ದಾಂಡೇಲಿ (ಸಂ.ಕ. ಸಮಾಚಾರ) : ದಾಂಡೇಲಿ ಸುತ್ತಮುತ್ತಲಿನ ಕಾಡಂಚಿನ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ರಾತ್ರಿವೇಳೆ ಚಿರತೆಗಳ ಓಡಾಟ ಸಾಮಾನ್ಯವಾಗಿದ್ದು, ಇದುವರೆಗೆ ಮನುಷ್ಯರ ಮೇಲೆ ದಾಳಿ ನಡೆಸಿದ ವರದಿಗಳಿಲ್ಲ. ಜನರನ್ನು ಕಂಡಾಗ ಚಿರತೆಗಳು ತಮ್ಮ ದಾರಿಯಲ್ಲಿ ತೆರಳುವುದು ಸಾಮಾನ್ಯವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇತ್ತೀಚೆಗೆ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸುಲಭ ಬೇಟೆಗಾಗಿ ಚಿರತೆಗಳು ಕಾಡಂಚಿನ ಪ್ರದೇಶಗಳಿಗೆ ಬಂದು ನಾಯಿಗಳನ್ನು ಬೇಟೆಯಾಡಿ ಕಾಡಿನತ್ತ ಮರಳುತ್ತಿವೆ ಎನ್ನಲಾಗಿದೆ. ಹೀಗಾಗಿ ಚಿರತೆಗಳ ಓಡಾಟವನ್ನು ತಡೆಯುವುದಕ್ಕಿಂತ ಮಾನವ–ವನ್ಯಜೀವಿ ಸಂಘರ್ಷಕ್ಕೆ ಅವಕಾಶವಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಅರಣ್ಯ ಇಲಾಖೆ ಈಗಾಗಲೇ ಗ್ರಾಮಸ್ಥರ ಸಭೆ ನಡೆಸಿ ಹಲವು ಮುನ್ನೆಚ್ಚರಿಕಾ ಸೂಚನೆಗಳನ್ನು ನೀಡಿದ್ದು, ರಾತ್ರಿ ವೇಳೆ ಒಬ್ಬರೇ ಸಂಚರಿಸದಿರುವುದು, ಟಾರ್ಚ್ ಬಳಸುವುದು, ಮಕ್ಕಳು ಹಾಗೂ ಸಾಕುಪ್ರಾಣಿಗಳನ್ನು ಸುರಕ್ಷಿತವಾಗಿಡುವುದು, ಚಿರತೆ ಕಂಡಾಗ ಹಿಂಬಾಲಿಸದೆ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಿದೆ.
ಚಿರತೆ ಕಾಣಿಸಿಕೊಂಡ ಪ್ರತಿಯೊಂದು ಘಟನೆಯನ್ನು ಅತಿರಂಜಿತವಾಗಿ ವರದಿ ಮಾಡಿ ಜನರಲ್ಲಿ ಭೀತಿ ಮೂಡಿಸುತ್ತಿರುವ ಕೆಲವು ಯೂಟ್ಯೂಬ್ ವರದಿಗಳ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿರತೆ ಕಂಡರೆ ಗಾಬರಿಯಾಗದೆ, ಅರಣ್ಯ ಇಲಾಖೆಯ ಮಾರ್ಗಸೂಚಿ ಪಾಲಿಸಿ, ವದಂತಿಗಳಿಗೆ ಕಿವಿಗೊಡದೆ ಜಾಗರೂಕತೆ ವಹಿಸುವುದು ಅಗತ್ಯ ಎಂದು ಅವರು ಮನವಿ ಮಾಡಿದ್ದಾರೆ.
ಅದೇ ವೇಳೆ, ಕಾಡಂಚಿನ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ಸಂಖ್ಯೆ ಹಾಗೂ ಕಸ ನಿರ್ವಹಣೆಯತ್ತ ಸ್ಥಳೀಯ ಆಡಳಿತ ಗಮನಹರಿಸಬೇಕು. ಚಿರತೆಗಳ ಓಡಾಟ ತಡೆಯುವುದಕ್ಕಿಂತ ಅವು ಜನವಸತಿ ಪ್ರದೇಶಗಳಿಗೆ ಆಕರ್ಷಿತರಾಗದಂತೆ ಪರಿಸರ ನಿರ್ವಹಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















