SK Home Ad
Home ನಮ್ಮ ಜಿಲ್ಲೆ ಧಾರವಾಡ ‘ಪುಷ್ಕರಣಿ ಉಳಿಸಿ’ ಹೋರಾಟ : ಹಳೆ ಹುಬ್ಬಳ್ಳಿಯಲ್ಲಿ ಹೈ ಅಲರ್ಟ್

‘ಪುಷ್ಕರಣಿ ಉಳಿಸಿ’ ಹೋರಾಟ : ಹಳೆ ಹುಬ್ಬಳ್ಳಿಯಲ್ಲಿ ಹೈ ಅಲರ್ಟ್

0
107
ರಸ್ತೆ ನಿರ್ಮಾಣಕ್ಕೆ ವಿರೋಧ: ಹಳೆ ಹುಬ್ಬಳ್ಳಿಯಲ್ಲಿ ಪೊಲೀಸ್ ಕಟ್ಟೆಚ್ಚರ

ಹುಬ್ಬಳ್ಳಿಯ ಐತಿಹಾಸಿಕ ಪುಷ್ಕರಣಿ ವಿವಾದ: ಬಿಗಿ ಪೊಲೀಸ್ ಬಂದೋಬಸ್ತ್, ದಾರಿಗಳಿಗೆ ಬ್ಯಾರಿಕೇಡ್

ಹುಬ್ಬಳ್ಳಿ: ಹಳೆ ಹುಬ್ಬಳ್ಳಿಯ ಐತಿಹಾಸಿಕ ಆಸರ್ ಹೊಂಡದ ಬಳಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ವಿವಾದ ತಾರಕಕ್ಕೇರಿದ್ದು, ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಶ್ರೀ ಭವಾನಿ ಶಂಕರ ದೇವಸ್ಥಾನದ ಆವರಣದಲ್ಲಿರುವ ಪವಿತ್ರ ಪುಷ್ಕರಣಿ ಸ್ಥಳದಲ್ಲಿ ರಸ್ತೆ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದಕ್ಕೆ ಸ್ಥಳೀಯರು ಹಾಗೂ ಹಿಂದೂ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಶ್ರೀ ಭವಾನಿ ಶಂಕರ ದೇವಸ್ಥಾನದ ಆವರಣದಲ್ಲಿರುವ ಪುಷ್ಕರಣಿಯನ್ನು ಮುಚ್ಚಿ ಅದರ ಜಾಗದಲ್ಲಿ ರಸ್ತೆ ನಿರ್ಮಿಸಲಾಗಿದೆ ಎಂದು ಆರೋಪಿಸಿರುವ ಹೋರಾಟಗಾರರು, ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಪುಷ್ಕರಣಿಯನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.

‘ಪುಷ್ಕರಣಿ ಉಳಿಸಿ’ ಹೋರಾಟ : ಪುಷ್ಕರಣಿಯನ್ನು ಉಳಿಸಿ, ಅಕ್ರಮವಾಗಿ ನಿರ್ಮಿಸಲಾಗಿದೆ ಎನ್ನಲಾಗುತ್ತಿರುವ ರಸ್ತೆಯನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಹಿಂದೂ ಸಂಘಟನೆಗಳು ‘ಪುಷ್ಕರಣಿ ಉಳಿಸಿ’ ಹೋರಾಟಕ್ಕೆ ಕರೆ ನೀಡಿವೆ. ಇದರ ಭಾಗವಾಗಿ ಚನ್ನಪೇಟೆಯಿಂದ ಶ್ರೀ ಭವಾನಿ ಶಂಕರ ದೇವಸ್ಥಾನದವರೆಗೆ ಬೃಹತ್ ಮೆರವಣಿಗೆ ನಡೆಸಲು ಸಂಘಟನೆಗಳು ನಿರ್ಧರಿಸಿವೆ.

ಹೋರಾಟ ಹಾಗೂ ಮೆರವಣಿಗೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹುಬ್ಬಳ್ಳಿ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಆಸರ್ ಹೊಂಡದತ್ತ ತೆರಳುವ ಪ್ರಮುಖ ಮಾರ್ಗಗಳಿಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ವಾಹನ ಹಾಗೂ ಸಾರ್ವಜನಿಕರ ಸಂಚಾರದ ಮೇಲೂ ನಿಗಾ ವಹಿಸಲಾಗಿದೆ.

ದೇವಸ್ಥಾನದ ಸುತ್ತ ನಿಷೇಧಾಜ್ಞೆ : ಶ್ರೀ ಭವಾನಿ ಶಂಕರ ದೇವಸ್ಥಾನದ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿಯ ಮೇಲೆ ಅಧಿಕಾರಿಗಳು ನಿರಂತರವಾಗಿ ನಿಗಾ ವಹಿಸುತ್ತಿದ್ದಾರೆ.

ರಸ್ತೆ ನಿರ್ಮಾಣದ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಹಾಗೂ ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಐತಿಹಾಸಿಕ ಪುಷ್ಕರಣಿಯ ಸಂರಕ್ಷಣೆ ಹಾಗೂ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ವಿವಾದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಸದ್ಯ ಆಸರ್ ಹೊಂಡ ಹಾಗೂ ಶ್ರೀ ಭವಾನಿ ಶಂಕರ ದೇವಸ್ಥಾನದ ಸುತ್ತಮುತ್ತ ಬಿಗುವಿನ ವಾತಾವರಣ ಮುಂದುವರಿದಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.