ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಕೆಪಿಎಸ್‌ಸಿ ಸದಸ್ಯೆ ಡಾ. ಶಾಂತಾ ಹೊಸಮನಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಾಳೆಗೆ ಮುಂದೂಡಿದೆ. ಈ ಹಂತದಲ್ಲಿ ಶಾಂತಾ ಹೊಸಮನಿ ಅವರಿಗೆ ಯಾವುದೇ ಮಧ್ಯಂತರ ರಿಲೀಫ್ ನೀಡಲು ನ್ಯಾಯಪೀಠ ನಿರಾಕರಿಸಿದೆ.
ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಿಶೇಷ ಅಭಿಯೋಜಕ ಬಿ.ಎನ್. ಜಗದೀಶ್ ಅವರು ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ನ್ಯಾಯಪೀಠದ ಮುಂದೆ ವಾದ ಮಂಡಿಸಿದರು.
ಶಾಂತಾ ಹೊಸಮನಿ ಅವರು ಪ್ರಕರಣದ ಎರಡನೇ ಆರೋಪಿ ಆಗಿದ್ದು, ಅಂಕ ನೀಡಿಕೆ ಸೇರಿದಂತೆ ನೇಮಕಾತಿ ಪ್ರಕ್ರಿಯೆಯಲ್ಲಿ ಅವರ ಪಾತ್ರದ ಕುರಿತು ತನಿಖೆ ನಡೆಯುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಏನಿದು ಪ್ರಕರಣ?: ಕೆಪಿಎಸ್‌ಸಿ ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮವಾಗಿ ಅಭ್ಯರ್ಥಿಗಳಿಗೆ ನೆರವು ನೀಡಿದ ಆರೋಪಗಳ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ. ತನಿಖೆಯಲ್ಲಿ ಪ್ರಶ್ನೆಪತ್ರಿಕೆಯ ಸುಮಾರು 60ರಿಂದ 80 ಪ್ರಶ್ನೆಗಳು ಪರೀಕ್ಷೆಗೂ ಮುನ್ನ ಸೋರಿಕೆಯಾಗಿದ್ದವು ಎಂಬ ಆರೋಪವೂ ಕೇಳಿಬಂದಿದೆ. ಈ ಪ್ರಕರಣದಲ್ಲಿ ಅಭ್ಯರ್ಥಿಗಳು, ಮಧ್ಯವರ್ತಿಗಳು ಹಾಗೂ ಕೆಪಿಎಸ್‌ಸಿ ಅಧಿಕಾರಿಗಳ ನಡುವಿನ ಹಣಕಾಸು ವ್ಯವಹಾರಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ಅವರನ್ನು ಸಿಐಡಿ ಬಂಧಿಸಿತ್ತು. ತನಿಖೆಯ ವೇಳೆ ಅಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳ ನಡುವೆ ನಡೆದಿದ್ದ ಎನ್ನಲಾದ ಹಣಕಾಸು ವ್ಯವಹಾರಗಳ ಮಾಹಿತಿ ಕೂಡ ತನಿಖಾ ಸಂಸ್ಥೆಗೆ ಲಭ್ಯವಾಗಿದೆ. ಸುಮಾರು ₹92 ಲಕ್ಷದ ಹಣಕಾಸು ವಹಿವಾಟಿನ ಜಾಡು ಪತ್ತೆಯಾಗಿದ್ದು, ಹಲವು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.
ಶಾಂತಾ ಹೊಸಮನಿ ವಿರುದ್ಧದ ಆರೋಪವೇನು?: ಶಾಂತಾ ಹೊಸಮನಿ ಅವರ ವಿರುದ್ಧ ಪಶುವೈದ್ಯಾಧಿಕಾರಿ ನೇಮಕಾತಿ ಮಾತ್ರವಲ್ಲದೆ ಕೆಎಎಸ್ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಆರೋಪಗಳೂ ತನಿಖೆಯ ವ್ಯಾಪ್ತಿಗೆ ಬಂದಿವೆ. ಸಿಐಡಿ ತನಿಖೆಯಲ್ಲಿ ಕೆಎಎಸ್ ಅಭ್ಯರ್ಥಿಯೊಬ್ಬರೊಂದಿಗೆ ಸಂದರ್ಶನಕ್ಕೂ ಮುನ್ನ ಶಾಂತಾ ಹೊಸಮನಿ ಅವರು ದೂರವಾಣಿ ಮೂಲಕ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ನ್ಯಾಯಾಲಯದ ಮುಂದೆಯೂ ಪ್ರಸ್ತಾಪವಾಗಿತ್ತು. ಅಭ್ಯರ್ಥಿ ಹಾಗೂ ಶಾಂತಾ ಹೊಸಮನಿ ನಡುವೆ ಒಟ್ಟು 13 ಬಾರಿ ಕರೆಗಳು ನಡೆದಿದ್ದವು ಎಂದು ಸಿಐಡಿ ತಿಳಿಸಿತ್ತು.
ಈ ಹಿನ್ನೆಲೆಯಲ್ಲಿ ಶಾಂತಾ ಹೊಸಮನಿ ವಿರುದ್ಧವೂ ತನಿಖೆ ತೀವ್ರಗೊಂಡಿತ್ತು. ಈ ಹಿಂದೆ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ಬಳಿಕ ಅವರು ಸಿಐಡಿ ವಿಚಾರಣೆಗೆ ಹಾಜರಾಗಿದ್ದರು.
ಇದೀಗ ಬಂಧನದ ಭೀತಿಯಿಂದ ಹೈಕೋರ್ಟ್ ಮೊರೆ ಹೋಗಿರುವ ಶಾಂತಾ ಹೊಸಮನಿ, ನಿರೀಕ್ಷಣಾ ಜಾಮೀನು ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಮಂಗಳವಾರ ನಡೆದ ವಿಚಾರಣೆಯಲ್ಲಿ ನ್ಯಾಯಾಲಯವು ಈ ಹಂತದಲ್ಲಿ ಯಾವುದೇ ಮಧ್ಯಂತರ ರಕ್ಷಣೆ ನೀಡದೆ, ಅರ್ಜಿಯ ಮುಂದಿನ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.




















