SK Home Ad
Home ನಮ್ಮ ಜಿಲ್ಲೆ ದಾವಣಗೆರೆ ವಾಲ್ಮೀಕಿ ಗುರುಪೀಠಕ್ಕೆ ಸಚಿವ ಕೆ.ಎಸ್. ಬಸವಂತಪ್ಪ ಭೇಟಿ

ವಾಲ್ಮೀಕಿ ಗುರುಪೀಠಕ್ಕೆ ಸಚಿವ ಕೆ.ಎಸ್. ಬಸವಂತಪ್ಪ ಭೇಟಿ

0
44

ಪ್ರಸನ್ನಾನಂದಪುರಿ ಮಹಾಸ್ವಾಮಿಗಳ ಆಶೀರ್ವಾದ ಪಡೆದ ಸಚಿವರು; ಧಾರ್ಮಿಕ, ಶೈಕ್ಷಣಿಕ ಅಭಿವೃದ್ಧಿ ಕುರಿತು ಚರ್ಚೆ

ದಾವಣಗೆರೆ: ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿರುವ ಶ್ರೀ ವಾಲ್ಮೀಕಿ ಗುರುಪೀಠಕ್ಕೆ ಶನಿವಾರ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಅವರು ಭೇಟಿ ನೀಡಿ, ಪರಮಪೂಜ್ಯ ಶ್ರೀ ಶ್ರೀ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.

ಗುರುಪೀಠಕ್ಕೆ ಆಗಮಿಸಿದ ಸಚಿವರು ಶ್ರೀಗಳ ಪಾದಕಮಲಗಳಿಗೆ ನಮಸ್ಕರಿಸಿ ಗೌರವ ಸಲ್ಲಿಸಿದರು. ಬಳಿಕ ಮಹಾಸ್ವಾಮಿಗಳೊಂದಿಗೆ ಕೆಲಕಾಲ ಆತ್ಮೀಯವಾಗಿ ಮಾತುಕತೆ ನಡೆಸಿದ ಅವರು, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳ ಅಭಿವೃದ್ಧಿ ಸೇರಿದಂತೆ ಸಮಾಜಮುಖಿ ಚಟುವಟಿಕೆಗಳ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ವಾಲ್ಮೀಕಿ ಗುರುಪೀಠವು ಧಾರ್ಮಿಕ ಚಟುವಟಿಕೆಗಳ ಜತೆಗೆ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿಯೂ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು. ಧಾರ್ಮಿಕ, ಶೈಕ್ಷಣಿಕ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿರುವ ಪ್ರಸನ್ನಾನಂದಪುರಿ ಮಹಾಸ್ವಾಮಿಗಳ ಆದರ್ಶಗಳು ಸಮಾಜದ ಎಲ್ಲ ವರ್ಗದವರಿಗೂ ಪ್ರೇರಣೆಯಾಗಿವೆ ಎಂದು ಅವರು ಹೇಳಿದರು.

ಗುರುಪೀಠದ ಅಭಿವೃದ್ಧಿ, ಶಿಕ್ಷಣದ ಉತ್ತೇಜನ ಹಾಗೂ ಸಮಾಜದ ಶೈಕ್ಷಣಿಕ-ಸಾಮಾಜಿಕ ಪ್ರಗತಿಗೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಸಚಿವರು ಮತ್ತು ಶ್ರೀಗಳ ನಡುವೆ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಸ್ವಾಮೀಜಿ ಸಚಿವ ಕೆ.ಎಸ್.ಬಸವಂತಪ್ಪ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ.ಚಂದ್ರಣ್ಣ, ಜಿಪಂ ಮಾಜಿ ಸದಸ್ಯ ಪಿ.ಸಿ.ಗೋವಿಂದಸ್ವಾಮಿ, ತಾಪ ಮಾಜಿ ಸದಸ್ಯರಾದ ಗುಮ್ಮನೂರು ಶಂಬಣ್ಣ, ಹುಲಿಕಟ್ಟೆ ಶಿವಣ್ಣ, ಆನಗೋಡು ಗ್ರಾಪಂ ಸದಸ್ಯ ಕರಿಬಸಪ್ಪ, ಬಸಣ್ಣ, ಬೆಳಲೆಗೆರೆ ಬಸವರಾಜ್, ರಂಗಣ್ಣ,ಅಣಜಿ ಶಿವಮೂರ್ತಣ್ಣ, ಗಿರಿಯಾಪುರ ಬಸಣ್ಣ ಸೇರಿದಂತೆ ಇನ್ನಿತರರಿದ್ದರು.