ಬೀಡ್(ಮಹಾರಾಷ್ಟ್ರ): ಹೆಣ್ಣುಮಗು ಜನಿಸಿದರೆ ಬೇಸರ ಪಡುವವರೇ ಹೆಚ್ಚಿರುವ ಈ ಸಮಾಜದಲ್ಲಿ, ಮಹಾರಾಷ್ಟ್ರ ಬೀಡ್ ಜಿಲ್ಲೆಯ ಪರ್ಲಿ ಪಟ್ಟಣದ ಕುಟುಂಬವೊಂದು ಹೆಣ್ಣುಮಗುವಿನ ಜನನವನ್ನು ಹಬ್ಬದಂತೆ ಆಚರಿಸುವ ಮೂಲಕ ಇಡೀ ಸಮಾಜಕ್ಕೆ ಮಾದರಿಯಾಗಿದೆ.
ದಹಿಫಳೆ ಕುಟುಂಬದಲ್ಲಿ ಬರೋಬ್ಬರಿ 200 ವರ್ಷಗಳ ಬಳಿಕ ಹೆಣ್ಣುಮಗುವೊಂದು ಜನಿಸಿದ್ದು, ಆಸ್ಪತ್ರೆಯಿಂದ ಆ ಮಗುವನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಭವ್ಯ ಮೆರವಣಿಗೆಯ ಮೂಲಕ ಮನೆಗೆ ಸ್ವಾಗತಿಸಲಾಗಿದೆ.
ಹೆಣ್ಣುಮಗುವಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಈ ಕುಟುಂಬದ ಕನಸು ಈಗ ಐದನೇ ತಲೆಮಾರಿನಲ್ಲಿ ನನಸಾಗಿದೆ. ಜನಿಸಿದ ಮುದ್ದಾದ ಮಗುವಿಗೆ ಕುಟುಂಬಸ್ಥರು ಪ್ರೀತಿಯಿಂದ ʻಗಾರ್ಗಿʼ ಎಂದು ನಾಮಕರಣ ಮಾಡಿದ್ದಾರೆ.






















