SK Home Ad
Home ನಮ್ಮ ಜಿಲ್ಲೆ ದಾವಣಗೆರೆ ನಿಮ್ಮ ಕಷ್ಟಗಳಲ್ಲಿ ಜತೆಯಾಗಿ ನಿಲ್ಲುತ್ತೇನೆ: ಸಚಿವ ಬಸವಂತಪ್ಪ ಭರವಸೆ

ನಿಮ್ಮ ಕಷ್ಟಗಳಲ್ಲಿ ಜತೆಯಾಗಿ ನಿಲ್ಲುತ್ತೇನೆ: ಸಚಿವ ಬಸವಂತಪ್ಪ ಭರವಸೆ

0
6

ದಾವಣಗೆರೆ: ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ಶನಿವಾರ ಆಗಮಿಸಿದ ಸಚಿವ ಕೆ.ಎಸ್. ಬಸವಂತಪ್ಪ ಅವರು ಕ್ಷೇತ್ರದಾದ್ಯಂತ ಸಂಚರಿಸಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

ಐದು ದಿನಗಳ ಕಾಲ ವಿಧಾನಮಂಡಲ ಅಧಿವೇಶನದಲ್ಲಿ ಪಾಲ್ಗೊಂಡು ಶನಿವಾರ ಬೆಳಗ್ಗೆ ದಾವಣಗೆರೆಗೆ ಆಗಮಿಸಿದ ಸಚಿವರು, ತಮ್ಮ ಗೃಹ ಕಚೇರಿಯಲ್ಲಿ ಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನರ ಅಹವಾಲುಗಳನ್ನು ಆಲಿಸಿದರು. ಬಳಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಕ್ಷೇತ್ರ ಪ್ರವಾಸಕ್ಕೆ ಚಾಲನೆ ನೀಡಿದರು.

ಹಳ್ಳಿಗಳಲ್ಲಿ ಹಬ್ಬದ ವಾತಾವರಣ: ಸಚಿವರು ಕ್ಷೇತ್ರದ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಕರಿಲಕ್ಕೇನಹಳ್ಳಿ, ಮಲ್ಲಶೆಟ್ಟಿಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿ, ಸನ್ಮಾನಿಸಿ ಅಭಿನಂದಿಸಿದರು. ಸಚಿವರ ಆಗಮನದ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಗ್ರಾಮಸ್ಥರು ಹೂಗುಚ್ಛ ನೀಡಿ, ಶಾಲು ಹೊದಿಸಿ, ಆತ್ಮೀಯವಾಗಿ ಬರಮಾಡಿಕೊಂಡರು. ಸಚಿವರು ಕೂಡ ಜನರೊಂದಿಗೆ ಬೆರೆತು, ಪ್ರತಿಯೊಬ್ಬರ ಸಮಸ್ಯೆಗಳನ್ನು ಆಲಿಸುವ ಮೂಲಕ ಸರಳತೆ ಮೆರೆದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೆ.ಎಸ್. ಬಸವಂತಪ್ಪ, “ನೀವೆಲ್ಲರೂ ನೀಡಿರುವ ಪ್ರೀತಿ, ಅಭಿಮಾನ ಹಾಗೂ ಆತ್ಮೀಯ ಸ್ವಾಗತಕ್ಕೆ ನಾನು ಸದಾ ಕೃತಜ್ಞನಾಗಿರುತ್ತೇನೆ. ಅಧಿಕಾರ ಯಾವುದೇ ಆಗಿರಲಿ, ನಿಮ್ಮೊಂದಿಗೆ ಸದಾ ಇರುತ್ತೇನೆ. ನಿಮ್ಮ ಕಷ್ಟಗಳಲ್ಲಿ ನಾನೊಬ್ಬನಾಗಿ ನಿಂತು, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ” ಎಂದು ಭರವಸೆ ನೀಡಿದರು.

ಅಧಿಕಾರಕ್ಕಿಂತ ಜನರ ಸಂಪರ್ಕಕ್ಕೆ ಆದ್ಯತೆ: ಸಚಿವರಾದ ಬಳಿಕ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಬಸವಂತಪ್ಪ ಅವರು ಕೇವಲ ಅಭಿನಂದನೆ ಸ್ವೀಕರಿಸುವುದಕ್ಕೆ ಸೀಮಿತವಾಗದೆ, ಗ್ರಾಮಗಳಿಗೆ ತೆರಳಿ ಜನರ ಅಹವಾಲುಗಳನ್ನು ನೇರವಾಗಿ ಆಲಿಸಿದರು. ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದಿದ್ದು, ಅವುಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ಕಲ್ಪಿಸುವುದಾಗಿ ಸಚಿವರು ಭರವಸೆ ನೀಡಿದರು.

ನಂತರ ಸಚಿವರು ಕ್ಷೇತ್ರದ ಇತರ ಗ್ರಾಮಗಳತ್ತ ಪ್ರಯಾಣ ಬೆಳೆಸಿ, ಅಲ್ಲಿನ ಜನರೊಂದಿಗೆ ಸಂವಾದ ನಡೆಸಿದರು. ಪ್ರತಿಯೊಂದು ಗ್ರಾಮದಲ್ಲಿಯೂ ಹೂಗುಚ್ಛ, ಶಾಲು ಹಾಗೂ ಆತ್ಮೀಯ ಸ್ವಾಗತದ ಮೂಲಕ ಸಚಿವರನ್ನು ಬರಮಾಡಿಕೊಂಡಿದ್ದು ವಿಶೇಷವಾಗಿತ್ತು. ಮಂತ್ರಿಯಾದ ಬಳಿಕ ಮೊದಲ ಕ್ಷೇತ್ರ ಪ್ರವಾಸದಲ್ಲೇ ಜನರ ನಡುವೆ ಬೆರೆತು, ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಬಸವಂತಪ್ಪ ಅವರ ನಡೆ ಕ್ಷೇತ್ರದಲ್ಲಿ ಗಮನ ಸೆಳೆಯಿತು.