿಗಳನ್ನು ವಿರೋಧಿಸುವ ದೊಡ್ಡ ವರ್ಗ ಮುಸ್ಲಿಂರಲ್ಲಿ ಕೂಡ ಇದೆ. ಮೂಲಭೂತವಾದಿಗಳ ಸಂಖ್ಯೆ ಹೆಚ್ಚಾಗದಂತೆ ಹಾಗೂ ಉಳಿದ ಸಮುದಾಯಗಳು ಪ್ರೋತ್ಸಾಹ ನೀಡದಂತೆ ನೋಡಿಕೊಳ್ಳಬೇಕು ಎಂದು ಅಭಿಪ್ರಾಯಿಸಿದ್ದರು. ಅವೆಲ್ಲ ಈ ನೆಲದಲ್ಲಿ ಜಾರಿಯಾಗಬೇಕಿದೆ. ಮತ್ತು ಅವರದ್ದೇ ಸಂಘಟನೆಯ ಕಾರ್ಯಕರ್ತರಿಗೆ ತಮ್ಮ ನಿಲುವುಗಳನ್ನು ಸ್ಪಷ್ಟವಾಗಿ ಹೇಳಿ ಸೌಹಾರ್ದತೆ ಮೂಡಿಸುವ ಜವಾಬ್ದಾರಿಯನ್ನು ಅವರೇ ಹೊರಬೇಕಿದೆ. ಆಗ ನ್ಯೂಯಾರ್ಕ್, ಕೆನಡಾ ಹೇಳಿಕೆಗೆ ಹೆಚ್ಚು ಮಾನ್ಯತೆ ಬಂದಂತೆ ಅಲ್ಲವೇ?

ಇತ್ತ ಯಲಬುರ್ಗಾದಲ್ಲಿ ಸಚಿವ ಬಸವರಾಜ ರಾಯರೆಡ್ಡಿ ಹೊಸ ವಿವಾದ ಸೃಷ್ಟಿಸಿದ್ದಾರೆ. `ಮುಸ್ಲಿಂ ಧರ್ಮ ಎಲ್ಲ ಧರ್ಮಗಳಿಗಿಂತಲೂ ಶ್ರೇಷ್ಠ. ನಾನು ಹಜ್‌ಗೆ ಹೋಗುವ ಆಸೆ ಇತ್ತು. ಮಠ ಮಾನ್ಯಗಳಿಗೆ ನಾನು ಹೋಗುವುದು ತುಂಬ ಕಡಿಮೆ’ ಎಂಬುದು ಅವರ ಮಾತು ಬಹುಶಃ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಡಿಕೆ ಸರ್ಕಾರಕ್ಕೂ ಮುಜುಗರ ತರುವಂಥದ್ದೇ. ಮುಸ್ಲಿಂ ಸಮುದಾಯದ ಸಾಮೂಹಿಕ ವಿವಾಹದ ಸಮಾರಂಭದಲ್ಲಿ ಅವರು ಆ ಸಮುದಾಯದ ಬಗ್ಗೆ ಪ್ರೀತಿ ವ್ಯಕ್ತಪಡಿಸಿಯೇನೋ ಮಾತನಾಡಿದರು ನಿಜ. ಆದರೆ ಅನಗತ್ಯ ವಿವಾದವನ್ನು ಮೈಮೇಲೆ ಎಳೆದುಕೊಂಡರೆಂಬುದು ವಾಸ್ತವ.

ಈ ಮಾತು ರಾಯರೆಡ್ಡಿಯವರಿಗೆ ಖಂಡಿತ ಬೇಕಿರಲಿಲ್ಲ. ಮುಸ್ಲಿಂ ಧರ್ಮವನ್ನು ಪ್ರಶಂಸಿದ್ದರಲ್ಲಿ ಯಾವುದೇ ತಪ್ಪಿಲ್ಲ. ಎಲ್ಲ ಧರ್ಮಗಳನ್ನೂ ಸಮಾನವಾಗಿ ನೋಡಬೇಕಾದದ್ದು, ಎಲ್ಲರ ಕಷ್ಟ ಸುಖ ಆಲಿಸಬೇಕಾದದ್ದು ಮಂತ್ರಿಯಾದವನ ಸಾಂವಿಧಾನಿಕ ಕರ್ತವ್ಯ. ಆದರೆ ಧರ್ಮದ ಬಗ್ಗೆ ಸ್ಟಡಿ ಮಾಡಬೇಕು. ನಾನು ಹಜ್‌ಗೆ ಹೋಗಬೇಕೆಂಬ ಆಸೆಯಿದೆ. ಆದರೆ ಅವಕಾಶವಿಲ್ಲ. ಮನುಷ್ಯ ಹೇಗೆ ಬದುಕಬೇಕೆಂಬುದನ್ನು ಬೇರೆಲ್ಲ ಧರ್ಮಗಳಿಗಿಂತ ಮುಸ್ಲಿಂ ಸಮುದಾಯ ಚೆನ್ನಾಗಿ ಹೇಳಿದೆ ಎಂಬ ಮಾತು ಮುಸ್ಲಿಂಯೇತರ ಜನರಿಗೆ ಮತ್ತು ಸಂಘಟನೆಗಳಿಗೆ ರಾಯರೆಡ್ಡಿ ಮಾತು ಸಹಜವಾಗಿ ಬಸನಗೌಡ ಪಾಟೀಲ ಯತ್ನಾಳ್, ಪ್ರಮೋದ್ ಮುತಾಲಿಕ್, ಈಶ್ವರಪ್ಪ, ಆರ್ ಆಶೋಕ್ ಅವರೆಲ್ಲ ವೈಯಕ್ತಿಕ ನೆಲೆಯಲ್ಲಿ ರಾಯರೆಡ್ಡಿಯನ್ನು ಟೀಕಿಸಿದ್ದಾರೆ. ಸಂವಿಧಾನಬದ್ಧವಾಗಿ ಪ್ರಮಾಣ ವಚನ ಪಡೆದವರು ಈ ರೀತಿ ಓಲೈಕೆ ರಾಜಕಾರಣವನ್ನೇಕೆ ಮಾಡಬೇಕು ಎನ್ನುವುದು ಅವರ ಪ್ರಶ್ನೆ.

ರಾಯರೆಡ್ಡಿ ಕ್ಷೇತ್ರದಲ್ಲಿ ಅವರಿಗೆ ಮುಸ್ಲಿಂರನ್ನು ಓಲೈಸಿಕೊಳ್ಳಬೇಕು ಎನ್ನುವ ಅವಶ್ಯಕತೆ ಇಲ್ಲ. ಹಾಗಂತ ಅವರು ಆಡಿರುವ ಮಾತಿಗೆ ತಕ್ಕ ಬದ್ಧತೆಯೂ ಅವರಲ್ಲಿ ಇಲ್ಲ. ಮರುದಿನ ಬೆಳಿಗ್ಗೆಯೇ ಮಾರುತಿ ದೇವಸ್ಥಾನಕ್ಕೆ ಪತ್ನಿ ಪುತ್ರಿಯ ಜೊತೆ ಅವರು ಹೋಗಿ ಪೂಜೆ ಮಾಡಿಸಿದರೆನ್ನಿ.

ರಾಯರೆಡ್ಡಿ ಏಕೆ ಪದೇ ಪದೇ ಇಂತಹ ವಿವಾದ ಸೃಷ್ಟಿಸುತ್ತಾರೆ? ಕಳೆದ 2024ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಮುಖ್ಯಮಂತ್ರಿಯ ಆರ್ಥಿಕ ಮತ್ತು ರಾಜಕೀಯ ಸಲಹೆಗಾರರಾಗಿದ್ದರೂ ಕೂಡ, ಈ ಸರ್ಕಾರದಲ್ಲಿ ಅಭಿವೃದ್ಧಿಗೆ ದುಡ್ಡಿಲ್ಲ; 65 ಸಾವಿರ ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಕೊಡಲಾಗಿದೆ. ಅಭಿವೃದ್ಧಿಗೆ ದುಡ್ಡೇ ಇಲ್ಲ' ಎಂದು ಬಹಿರಂಗವಾಗಿ ಹೇಳಿ ಪ್ರತಿಪಕ್ಷಗಳಿಗೆ ಆಹಾರವಾಗಿದ್ದರು. ಸ್ವತಃ ಅಂದಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರೇ ರಾಯರೆಡ್ಡಿಯವರಿಗೆ ಮಂಗಳಾರತಿ ಮಾಡಿದ್ದರೆನ್ನಿ. ಭ್ರಷ್ಟಾಚಾರ ಹಾಸು ಹೊಕ್ಕಾಗಿದೆ; ಇದನ್ನು ತಪ್ಪಿಸಲು ಸಾಧ್ಯವಿಲ್ಲ’ ಎಂದು ಎಂದಿದ್ದರು. ನನಗೆ ಸರ್ಕಾರದ ಸೌಲಭ್ಯಗಳೇ ಬೇಡ.. ಭತ್ತೆ, ಮನೆ ಬಾಡಿಗೆ, ಕ್ಷೇತ್ರ ಭತ್ತೆ ಯಾವುದೂ ಬೇಡ ಎಂದು ಘೋಷಿಸಿಕೊಂಡವರು.. ವಿಧಾನ ಸಭೆ ಚುನಾವಣೆಯಲ್ಲಿ ಸೋತ ನಂತರ ಎಲ್ಲ ಹಿಂಬಾಕಿ ಕೊಡಿ ಎಂದು ವಿಧಾನಸಭಾ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಿದ್ದರು! ಆರು ಸಾರೆ ಶಾಸಕರಾಗಿ, ಎರಡು ಸಾರೆ ಮಂತ್ರಿಯಾಗಿರುವ ರಾಯರೆಡ್ಡಿ ಇಂತಹ ಹತ್ತಾರು ವಿವಾದಗಳನ್ನು ಎಳೆದುಕೊಂಡವರೇ.!

ಇನ್ನೂ ಸರ್ಕಾರ ಟೇಕ್‌ಆಫ್ ಆಗಿಲ್ಲ ಎನ್ನುವ ಟೀಕೆಗೆ ಇವೆಲ್ಲ ಇಂಬು ಕೊಡುವಂತಾಯ್ತಲ್ಲ… ಮಾಡಲು ಸಾಕಷ್ಟು ಕೆಲಸವಿದೆ. ಪರಿಹರಿಸಲು ಸಾಕಷ್ಟು ಸಂಘರ್ಷಗಳು ನಾಡಿನಲ್ಲಿವೆ. ರಾಜಕೀಯವಾಗಿ ಪರಚಿಕೊಳ್ಳಲು ಸಾಕಷ್ಟು ವಿಷಯಗಳಿವೆ. ಇವನ್ನು ಬಿಟ್ಟು ಇಂತಹ ಬಾಯಿಚಪಲದ ವರ್ತನೆ ಡಿಕೆ ಸರ್ಕಾರಕ್ಕೂ ತುಟ್ಟಿಯಾದೀತು ಅಲ್ಲವೇ!?