ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಪ್ರಸಿದ್ಧ ತಮಿಳು ನಿರ್ದೇಶಕ ಹಾಗೂ ನಟ ಪಿ. ಸಮುದ್ರಖನಿ ಮುಂಬರುವ ‘ಸ್ಕೂಲ್ ಬಸ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂದು ಸೆಪ್ಟೆಂಬರ್ 2ರಂದು ಸುದೀಪ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಈ ವಿಚಾರವನ್ನು ಅಧಿಕೃತವಾಗಿ ಹಂಚಿಕೊಂಡಿದೆ. ಪ್ರಸಿದ್ಧ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅರ್ಪಿಸುತ್ತಿರುವ ಈ ಸಿನಿಮಾ ಈಗಿನಿಂದಲೇ ಭಾರಿ ನಿರೀಕ್ಷೆ ಮೂಡಿಸಿದೆ.
ಹಾಗೇ ಇತ್ತೀಚಿಗೆ ಬಿಡುಗಡೆಯಾಗಿರುವ ʻಕೆವಿಎನ್ʼ ನಿರ್ಮಾಣದ ಟಾಕ್ಸಿಕ್ ಸಿನಿಮಾ ಕನ್ನಡಿಗರಿಗೆ ಬಹಳ ಕುತೂಹಲ ಮೂಡಿಸಿತ್ತು. ಅದೇ ರೀತಿ ಆಗಸ್ಟ್ 26ರಂದು ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಅಂತರಾಷ್ಟ್ರೀಯ ಮಟ್ಟದ ಚಿತ್ರ, ಐದು ನಟಿಯರನ್ನ ಒಳಗೊಂಡು ಮಾಡಿರು ಸಿನಿಮಾ ಟಾಕ್ಸಿಕ್ ಕನ್ನಡಿಗರಲ್ಲಿ ಸಂಭ್ರಮದ ಮನೆ ಮಾಡಿತ್ತು. ಹಾಗೇ ಇದೀಗ ‘ಅಭಿನಯ ಚಕ್ರವರ್ತಿ’ ಕಿಚ್ಚ ‘ಸ್ಕೂಲ್ ಬಸ್’ಎಂಬ ಮತ್ತೋಂದು ಅಂತರಾಷ್ಟ್ರೀಯ ಮಟ್ಟದ ಸಿನಿಮಾ ನೀಡಲು ಮುಂದಾಗಿದ್ದಾರೆ.
‘ನಾಡೋಡಿಗಲ್’, ‘ಅಪ್ಪ’ ಹಾಗೂ ‘ವಿನೋದಯ ಸಿತಂ’ ರೀತಿಯ ಕಂಟೆಂಟ್ ಆಧಾರಿತ ಸಿನಿಮಾಗಳನ್ನು ನೀಡಿರುವ ಪಿ. ಸಮುದ್ರಖನಿ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುವುದರ ಜೊತೆಗೆ ನಟಿಸುತ್ತಿದ್ದಾರೆ. 22 ಮಕ್ಕಳ ಜವಾಬ್ದಾರಿ ಹೊತ್ತ ಶಾಲಾ ಬಸ್ ಚಾಲಕನ ಸುತ್ತ ಸಾಗುವ ಈ ಕಥೆಯು, ಮಕ್ಕಳ ಭಾವನೆಗಳು, ಪೋಷಕರ ಕಾಳಜಿ ಹಾಗೂ ಶಿಕ್ಷಕರ ಬದುಕಿನ ವಿವಿಧ ಮಗ್ಗುಲುಗಳ ಮೇಲೆ ಬೆಳಕು ಚೆಲ್ಲಲಿದೆ.
ನಿರ್ದೇಶಕ ಸಮುದ್ರಖನಿ ಹೇಳಿದ ವಿಶಿಷ್ಟ ಕಥಾಹಂದರ ಹಾಗೂ ಗ್ಲಿಂಪ್ಸ್ ವೀಕ್ಷಿಸಿದ ತಕ್ಷಣವೇ ಕಿಚ್ಚ ಸುದೀಪ್ ಈ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಹಿಂದೆ ‘ಕೋಟಿಗೊಬ್ಬ 2’ ಹಾಗೂ ‘ಪುಲಿ’ ಸಿನಿಮಾಗಳ ಮೂಲಕ ಬಹುಭಾಷಾ ಪ್ರೇಕ್ಷಕರನ್ನು ಗೆದ್ದಿದ್ದ ಸುದೀಪ್, ಕಥೆಯ ಆಕರ್ಷಕ ವಸ್ತುವಿನಿಂದಾಗಿ ಈ ಪ್ರಾಜೆಕ್ಟ್ ಒಪ್ಪಿಕೊಂಡಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
ಲೆನಿನ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಡಾ. ಪಿ. ಲೆನಿನ್ ಮುತ್ತುರಾಜ್ ಹಾಗೂ ಡಾ. ಎ. ಟಿ. ಆಶಾ ಲೆನಿನ್ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸ್ಯಾಮ್ ಸಿ.ಎಸ್ ಸಂಗೀತ ಮತ್ತು ಎನ್. ಕೆ. ಏಕಾಂಬರಂ ಛಾಯಾಗ್ರಹಣ ಚಿತ್ರಕ್ಕಿದೆ. ಯೂನಿವರ್ಸಲ್ ಕಥಾಹಂದರ ಹೊಂದಿರುವ ‘ಸ್ಕೂಲ್ ಬಸ್’ ಚಿತ್ರವನ್ನು ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್ ಹಾಗೂ ಚೈನೀಸ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ.





















