SK Home Ad
Home ನಮ್ಮ ಜಿಲ್ಲೆ ಧಾರವಾಡ ಮ್ಯಾಟ್ ಗ್ಯಾಂಬ್ಲಿಂಗ್ ದಂಧೆಕೋರರಿಗೆ ಖಾಕಿ ಶ್ರೀರಕ್ಷೆ?

ಮ್ಯಾಟ್ ಗ್ಯಾಂಬ್ಲಿಂಗ್ ದಂಧೆಕೋರರಿಗೆ ಖಾಕಿ ಶ್ರೀರಕ್ಷೆ?

0
6

ಹರ್ಷ ಕುಲಕರ್ಣಿ
ಹುಬ್ಬಳ್ಳಿ: ಕಾನೂನು ಸುವ್ಯವಸ್ಥೆ ಕಾಪಾಡುವವರ ಕಿರಿಕಿರಿಗೆ ಬೇಸತ್ತು ದೂರದ ಗೋವಾ ರಾಜ್ಯ ಸೇರಿರುವ ಕ್ರಿಕೆಟ್ ಬುಕ್ಕಿಗಳು, ಓಸಿ ಕುಳಗಳು ಒಂದೆಡೆಯಾದರೆ, ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯನ್ನು ಮಿನಿ ಗೋವಾ ಮಾಡಲು ಹೊರಟಿರುವ ದಂಧೆಕೋರರಿಗೆ ಸದ್ದಿಲ್ಲದೆ ಸಹಕಾರ ನೀಡುತ್ತಿರುವ ಖಾಕಿ ಗುಂಪು ಮತ್ತೊಂದೆಡೆ.

ಗೋಕುಲ ರಸ್ತೆಯ ಗಾಂಧಿನಗರದ ಎಂಐಜಿ ಮನೆ ನಂ. 37ರ ಮೊದಲ ಮಹಡಿಯಲ್ಲಿ ಕಳೆದ ಎರಡು ತಿಂಗಳುಗಳಿಂದ ಗೋವಾ ಕ್ಯಾಸಿನೋ ಮಾದರಿಯಲ್ಲಿ ಮ್ಯಾಟ್ ಗ್ಯಾಂಬ್ಲಿಂಗ್ ಜೂಜಾಟ ನಡೆಯುತ್ತಿದ್ದ ವಿಚಾರ ಗೋಕುಲ ರಸ್ತೆಯ ಪೊಲೀಸರಿಗೆ ಗೊತ್ತೇ ಇರಲಿಲ್ಲವಂತೆ. ಅದಾಗ್ಯೂ ಅಕ್ರಮದ ವಾಸನೆ ಹಿಡಿದ ವಿದ್ಯಾನಗರ ಪೊಲೀಸರ ತಂಡ ಆ. 23 ರಂದು ಮಧ್ಯರಾತ್ರಿ ದಂಧೆಕೋರರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದರು. ಇದು ಇಷ್ಟಕ್ಕೇ ಸೀಮಿತವಾಗಿದ್ದರೆ ಪೊಲೀಸರ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗುತ್ತಿತ್ತು. ಆದರೆ, ಈ ಪ್ರಕರಣದಲ್ಲಿ ಹಾಗಾಗಲಿಲ್ಲ.

ಕ್ಯಾಸಿನೋ ಮಾದರಿಯಲ್ಲಿ ಹೌಸ್ ಗ್ಯಾಂಬ್ಲಿಂಗ್ ಆಡುತ್ತಿದ್ದವರನ್ನು ಬಂಧಿಸಿದ ಪೊಲೀಸರ ತಂಡ ಅವರನ್ನು ಗೋಕುಲ ರೋಡ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಆದರೆ, ದೊಡ್ಡವರ ಒತ್ತಡಕ್ಕೆ ಮಣಿದ ಪೊಲೀಸರು, ಬಿಎಸ್‌ಎಸ್ ಕಾಯ್ದೆಯ ಪ್ರಕಾರ ನಾನ್ ಬೇಲಬಲ್ ಆಗಿರುವ ಕಸಿನೋ ಮಾದರಿಯ ಗೌಸ್ ಗ್ಯಾಂಬ್ಲಿಂಗ್ ಪ್ರಕರಣವನ್ನು ಕೆಪಿ ಆಕ್ಟ್ 142/2026 ಕಲಂ 79, 80ರ ಅನ್ವಯ ದಾಖಲಿಸಿಕೊಂಡು ರಾತ್ರೋರಾತ್ರಿ ಸ್ಟೇಷನ್ ಬೇಲ್ ನೀಡಿ ಆರೋಪಿಗಳನ್ನು ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಅಲ್ಲದೆ, ಗ್ಯಾಂಬ್ಲಿಂಗ್‌ಗೆ ಬಳಕೆಯಾಗುತ್ತಿದ್ದ ಉಪಕರಣವನ್ನೂ ಕೊಟ್ಟು ಕಳುಹಿಸಿದ್ದು ಅನುಮಾನಗಳಿಗೆ ಕಾರಣವಾಗಿದೆ.

ಯಾವುದಕ್ಕೂ ಇರಲಿ ಎಂಬಂತೆ ಇಸ್ಪೀಟ್ ಆಟದಂತಹ ಸಣ್ಣ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಿಂಗ್‌ಪಿನ್ ಅಮೀತ ಲದ್ವಾ ಹೆಸರನ್ನು ಮಾತ್ರ ಎಫ್‌ಐಆರ್‌ನಲ್ಲಿ ಸೇರಿಸಲಾಗಿದ್ದು, ಅಕ್ರಮ ದಂಧೆಯ ಅಸಲಿ ಕಿಂಗ್ ಪಿನ್‌ಗಳಾದ ಪಾಲದಾರರಾದ ರಾಹುಲ, ತುಳಜಪ್ಪ ಹಾಗೂ ವಿನಯ ಎಂಬುವವರ ಹೆಸರನ್ನು ಎಫ್‌ಐಆರ್ ನಿಂದ ದೂರ ಉಳಿಸಿದ್ದೇಕೆ ಎಂಬ ಅನುಮಾನಗಳೂ ದಟ್ಟವಾಗಿವೆ.

ಸಣ್ಣ ಪುಟ್ಟ ವಿಷಯಗಳಿಗೂ ಸುದ್ದಿಗೋಷ್ಠಿ ನಡೆಸಿ, ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದ ಹು-ಧಾ ಮಹಾನಗರ ಪೊಲೀಸ್ ಆಯುಕ್ತರು, ಗೋವಾ ಕ್ಯಾಸಿನೋ ಮಾದರಿಯ ಹೌಸ್ ಗ್ಯಾಂಬ್ಲಿಂಗ್‌ನಂತಹ ದೊಡ್ಡ ಪ್ರಕರಣ ಬೆಳಕಿಗೆ ಬಂದರೂ ಮೌನಕ್ಕೆ ಜಾರಿರುವುದೇಕೆ? ಅವರ ಮೇಲೆ ಯಾರ ಒತ್ತಡವಿದೆ ಎಂಬುದು ಅಸ್ಪಷ್ಟ. ಅಲ್ಲದೆ, ಬೇರೆ ವಿಭಾಗದ ಪೊಲೀಸ್ ಅಧಿಕಾರಿಗಳ ಕಣ್ಣಿಗೆ ಕಂಡಿರುವ ಅಕ್ರಮ ದಂಧೆ, ಗೋಕುಲ ರೋಡ್ ಪೊಲೀಸರಿಗೇಕೆ ತಿಳಿಯಲಿಲ್ಲ ಎಂಬ ಹಲವು ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ಕಾಟಾಚಾರಕ್ಕೆ ಪ್ರಕರಣ: ಕಾಟಾಚಾರಕ್ಕೆ ಪ್ರಕರಣ ದಾಖಲು ಮಾಡಿಕೊಂಡಿರುವ ಗೋಕುಲ ರಸ್ತೆ ಪೊಲೀಸರು, ಆಟವಾಡಲು ಬಂದಿದ್ದ ವಿನಯ ಕಬಾಡೆ, ಹನೀಫ್ ಬಿಜಾಪುರ್, ಕೃಷ್ಣಾ ಪೋಳ್, ಅಕ್ಷಯ ಕಾಮಕರ್, ನಿತಿನ್ ನಾಕೋಡ್, ಸುರೇಶ ತಲಪಾಟಿ, ಸುಮಿತ್ ಮಿಸ್ಕಿನ್, ಗುರುಸಿದ್ದಪ್ಪ ಶಲ್ಲಿಕೇರಿ, ಆದಿತ್ಯ ಹಬೀಬ್, ಅಸ್ಲಂ ಲೋಕಾಪಲ್ಲಿ, ಕಿಶನ್ ಲದ್ವಾ, ರಾಜೇಶ ಮೋತಕುರಿ, ಲೆನ್ನಿ ದಮ್ಮು ಹಾಗೂ ರವಿ ಹಬೀಬ್ ಸೇರಿ 16 ಜನರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. ಗೋವಾ ಕ್ಯಾಸಿನೋ ಮಾದರಿಯಲ್ಲಿ ಮ್ಯಾಟ್ ಗ್ಯಾಂಬ್ಲಿಂಗ್ ಜೂಜು ಸಂಪೂರ್ಣ ಕ್ಯಾಶ್ ಲೆಸ್ ಆಗಿದ್ದರೂ, ಆಟವಾಡಲು ಬಂದಿದ್ದ 16 ಜನರ ಬಳಿಯಿಂದ ಸುಮಾರು 40,400 ರೂ. ಹಣವನ್ನು ವಶಪಡಿಸಿಕೊಂಡಿರುವ ಪೊಲೀಸರು, ಆರೋಪಿಗಳಿಂದ ವಶಪಡಿಸಿಕೊಂಡ ಮೊಬೈಲ್ ಫೋನ್, ವಾಹನಗಳ ಮಾಹಿತಿಯನ್ನು ಎಫ್‌ಐಆರ್‌ನಲ್ಲಿ ದಾಖಲಿಸಿಲ್ಲ.