ಮುದ್ದೇಬಿಹಾಳದಲ್ಲಿ ದುರಂತ: ಬಾವಿಯಲ್ಲಿ ಇಬ್ಬರು ಸಹೋದರಿಯರ ಶವ, ತಂದೆ ನಾಪತ್ತೆ
ಹಣಮಂತ ನಲವಡೆ
ಮುದ್ದೇಬಿಹಾಳ: ಅಕ್ಕ-ತಂಗಿಯರ ಶವ ಬಾವಿಯಲ್ಲಿ ಪತ್ತೆಯಾಗಿದ್ದು, ತಂದೆ ನಾಪತ್ತೆಯಾಗಿರುವ ಹೃದಯವಿದ್ರಾವಕ ಘಟನೆ ತಾಲ್ಲೂಕಿನ ಬಳಬಟ್ಟಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಬಾವಿಯಲ್ಲಿ ಮೃತಪಟ್ಟ ಬಾಲಕಿಯರನ್ನು ಬಳಬಟ್ಟಿ ಗ್ರಾಮದ ರಕ್ಷಿತಾ ಬರಗಿ (15) ಹಾಗೂ ಸಾಕ್ಷಿ ಬರಗಿ (10) ಎಂದು ಗುರುತಿಸಲಾಗಿದೆ. ಇದೇ ವೇಳೆ ಬಾಲಕಿಯರ ತಂದೆ ಸಾಬಣ್ಣ ಬರಗಿ ಕೂಡ ಬಾವಿಗೆ ಜಿಗಿದಿದ್ದಾರೆ ಎನ್ನಲಾಗಿದ್ದು, ಅವರಿಗಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಬಾವಿಯಲ್ಲಿದ್ದ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿದ್ದರೂ ಸಾಬಣ್ಣ ಅವರ ಶವ ಪತ್ತೆಯಾಗಿಲ್ಲ. ಹೀಗಾಗಿ ಅವರು ಬಾಲಕಿಯರನ್ನು ಬಾವಿಗೆ ದೂಡಿ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆಯೇ ಅಥವಾ ಜೀವ ಉಳಿಸಿಕೊಳ್ಳಲು ಬಾವಿಯಿಂದ ಹೊರಬಂದು ಎಲ್ಲಿಗಾದರೂ ತೆರಳಿದ್ದಾರೆಯೇ ಎಂಬ ಹಲವು ಅನುಮಾನಗಳು ಮೂಡಿವೆ. ಘಟನೆಗೆ ನಿಖರ ಕಾರಣ ತನಿಖೆಯಿಂದಲೇ ತಿಳಿಯಬೇಕಿದೆ.
ಸಾಬಣ್ಣ ಅವರಿಗೆ ನಾಲ್ವರು ಹೆಣ್ಣುಮಕ್ಕಳಿದ್ದು, ಅವರಲ್ಲಿ ಇಬ್ಬರು ಬಾಲಕಿಯರು ಮೃತಪಟ್ಟಿರುವುದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮುದ್ದೇಬಿಹಾಳ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ತಿಪ್ಪಣ್ಣ ನಾವದಗಿ ಅವರ ನೇತೃತ್ವದಲ್ಲಿ ಸಿಬ್ಬಂದಿ ಸುಭಾಷ ರಾಠೋಡ, ತಮ್ಮಣ್ಣ ಗೌಡರ, ವಿರೂಪಾಕ್ಷ ಪೂಜಾರಿ, ಶ್ರೀಶೈಲಗೌಡ ಪಾಟೀಲ, ರಾಜು ರಾಠೋಡ ಹಾಗೂ ಲಕ್ಷ್ಮಣ ಕರ್ನಾಲಗಿ ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಸಾಬಣ್ಣ ಅವರಿಗಾಗಿ ಶೋಧ ಮುಂದುವರಿಸಿದ್ದಾರೆ. ಘಟನೆಗೆ ಸಂಬಂಧಿಸಿದ ನಿಖರ ಕಾರಣ ತನಿಖೆಯ ನಂತರ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
- ಚಿತ್ರದುರ್ಗ: ಭೀಕರ ಅಪಘಾತ – ಲಾರಿಗೆ ಕಾರು ಡಿಕ್ಕಿ, ಮೂವರು ಸಾವು
- ‘ಚಾಂಪಿಯನ್ಸ್ ಆಫ್ ಕೇರ್’: ರಾಜ್ಯದ 3 ಸಂಸ್ಥೆಗಳೂ ಸೇರಿ ದೇಶದ 50ಕ್ಕೂ ಹೆಚ್ಚು ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ವನತಾರಾ ಬೆಂಬಲ
- ಸ್ಯಾಂಡಲ್ವುಡ್ಗೆ ನಭಾ ನಟೇಶ್ ಕಂಬ್ಯಾಕ್ ಧ್ರುವ ಸರ್ಜಾ ‘ಕೆಮಿಸ್ಟ್ರಿ’ ಘೋಷಣೆ
- KPSC ಹಗರಣ: ಶಾಂತಾ ಹೊಸಮನಿಗೆ ಸದ್ಯ ರಿಲೀಫ್ ಇಲ್ಲ
- ಆ್ಯಕ್ಷನ್ ಪ್ರಿನ್ಸ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ಹೊಸ ಚಿತ್ರದ ಟೈಟಲ್ ಟೀಸರ್ ರಿಲೀಸ್






















