ಚಿಕ್ಕೋಡಿ: ನಾಗರ ಪಂಚಮಿ ಹಬ್ಬದಂದು ನಾಗರಹಾವಿನ ಮಣ್ಣಿನ ಮೂರ್ತಿ ಇಟ್ಟು ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಕುಟುಂಬವೊಂದು ನಿಜವಾದ ನಾಗರಹಾವನ್ನೇ ಮನೆಯಲ್ಲಿ ಇಟ್ಟು ಪೂಜೆ ಸಲ್ಲಿಸಿರುವ ಘಟನೆ ನಡೆದಿದೆ.
ಹುಕ್ಕೇರಿ ಪಟ್ಟಣದ ಕಲಾಲ ಗಲ್ಲಿಯಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ಉರಗ ರಕ್ಷಕರ ನೆರವಿನಿಂದ ಹಾವನ್ನು ಸುರಕ್ಷಿತವಾಗಿ ಹಿಡಿಯಲಾಗಿದೆ. ಬಳಿಕ ಅಕ್ಷಯ ಬೆನಾಡಿಕರ ಎಂಬುವವರ ಮನೆಗೆ ಹಾವನ್ನು ಕರೆದೊಯ್ದು, ಕುಟುಂಬಸ್ಥರು ನಾಗರ ಪಂಚಮಿಯ ಅಂಗವಾಗಿ ಪೂಜೆ ಸಲ್ಲಿಸಿದ್ದಾರೆ.
ಪ್ಲಾಸ್ಟಿಕ್ ಡಬ್ಬದಲ್ಲಿ ನಾಗರಹಾವನ್ನು ಇರಿಸಿ ಕುಟುಂಬಸ್ಥರು ಪೂಜೆ ಸಲ್ಲಿಸಿರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನಾಗರ ಪಂಚಮಿಯಂದು ನೈಜ ನಾಗರಹಾವಿಗೆ ಪೂಜೆ ಸಲ್ಲಿಸಿರುವ ಈ ಘಟನೆ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.






















