SK Home Ad
Home ಸಿನಿ ಮಿಲ್ಸ್ ಡಾ. ರಾಜ್‌ಕುಮಾರ್‌ ಬಳಿಕ ಸುದೀಪ್‌ ಕಿಚ್ಚು: ‘ದೇವರಾಯ’ನಾಗಿ ಅಬ್ಬರಿಸಲಿದ್ದಾರೆ ಅಭಿನಯ ಚಕ್ರವರ್ತಿ!

ಡಾ. ರಾಜ್‌ಕುಮಾರ್‌ ಬಳಿಕ ಸುದೀಪ್‌ ಕಿಚ್ಚು: ‘ದೇವರಾಯ’ನಾಗಿ ಅಬ್ಬರಿಸಲಿದ್ದಾರೆ ಅಭಿನಯ ಚಕ್ರವರ್ತಿ!

0
43

ಬೆಂಗಳೂರು: ಕಿಚ್ಚ ಸುದೀಪ್ ಜನ್ಮದಿನದ (ಸೆಪ್ಟೆಂಬರ್ 2) ಸಂಭ್ರಮದಲ್ಲಿರುವ ಕೋಟ್ಯಂತರ ಅಭಿಮಾನಿಗಳಿಗೆ ಅದ್ಭುತ ಉಡುಗೊರೆ ದೊರೆತಿದೆ. ನಟ ಸುದೀಪ್ ಮುಂದಿನ ಬಹುನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷೆಯ ಐತಿಹಾಸಿಕ ಪ್ರಾಜೆಕ್ಟ್ ‘ದೇವರಾಯ’ ಅಧಿಕೃತವಾಗಿ ಘೋಷಣೆಯಾಗಿದ್ದು, ಸಿನಿಪ್ರಿಯರ ಗಮನ ಸೆಳೆದಿದೆ. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಹಾಗೂ ಪ್ರಿಯಾ ಸುದೀಪ್ ಒಡೆತನದ ‘ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್’ ಜಂಟಿಯಾಗಿ ಈ ಬೃಹತ್ ಕ್ಯಾನ್ವಾಸ್‌ನ ಸಿನಿಮಾವನ್ನು ನಿರ್ಮಿಸಲು ಮುಂದಾಗಿವೆ.

ವಿಜಯನಗರ ಸಾಮ್ರಾಜ್ಯವನ್ನು ಸುವರ್ಣ ಯುಗಕ್ಕೆ ಕೊಂಡೊಯ್ದು, ಸಾಹಸ, ಚಾಣಾಕ್ಷ ಆಡಳಿತ ಹಾಗೂ ಸಾಹಿತ್ಯ-ಕಲೆಗಳ ಪೋಷಣೆಗೆ ಹೆಸರಾದ ಚಕ್ರವರ್ತಿ ಶ್ರೀ ಕೃಷ್ಣದೇವರಾಯರ ಪಾತ್ರದಲ್ಲಿ ಸುದೀಪ್ ಬಣ್ಣ ಹಚ್ಚಲಿದ್ದಾರೆ. ಈ ಹಿಂದೆ ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್, ಕೃಷ್ಣದೇವರಾಯರ ಪಾತ್ರವನ್ನು ಬೆಳ್ಳಿತೆರೆಯ ಮೇಲೆ ಅಜರಾಮರಗೊಳಿಸಿದ್ದರು. ಇದೀಗ ದಶಕಗಳ ಬಳಿಕ, ಇಂದಿನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅದ್ದೂರಿ ಮೇಕಿಂಗ್‌ನೊಂದಿಗೆ ಮೂಡಿಬರಲಿರುವ ಈ ಚಿತ್ರವು ಸುದೀಪ್ ಸಿನಿಪಯಣದಲ್ಲೇ ಅತ್ಯಂತ ದೊಡ್ಡ ಮೈಲಿಗಲ್ಲಾಗುವ ಎಲ್ಲ ಲಕ್ಷಣಗಳನ್ನೂ ಹೊಂದಿದೆ.

ಪ್ರಿಯಾ ಸುದೀಪ್ ಅರ್ಪಿಸುತ್ತಿರುವ ಈ ಚಿತ್ರಕ್ಕೆ ಟಿ.ಜಿ. ವಿಶ್ವಪ್ರಸಾದ್‌ ಹಾಗೂ ಕೃತಿ ಪ್ರಸಾದ್‌ ಬಂಡವಾಳ ಹೂಡುತ್ತಿದ್ದಾರೆ. ತೆಲುಗಿನಲ್ಲಿ ‘ಕಾರ್ತಿಕೇಯ 2’, ‘ಧಮಾಕಾ’, ‘ಬ್ರೋ’ ಹಾಗೂ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಅಂತಹ ಪ್ಯಾನ್-ಇಂಡಿಯಾ ಮತ್ತು ಬಿಗ್-ಬಜೆಟ್ ಚಿತ್ರಗಳನ್ನು ನಿರ್ಮಿಸಿ ಜನಪ್ರಿಯತೆ ಗಳಿಸಿರುವ ಪೀಪಲ್ ಮೀಡಿಯಾ ಫ್ಯಾಕ್ಟರಿ, ಇದೀಗ ಕನ್ನಡದಲ್ಲೂ ಭದ್ರವಾಗಿ ನೆಲೆವೂರಲು ಸಜ್ಜಾಗಿದೆ.

ಸದ್ಯಕ್ಕೆ ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಮೂಲಕ ಅಭಿಮಾನಿಗಳಲ್ಲಿ ರೋಮಾಂಚನ ಸೃಷ್ಟಿಸಿರುವ ಚಿತ್ರತಂಡ, ಈ ಬೃಹತ್ ಚಿತ್ರವನ್ನು ನಿರ್ದೇಶನ ಮಾಡುವುದು ಯಾರು ಎಂಬುದನ್ನು ಸದ್ಯಕ್ಕೆ ಗೌಪ್ಯವಾಗಿಟ್ಟಿದೆ. ಚಿತ್ರೀಕರಣ ಹಾಗೂ ತಾಂತ್ರಿಕ ಸಿದ್ಧತೆಗಳಿಗೆ ಹೆಚ್ಚಿನ ಸಮಯಾವಕಾಶ ಬೇಕಿರುವುದರಿಂದ, ‘ದೇವರಾಯ’ ಚಿತ್ರವನ್ನು 2027ರ ಡಿಸೆಂಬರ್‌ನಲ್ಲಿ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ತಂಡ ಯೋಜನೆ ರೂಪಿಸಿಕೊಂಡಿದೆ.