SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ನಕಲಿ ದಾಖಲೆ ಸೃಷ್ಟಿಸಿ ಭೂಖರೀದಿ: ಸಿದ್ದಿಕ್ ಖಾನ್ ಮನೆಗಳ ಮೇಲೆ ಇಡಿ ದಾಳಿ

ನಕಲಿ ದಾಖಲೆ ಸೃಷ್ಟಿಸಿ ಭೂಖರೀದಿ: ಸಿದ್ದಿಕ್ ಖಾನ್ ಮನೆಗಳ ಮೇಲೆ ಇಡಿ ದಾಳಿ

0
72

ಕಾರವಾರ: ನಕಲಿ ದಾಖಲೆ ಸೃಷ್ಟಿಸಿ ಭೂಮಿ ಖರೀದಿ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಗೋವಾ ಮೂಲದ ಉದ್ಯಮಿ ಸುಲೇಮಾನ್ ಖಾನ್ ಯಾನೆ ಸಿದ್ದಿಕ್ ಖಾನ್‌ಗೆ ಸೇರಿದ ಕಾರವಾರದ ನಾಲ್ಕು ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಕಾರವಾರದ ಕೋಡಿಬಾಗದಲ್ಲಿರುವ ಖಾಸಗಿ ಅಪಾರ್ಟ್ಮೆಂಟ್‌ನಲ್ಲಿರುವ ನಾಲ್ಕು ಪ್ಲ್ಯಾಂಟ್‌ಗಳ ಮೇಲೆ ಗೋವಾದಿಂದ ಆಗಮಿಸಿದ ಇಡಿ ಅಧಿಕಾರಿಗಳ ತಂಡ ಶೋಧ ನಡೆಸಿದೆ. ಆಸ್ತಿ ಖರೀದಿ ಹಾಗೂ ಹಣದ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗಿದೆ.

ಮೂಲತಃ ಶಿವಮೊಗ್ಗದವನೆಂದು ಹೇಳಲಾಗಿರುವ ಸುಲೇಮಾನ್ ಖಾನ್ ಯಾನೆ ಸಿದ್ದಿಕ್ ಖಾನ್ ಸುಮಾರು ಐದು ವರ್ಷ ಕಾರವಾರದಲ್ಲಿ ನೆಲೆಸಿದ್ದ. ಬಳಿಕ ಗೋವಾಕ್ಕೆ ಸ್ಥಳಾಂತರಗೊಂಡಿದ್ದ. ಕಾರವಾರದಲ್ಲಿ ಆತನ ಕುಟುಂಬ ನೆಲೆಸಿತ್ತು.

ಗೋವಾದಲ್ಲಿ ಮೃತರ ಆಸ್ತಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ ಆರೋಪ ಆತನ ಮೇಲಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಗೋವಾ ಎಸ್‌ಐಟಿ 2024ರಲ್ಲಿ ಆತನನ್ನು ಬಂಧಿಸಿತ್ತು. ಬಳಿಕ ಜೈಲಿನಿಂದ ಪರಾರಿಯಾಗಿದ್ದ ಆತನನ್ನು ಕೇರಳದಲ್ಲಿ ಬಂಧಿಸಲಾಗಿತ್ತು.

ಎಸ್‌ಐಟಿ ಅಧಿಕಾರಿಗಳು ಕಾರವಾರಕ್ಕೆ ಆಗಮಿಸಿ ಆತನಿಗೆ ಸೇರಿದ ಫ್ಲಾಟ್‌ಗಳನ್ನು ಸೀಜ್ ಮಾಡಿದ್ದರು. ಈ ಪ್ರಕರಣವನ್ನು ಪ್ರಸಕ್ತ ವರ್ಷದ ಜುಲೈನಲ್ಲಿ ಇಡಿ ತನಿಖೆಗೆ ಕೈಗೆತ್ತಿಕೊಂಡಿದ್ದು, ಸಿದ್ದಿಕ್ ಖಾನ್‌ನನ್ನು ಬಂಧಿಸಿತ್ತು.

ಅಕ್ರಮ ಹಣ ವರ್ಗಾವಣೆ ಮೂಲಕ ಸುಮಾರು 300 ಕೋಟಿ ಮೌಲ್ಯದ 25 ಹೆಕ್ಟೇರ್ ಭೂಮಿಯನ್ನು ಖರೀದಿಸಿರುವ ಆರೋಪದ ಹಿನ್ನೆಲೆಯಲ್ಲಿ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.