SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್ ಕನ್ನಡ ಸೀಸನ್ 13: ಧಾರಾವಾಹಿಗಳಿಂದ ದಿಢೀರ್ ಹೊರಬಂದ ತಾರೆಯರು: ಸೆಲೆಬ್ರಿಟಿಗಳ ಪಟ್ಟಿ ಬಹಿರಂಗ!

ಬಿಗ್ ಬಾಸ್ ಕನ್ನಡ ಸೀಸನ್ 13: ಧಾರಾವಾಹಿಗಳಿಂದ ದಿಢೀರ್ ಹೊರಬಂದ ತಾರೆಯರು: ಸೆಲೆಬ್ರಿಟಿಗಳ ಪಟ್ಟಿ ಬಹಿರಂಗ!

0
52

ಕನ್ನಡಿಗರ ನೆಚ್ಚಿನ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಸೀಸನ್ 13ರ ಅಗ್ನಿಪರೀಕ್ಷೆಗೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್ 6ರಿಂದ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಅದ್ಧೂರಿಯಾಗಿ ಪ್ರಸಾರವಾಗಲಿರುವ ಈ ಶೋ ಬಗ್ಗೆ ಪ್ರೇಕ್ಷಕರಲ್ಲಿ ಅಪಾರ ಕುತೂಹಲ ಮೂಡಿದೆ. ಈ ಬಾರಿಯ ಬಿಗ್ ಬಾಸ್ ಸೀಸನ್ 13ರಲ್ಲಿ ಮತ್ತೊಂದು ವಿಶೇಷತೆಯಿದ್ದು, ಪ್ರಸಿದ್ಧ ತಾರೆಯರ ಜೊತೆಗೆ ಜನಸಾಮಾನ್ಯರಿಗೂ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ.

ಹಾಗೇ ಬಿಗ್‌ಬಾಸ್‌ ಸೀಸನ್‌ 13ಕ್ಕೆ ಎಂಟ್ರಿ ನೀಡಲೂ ಜನ ಸಾಮಾನ್ಯರಿಗೆ ಅಗ್ನಿಪರೀಕ್ಷೆ ಯುದ್ಧ ಆರಂಭವಾಗಿದೆ. ಈಗ ಇನ್ನೂ ಉಳಿದ ಸ್ಪರ್ಧಿಗಳಲ್ಲಿ 3 ಜನ ಮಾತ್ರ ಕಾಂಮನರ್ಸ್‌ಗೆ ದೊಡ್ಮನೆಗೆ ಎಂಟ್ರಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಮೂವರನ್ನು ವೋಟಿಂಗ್‌ನಲ್ಲಿ ಇರಿಸಲಾಗಿದೆ. ಹಾಗೇ ದಿನಕ್ಕೆ ಒಬ್ಬ ಸ್ಪರ್ಧಿಗೆ ಕೇವಲ ಒಂದು ವೋಟ್‌ ಮಾಡಲು ಅವಕಾಶ ಇರುತ್ತದೆ.

ಎಲ್ಲರಲ್ಲೂ ಇರುವ ದೊಡ್ಡ ಪ್ರಶ್ನೆ ಈ ಬಾರಿ ಸೆಲೆಬ್ರಿಟಿಗಳು ಯಾರಾರು ಹೋಗುತ್ತಾರೆ ಎನ್ನುವುದು. ಈಗ ಈ ಕುತೂಹಲಕ್ಕೆ ಬ್ರೇಕ್‌ ಬಿದ್ದಿದೆ. ದೊಡ್ಡಮನೆ ಪ್ರವೇಶಿಸುವ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ಈಗಾಗಲೇ ಹಲವು ಪ್ರಮುಖ ಹೆಸರುಗಳು ಕೇಳಿಬರುತ್ತಿವೆ. ಗಗನಾ ಭಾರಿ, ಸುಶ್ಮಿತ್ ಜೈನ್, ಆಸಿಯಾ ಫಿರ್ದೋಸ್, ಅಮೋಘ ಆದಿತ್ಯ, ಯಶ್ವಂತ್‌ ಹಾಗೂ ಅಥರ್ವ್ ಅವರು ಈ ಬಾರಿಯ ಸೀಸನ್ 13ರ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಇದರ ಜೊತೆಗೆ ಕಿರುತೆರೆಯ ಹಲವು ಪ್ರಮುಖ ತಾರೆಯರು ತಮ್ಮ ಜನಪ್ರಿಯ ಧಾರಾವಾಹಿಗಳಿಂದ ದಿಢೀರ್ ಹೊರಬಂದಿರುವುದು ಈ ಸಂಶಯಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಕಿರುತೆರೆ ನಟ-ನಟಿಯರು ದಿಢೀರನೆ ಧಾರಾವಾಹಿಗಳಿಂದ ಬಿಡುಗಡೆ ಪಡೆದಿರುವುದು ಅವರು ಬಿಗ್ ಬಾಸ್ ಮನೆಗೆ ಪ್ರವೇಶಿಸುತ್ತಿದ್ದಾರೆ ಎಂಬ ವದಂತಿಯನ್ನು ಹೆಚ್ಚಿಸಿದೆ.

ಇದೀಗ ಬಿಗ್ ಬಾಸ್ ಸೀಸನ್ 13 ಆರಂಭದ ಹೊಸ್ತಿಲಲ್ಲಿ ನಿಂತಿದ್ದು, ಸ್ಪರ್ಧಿಗಳ ಅಂತಿಮ ಅಗ್ನಿಪರೀಕ್ಷೆಗೆ ವೇದಿಕೆ ಸಿದ್ಧವಾಗಿದೆ. ಯಾರಿಗೆಲ್ಲ ದೊಡ್ಮನೆಯಲ್ಲಿ ಉಳಿದುಕೊಳ್ಳುವ ಭಾಗ್ಯ ಸಿಗಲಿದೆ ಮತ್ತು ಜನಸಾಮಾನ್ಯರ ಜೊತೆ ತಾರೆಯರ ಆಟ ಹೇಗಿರಲಿದೆ ಎಂಬುದನ್ನು ವೀಕ್ಷಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸೆಪ್ಟೆಂಬರ್ 6ರಂದು ಈ ಎಲ್ಲಾ ಕುತೂಹಲಗಳಿಗೆ ತೆರೆ ಬೀಳಲಿದೆ.