SK Home Ad
Home ನಮ್ಮ ಜಿಲ್ಲೆ ದಾವಣಗೆರೆ ವಾರ್ಡನ್ ಬಟ್ಟೆ ಬಿಚ್ಚಿಸಿದ ಆರೋಪ: ನೊಂದ ವಿದ್ಯಾರ್ಥಿ ಹಾಸ್ಟೆಲ್‌ನಿಂದ ನಾಪತ್ತೆ, 24 ಗಂಟೆಯೊಳಗೆ ಸುರಕ್ಷಿತ ಪತ್ತೆ

ವಾರ್ಡನ್ ಬಟ್ಟೆ ಬಿಚ್ಚಿಸಿದ ಆರೋಪ: ನೊಂದ ವಿದ್ಯಾರ್ಥಿ ಹಾಸ್ಟೆಲ್‌ನಿಂದ ನಾಪತ್ತೆ, 24 ಗಂಟೆಯೊಳಗೆ ಸುರಕ್ಷಿತ ಪತ್ತೆ

0
133

ದಾವಣಗೆರೆ: ಶಾಲಾ ಪ್ರಾರ್ಥನೆ ವೇಳೆ ಬೇರೊಬ್ಬ ವಿದ್ಯಾರ್ಥಿಯ ಬಟ್ಟೆ ಧರಿಸಿ ಬಂದಿದ್ದಾನೆ ಎಂದು ಆರೋಪಿಸಿ ವಾರ್ಡನ್ ವಿದ್ಯಾರ್ಥಿಯ ಬಟ್ಟೆ ಬಿಚ್ಚಿಸಿದ ಪರಿಣಾಮ ನೊಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯೊಬ್ಬ ರಾತ್ರೋರಾತ್ರಿ ವಸತಿ ಶಾಲೆಯಿಂದ ನಾಪತ್ತೆಯಾಗಿದ್ದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಅದೃಷ್ಟವಶಾತ್, ನಾಪತ್ತೆಯಾದ ಸುಮಾರು 24 ಗಂಟೆಯೊಳಗೆ ವಿದ್ಯಾರ್ಥಿ ಸುರಕ್ಷಿತವಾಗಿ ಪತ್ತೆಯಾಗಿದ್ದು, ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ನಗರದ ಖಾಸಗಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ದೇವರಹೊಸಹಳ್ಳಿ ಗ್ರಾಮದ ಸತೀಶ್–ಸವಿತಾ ದಂಪತಿಯ ಪುತ್ರ ಎಸ್. ಜೀವನ್ ಮೂರು ವರ್ಷಗಳಿಂದ ಇದೇ ವಸತಿ ಶಾಲೆಯಲ್ಲಿ ಓದುತ್ತಿದ್ದ ಎನ್ನಲಾಗಿದೆ.

ಸಹಪಾಠಿಗಳ ಎದುರು ಬಟ್ಟೆ ಬಿಚ್ಚಿಸಿದ ಆರೋಪ: ಶಾಲಾ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಜೀವನ್ ಬೇರೊಬ್ಬ ವಿದ್ಯಾರ್ಥಿಯ ಪ್ಯಾಂಟ್ ಧರಿಸಿದ್ದಾನೆ ಎಂದು ವಾರ್ಡನ್ ಪ್ರಶ್ನಿಸಿದ್ದಾರೆ. ಬಳಿಕ ಸತ್ಯ ಹೇಳುವಂತೆ ಒತ್ತಾಯಿಸಿ, ವಿದ್ಯಾರ್ಥಿಯ ಬಟ್ಟೆ ಬಿಚ್ಚುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಸಹಪಾಠಿಗಳ ಎದುರೇ ಬಟ್ಟೆ ಬಿಚ್ಚಿಸಿದ ಘಟನೆ ವಿದ್ಯಾರ್ಥಿಗೆ ತೀವ್ರ ನೋವುಂಟು ಮಾಡಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಘಟನೆಯ ಬಳಿಕ ಮಾನಸಿಕವಾಗಿ ನೊಂದಿದ್ದ ಜೀವನ್ ರಾತ್ರಿ ಸುಮಾರು 8.30ರ ವೇಳೆಗೆ ಹಾಸ್ಟೆಲ್‌ನಿಂದ ಹೊರಗೆ ಹೋಗಿದ್ದಾನೆ. ರಾತ್ರಿ 10ರ ಸುಮಾರಿಗೆ ಈ ವಿಷಯವನ್ನು ವಾರ್ಡನ್ ವಿದ್ಯಾರ್ಥಿಯ ಪೋಷಕರಿಗೆ ತಿಳಿಸಿದ್ದಾರೆ. ತಕ್ಷಣ ಪೋಷಕರು ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ್ದಾರೆ. ಬಳಿಕ ಮಗನನ್ನು ಹುಡುಕಿಕೊಡುವಂತೆ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ಕಣ್ಣೀರಿಟ್ಟ ಕುಟುಂಬಸ್ಥರು: ಮಗ ನಾಪತ್ತೆಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ತಾಯಿ ಸವಿತಾ, ಚಿಕ್ಕಮ್ಮ ಲತಾ ಹಾಗೂ ಚಿಕ್ಕಪ್ಪ ಷಣ್ಮುಖ ಸೇರಿದಂತೆ ಕುಟುಂಬಸ್ಥರು ದಾವಣಗೆರೆಗೆ ಆಗಮಿಸಿ ಶಾಲಾ ಆಡಳಿತ ಮಂಡಳಿ ಹಾಗೂ ವಾರ್ಡನ್ ಅವರನ್ನು ಪ್ರಶ್ನಿಸಿದ್ದಾರೆ.

ಮಗನ ಬಗ್ಗೆ ಆತಂಕಗೊಂಡಿದ್ದ ಪೋಷಕರು ಕಣ್ಣೀರಿಡುತ್ತಾ ಆತನನ್ನು ಸುರಕ್ಷಿತವಾಗಿ ಹುಡುಕಿಕೊಡುವಂತೆ ಮನವಿ ಮಾಡಿದರು. ಶಾಲೆಯ ಸಿಬ್ಬಂದಿ ಕುಟುಂಬಸ್ಥರನ್ನು ಕಚೇರಿಗೆ ಕರೆದುಕೊಂಡು ಹೋಗಿ ಸಮಾಧಾನಪಡಿಸಿದರು.

ಶಾಲೆಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರೂ ಪೋಷಕರಿಗೆ ಧೈರ್ಯ ಹೇಳಿ, ಜೀವನ್ ದಾವಣಗೆರೆಯ ಮೆಕ್‌ಡೊನಾಲ್ಡ್ ಸಮೀಪ ಟೀ ಕುಡಿದು ಹೋಗಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡು ಬಂದಿದೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಯ ಬಟ್ಟೆ ಬಿಚ್ಚಿಸಿದ ಘಟನೆ ಕುರಿತು ಆಂತರಿಕವಾಗಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿ ಪತ್ತೆ: ಇದರ ನಡುವೆ ಜೀವನ್ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಪಂಚೇನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿರುವ ಮಾಹಿತಿ ಕುಟುಂಬಸ್ಥರಿಗೆ ಲಭಿಸಿದೆ. ಅಲ್ಲಿದ್ದ ಪ್ರಯಾಣಿಕರೊಬ್ಬರು ಜೀವನ್‌ನನ್ನು ಗುರುತಿಸಿ, ಆತನ ತಂದೆ ಸತೀಶ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ತಕ್ಷಣ ಪಂಚೇನಹಳ್ಳಿಗೆ ತೆರಳಿದ ಸತೀಶ್ ಅವರು ಮಗನನ್ನು ಸುರಕ್ಷಿತವಾಗಿ ಕರೆದುಕೊಂಡು ತಮ್ಮ ಊರಿಗೆ ತೆರಳಿದ್ದಾರೆ. ಮಗ ಸುರಕ್ಷಿತವಾಗಿ ಪತ್ತೆಯಾಗಿರುವ ಸುದ್ದಿ ತಿಳಿದು ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

‘ವಾರ್ಡನ್ ಪ್ಯಾಂಟ್ ಬಿಚ್ಚುವಂತೆ ಹೇಳಿದರು’: ಶಾಲೆಯಲ್ಲಿ ನಡೆದ ಘಟನೆಯ ಕುರಿತು ಜೀವನ್ ವೀಡಿಯೋ ಮೂಲಕ ಪ್ರತಿಕ್ರಿಯಿಸಿದ್ದು, ವಾರ್ಡನ್ ಬೇರೆ ವಿದ್ಯಾರ್ಥಿಯ ಪ್ಯಾಂಟ್ ಧರಿಸಿದ್ದೀಯಾ ಎಂದು ಪ್ರಶ್ನಿಸಿದರು. ತಾನು ಇಲ್ಲ ಎಂದು ಹೇಳಿದರೂ ಮತ್ತೆ ಸತ್ಯ ಹೇಳುವಂತೆ ಒತ್ತಾಯಿಸಿ ತಲೆಗೆ ಹೊಡೆದರು ಎಂದು ಆರೋಪಿಸಿದ್ದಾನೆ. ಬಳಿಕ ಧರಿಸಿದ್ದ ಪ್ಯಾಂಟ್ ಬಿಚ್ಚುವಂತೆ ಹೇಳಿ ಬಿಚ್ಚಿಸಿದ ನಂತರ ಅದನ್ನು ಹೆಗಲ ಮೇಲೆ ಹಾಕಿಕೊಂಡು ಹೋಗುವಂತೆ ಮಾಡಿದರು ಎಂದು ಜೀವನ್ ಅಳಲು ತೋಡಿಕೊಂಡಿದ್ದಾನೆ.

ವಿದ್ಯಾರ್ಥಿಯ ಹೇಳಿಕೆಯಿಂದ ಆಘಾತಗೊಂಡಿರುವ ಚಿಕ್ಕಮ್ಮ ಲತಾ, ಘಟನೆಗೆ ಕಾರಣರಾದ ವಾರ್ಡನ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಶಾಲಾ ಆಡಳಿತ ಮಂಡಳಿ ಘಟನೆ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಪೊಲೀಸರಿಗೆ ಮತ್ತು ಶಾಲಾ ಆಡಳಿತಕ್ಕೆ ಒತ್ತಾಯಿಸಿದ್ದಾರೆ.

ಘಟನೆಯ ಸಂಪೂರ್ಣ ಸತ್ಯಾಸತ್ಯತೆ ಪೊಲೀಸ್ ಹಾಗೂ ಶಾಲಾ ಆಡಳಿತದ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದ್ದು, ವಿದ್ಯಾರ್ಥಿಯ ಸುರಕ್ಷತೆ ಮತ್ತು ಮಾನಸಿಕ ನೆಮ್ಮದಿಗೆ ಆದ್ಯತೆ ನೀಡಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.