ವಿಟ್ಲ: ಸಾರ್ವಜನಿಕರ ಅಪಾರ ಶ್ರಮ ಮತ್ತು ಸಹಕಾರದೊಂದಿಗೆ ಇತ್ತೀಚೆಗಷ್ಟೇ ಸುವ್ಯವಸ್ಥಿತವಾಗಿ ದುರಸ್ತಿ ಕಂಡಿದ್ದ ವಿಟ್ಲದ ಐತಿಹಾಸಿಕ ‘ಕೋಟಿಕೆರೆ’ಯಲ್ಲೀಗ ಘೋರ ದುರಂತವೊಂದು ಸಂಭವಿಸಿದೆ.
ನಿತ್ಯದಂತೆ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಾಡುತ್ತಿದ್ದ ಯುವ ಬ್ಯಾಂಕ್ ಉದ್ಯೋಗಿಯೊಬ್ಬರು ಏಕಾಏಕಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಆಘಾತಕಾರಿ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ವಿಟ್ಲ ಕಸಬಾ ಗ್ರಾಮದ ಗಾಳಿಹಿತ್ತಿಲು ನಿವಾಸಿ, ಶಾಲಾ ರಸ್ತೆಯ ‘ಅರ್ಚನಾ ಟೈಲರ್ಸ್’ ಮಾಲಿಕ ವೀರಪ್ಪ ಗೌಡರ ಪುತ್ರ, DCC ಬ್ಯಾಂಕ್ ಕನ್ಯಾನ ಶಾಖೆಯ ಉದ್ಯೋಗಿ ಲಿತಿನ್ (30) ಮೃತಪಟ್ಟ ದುರ್ದೈವಿ.
ಘಟನೆಯ ವಿವರ: ಲಿತಿನ್ ಅವರು ಎಂದಿನಂತೆ ತಮ್ಮ ಸ್ನೇಹಿತರೊಂದಿಗೆ ಬೆಳಿಗ್ಗೆ ಕೋಟಿಕೆರೆಗೆ ಈಜಾಡಲು ತೆರಳಿದ್ದರು. ಒಂದಷ್ಟು ಹೊತ್ತು ಎಲ್ಲರೊಂದಿಗೆ ನಗುನಗುತ್ತಾ ಈಜಾಡುತ್ತಿದ್ದ ಲಿತಿನ್, ಇದ್ದಕ್ಕಿದ್ದಂತೆ ಕೆರೆಯಲ್ಲಿ ಕಣ್ಮರೆಯಾಗಿದ್ದರು. ಇದನ್ನು ಕಂಡು ತಕ್ಷಣವೇ ಜಾಗರೂಕರಾದ ಜೊತೆಯಲ್ಲಿದ್ದ ಈಜುಗಾರರು ಕೆರೆಯ ತಳಭಾಗದಲ್ಲಿ ಹುಡುಕಾಟ ನಡೆಸಿ, ಅವರನ್ನು ಮೇಲಕ್ಕೆತ್ತಿದ್ದಾರೆ. ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ, ಅಷ್ಟರಲ್ಲಾಗಲೇ ಲಿತಿನ್ ಜೀವ ಪಕ್ಷಿ ಹಾರಿಹೋಗಿತ್ತು.
ಈಜಾಡುತ್ತಿರುವಾಗ ಸಂಭವಿಸಿದ ತೀವ್ರ ಸ್ವರೂಪದ ಹೃದಯಾಘಾತವೇ ಈ ಸಾವಿಗೆ ಕಾರಣವೆಂದು ಜೊತೆಯಲ್ಲಿದ್ದವರು ಶಂಕಿಸಿದ್ದು, ಮೃತದೇಹವನ್ನು ಪ್ರಸ್ತುತ ವಿಟ್ಲ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ದುರಸ್ತಿ ಬೆನ್ನಲ್ಲೇ ಆವರಿಸಿದ ಶೋಕ: ಕೆಲವು ಸಮಯದ ಹಿಂದಷ್ಟೇ ವಿಟ್ಲದ ಈ ಐತಿಹಾಸಿಕ ಕೋಟಿಕೆರೆಯನ್ನು ಊರವರ ಸಹಕಾರದೊಂದಿಗೆ ಜೀರ್ಣೋದ್ಧಾರ ಹಾಗೂ ದುರಸ್ತಿಗೊಳಿಸಲಾಗಿತ್ತು. ಕೆರೆ ಹೊಸ ಕಳೆ ಪಡೆದುಕೊಂಡ ಸಂಭ್ರಮದಲ್ಲಿದ್ದ ವಿಟ್ಲದ ಜನತೆಗೆ, ಅದೇ ಕೋಟಿಕೆರೆ ಇಂದು ಒಬ್ಬ ಭರವಸೆಯ ಯುವಕನ ಬಲಿತೆಗೆದುಕೊಂಡಿರುವುದು ತೀವ್ರ ಆಘಾತ ಉಂಟುಮಾಡಿದೆ.
ಮೃತ ಲಿತಿನ್ ಅವರ ಪತ್ನಿ ಹರ್ಷಿತಾ ಅವರು ವಿಟ್ಲದ ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೃತರು ತಂದೆ, ತಾಯಿ, ಪತ್ನಿ, LKGಯ ಪುಟ್ಟ ಮಗಳು ಹಾಗೂ ಸಹೋದರಿಯನ್ನು ಅಗಲಿದ್ದು, ಲಿತಿನ್ ಅವರ ಅಕಾಲಿಕ ಸಾವು ಇಡೀ ವಿಟ್ಲ ಪರಿಸರವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.






















