ಸುಮಾರು ನಾಲ್ಕು ವರ್ಷಗಳ ದೀರ್ಘ ಅಂತರದ ಬಳಿಕ ಭಾರತದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮತ್ತೆ ರಾಷ್ಟ್ರೀಯ ತಂಡಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಟಿ20 ಸರಣಿಗೆ 36 ವರ್ಷದ ಸ್ವಿಂಗ್ ಮಾಸ್ಟರ್‌ಗೆ ಮಣೆ ಹಾಕಲಾಗಿದ್ದು, ಇದು ಕೇವಲ ಒಂದು ಸರಣಿಯ ಆಯ್ಕೆಯಾಗಿರದೆ, 2027ರ ಏಕದಿನ ವಿಶ್ವಕಪ್‌ಗೆ ಅವರನ್ನು ಸಜ್ಜುಗೊಳಿಸುವ ಬೃಹತ್ ಯೋಜನೆಯ ಭಾಗ ಎನ್ನಲಾಗಿದೆ.
ಭುವನೇಶ್ವರ್ ಕುಮಾರ್ ಕೊನೆಯದಾಗಿ ಭಾರತ ಪರ ಆಡಿದ್ದು ನವೆಂಬರ್ 2022ರಲ್ಲಿ. ಆದರೆ ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಬೆಂಕಿ ಬೌಲಿಂಗ್ ಪ್ರದರ್ಶಿಸಿದ್ದ ಅವರು, ಬರೋಬ್ಬರಿ 28 ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಅವರ ಅಪ್ರತಿಮ ಸ್ವಿಂಗ್ ಹಾಗೂ ಡೆತ್ ಓವರ್‌ಗಳ ನಿಖರತೆಯು ತಂಡದ ಮ್ಯಾನೇಜ್‌ಮೆಂಟ್ ಗಮನ ಸೆಳೆದಿತ್ತು. ಹರ್ಷಿತ್ ರಾಣಾ ಅವರ ಸತತ ಗಾಯದ ಸಮಸ್ಯೆ ಕೂಡ ಭುವಿ ಕಮ್‌ಬ್ಯಾಕ್‌ಗೆ ಹಾದಿ ಮಾಡಿಕೊಟ್ಟಿದೆ.
ಮತ್ತೆ ನೀಲಿ ಜೆರ್ಸಿ ಧರಿಸುವ ಬಗ್ಗೆ ಮಾತನಾಡಿದ ಭುವನೇಶ್ವರ್, “ವಿಶ್ವಕಪ್ ಆಡುವ ಅನುಭವವನ್ನು ಯಾವುದಕ್ಕೂ ಹೋಲಿಸಲು ಸಾಧ್ಯವಿಲ್ಲ. ನನ್ನ ದೇಹ ಸಂಪೂರ್ಣ ಸಿದ್ಧವಾಗಿದೆ; ವೈಯಕ್ತಿಕ ಫಿಸಿಯೋ ಮತ್ತು ಟ್ರೈನರ್ ಜೊತೆ ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ. ಅವಕಾಶ ಸಿಕ್ಕರೆ ಖುಷಿ, ಸಿಗದಿದ್ದರೂ ನಿರಾಸೆಯಿಲ್ಲ. ಹಣೆಬರಹದಲ್ಲಿ ಬರೆದಿರುವುದು ನಡೆದಿದೆ” ಎಂದು ಹೇಳಿದ್ದಾರೆ. ನವೀನ ವೇಗ ಮತ್ತು ಅನುಭವದ ಸ್ವಿಂಗ್ ಬಲದಿಂದ ಕಣಕ್ಕಿಳಿಯಲಿರುವ ಭುವಿ, 50 ಓವರ್‌ಗಳ ಕ್ರಿಕೆಟ್‌ನ ದೈಹಿಕ ಒತ್ತಡವನ್ನು ನಿಭಾಯಿಸಬಲ್ಲರೇ ಎಂಬುದನ್ನು ಬಿಸಿಸಿಐ ಈ ಸರಣಿಯ ಮೂಲಕ ಸೂಕ್ಷ್ಮವಾಗಿ ಗಮನಿಸಲಿದೆ.






















