‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಅಭಿಮಾನಿಗಳಿಗೆ ಬಿಗ್ ಸರ್‌ಪ್ರೈಸ್ ಸಿಕ್ಕಿದೆ. ಬಹುನಿರೀಕ್ಷಿತ ‘ಬಿಲ್ಲ ರಂಗ ಬಾಷಾ’ (BRB) ಸಿನಿಮಾದ ಸ್ಪೆಷಲ್ ಪೋಸ್ಟರ್ ಬಿಡುಗಡೆಯಾಗುವ ಮೂಲಕ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಬ್ಲಾಕ್‌ಬಸ್ಟರ್ ‘ವಿಕ್ರಾಂತ್ ರೋಣ’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ನಟ ಸುದೀಪ್ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಮತ್ತೆ ಈ ಚಿತ್ರಕ್ಕಾಗಿ ಜೋಡಿಯಾಗಿದ್ದಾರೆ. ಇದೀಗ ಅನಾವರಣಗೊಂಡಿರುವ ಹೊಸ ಪೋಸ್ಟರ್ ಅತ್ಯಂತ ರೋಮಾಂಚಕವಾಗಿದ್ದು, ಸಿನಿಮಾ ವಿಶ್ವದರ್ಜೆಯ ಮೇಕಿಂಗ್ ಒಳಗೊಂಡಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿ ಒದಗಿಸಿದೆ ಎನ್ನಲಾಗುತ್ತಿದೆ.
ಈ ಬಿಗ್ ಬಜೆಟ್ ಸಿನಿಮಾಗಾಗಿ ಬೆಂಗಳೂರಿನಲ್ಲಿ ಬೃಹತ್ ಹಾಗೂ ಅದ್ಧೂರಿ ಸೆಟ್ ನಿರ್ಮಾಣ ಮಾಡಲಾಗಿದ್ದು, ಪ್ರಸ್ತುತ ಚಿತ್ರೀಕರಣ ಭರದಿಂದ ಸಾಗುತ್ತಿದೆ. ತೆಲುಗಿನ ಪ್ಯಾನ್-ಇಂಡಿಯಾ ಹಿಟ್ ಸಿನಿಮಾ ‘ಹನುಮಾನ್’ ಖ್ಯಾತಿಯ ಪ್ರೈಮ್ ಶೋ ಎಂಟರ್‌ಟೈನ್‌ಮೆಂಟ್‌ನ ಕೆ. ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.
ಚಿತ್ರತಂಡದ ಯೋಜನೆಯಂತೆ 2027ರ ಮಾರ್ಚ್ ವೇಳೆಗೆ ಸಿನಿಮಾದ ಮೊದಲ ಟೀಸರ್ ಬಿಡುಗಡೆಯಾಗಲಿದೆ. ತದನಂತರ 2027ರ ಜುಲೈ ಮತ್ತು ಸೆಪ್ಟೆಂಬರ್ ನಡುವೆ ಟ್ರೇಲರ್ ಹಾಗೂ ಹಾಡುಗಳು ಒಂದೊಂದಾಗಿ ಅನಾವರಣಗೊಳ್ಳಲಿವೆ. ಎಲ್ಲಾ ಅಂದುಕೊಂಡಂತೆ ಆದ್ರೆ, 2027ರ ವರ್ಷಾಂತ್ಯದಲ್ಲಿ ‘ಬಿಲ್ಲ ರಂಗ ಬಾಷಾ’ ಚಿತ್ರ ವಿಶ್ವದಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.





















