SK Home Ad
Home ಅಂಕಣ ಸಂಸತ್ತಿನಂತೆ ವಿಧಾನಮಂಡಲ ಕಲಾಪವೂ ‘ಅಣಕ’ವಾಗದಿರಲಿ

ಸಂಸತ್ತಿನಂತೆ ವಿಧಾನಮಂಡಲ ಕಲಾಪವೂ ‘ಅಣಕ’ವಾಗದಿರಲಿ

0
75

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ನಹೀ ಚಲೇಗಿ ನಹೀ ಚಲೇಗಿ…
ಪ್ರಜಾಪ್ರಭುತ್ವದ ದೇಗುಲ ಸಂಸತ್ ಭವನದಿಂದ ಕಳೆದ 20 ದಿನಗಳಿಂದ ಮಾರ್ದನಿಸಿದ್ದು ಇವಿಷ್ಟೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಜಂತರ್ ಮಂತರನಲ್ಲಿ ಲಾಟಿ ಚಾರ್ಜ್‌, ಅಶ್ರುವಾಯು, ಪೆಲೆಟ್‌ಗನ್ ಬಳಸಿರುವುದನ್ನ ಖಂಡಿಸಿ ʻಜವಾಬ್ದೋʼ ಎಂದು ಘೋಷಣೆ ಕೂಗುತ್ತಿರುವ ಪ್ರತಿಪಕ್ಷಗಳಿಗೆ ಸರಕಾರ ಇನ್ನೂ ಉತ್ತರ ಕೊಟ್ಟಿಲ್ಲ.

ಕೇಂದ್ರ ಶಿಕ್ಷಣ ಸಚಿವರನ್ನು ಬದಲಾಯಿಸಿದರಷ್ಟೇ ಸಾಲಲ್ಲ, ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿರುವುದಕ್ಕೆ ಸರಕಾರ ಜವಾಬ್ದಾರಿ ಹೊರಬೇಕು ಎನ್ನುವುದು ಪ್ರತಿಪಕ್ಷಗಳ ಪಟ್ಟು. ಇದರಿಂದ ಉಭಯ ಸದನ ಮುಂಗಾರು ಅಧಿವೇಶನ ʻಅಂತರ್ ಮಂತರ್ʼನ ಗೌಜು ಗದ್ದಲಗಳ ನಡುವೆ ಯಾವ ಚರ್ಚೆ-ಪ್ರಯೋಜನ ಇಲ್ಲದೆ ಮುಕ್ತಾಯವಾಗುವ ಹಂತ ಬಂದಿದೆ.

ʻಸಂಸತ್ ಅಧಿವೇಶನʼ ಎಂದರೆ ದೇಶದ ಜ್ವಲಂತ ಸಮಸ್ಯೆ- ಅದಕ್ಕೆ ಪರಿಹಾರ, ರಾಜಕೀಯ ರಾಜತಾಂತ್ರಿಕತೆ, ದೇಶ ಕಟ್ಟುವ ಪ್ರಜ್ಞೆ, ಒಕ್ಕೂಟ ವ್ಯವಸ್ಥೆಯ ಧ್ವನಿ, ಸರ್ವ ಜನಾಂಗ, ಭಾಷೆ, ಸಮಗ್ರತೆ ಎಲ್ಲವೂಗಳ ಧ್ವನಿತವಾಗಬೇಕು. ಅವುಗಳಿಗೆಲ್ಲ ಪರಿಹಾರ ದೊರೆಯಬೇಕು. ಆಡಳಿತ ಮತ್ತು ಪ್ರತಿಪಕ್ಷಗಳ ವಾದ, ಆಲಿಕೆ, ಚರ್ಚೆ ಅನುಭವಗಳ ಒಟ್ಟು ಹೂರಣಗಳ ಸಮ್ಮಿಳತ, ಉತ್ತರಾಧಾಯಿತ್ವವಾಗಿರಬೇಕು. ಆದರೆ ಈಗ ಹಾಗಿಲ್ಲ. ಸಂಸತ್ತಿನ ಅಮೂಲ್ಯ ಸಮಯವನ್ನು ಕೇವಲ ಪ್ರತಿಭಟನೆ, ಬಹಿಷ್ಕಾರದಿಂದ ವ್ಯಯವಾಗುತ್ತಿದೆ.

ಹಾಗಂತ ಪ್ರತಿಪಕ್ಷಗಳು ಎತ್ತಿರುವ ಪ್ರಶ್ನೆ ಲಘು ಅಂತಲ್ಲ. ಸರಕಾರ ಜವಾಬ್ ನೀಡಿ, ಪ್ರತಿಷ್ಠೆ ಸೇಡು-ಸೆಡವು ಬಿಟ್ಟು ಮಾತುಕತೆ ಸಂಧಾನದ ಮೂಲಕ ಸುಸೂತ್ರ ಕಲಾಪದ ಮೊರೆ ಹೋಗಬಹುದಿತ್ತು. ಪ್ರತಿಪಕ್ಷವೂ ಕೂಡ ʻಕಲಾಪ ಭಂಗʼಕ್ಕೆ ಮಾತ್ರ ಸೀಮಿತವಾಗಿರದೇ ಹೋರಾಟದ ಧ್ವನಿಯನ್ನು ಸಮರ್ಥವಾಗಿ ಸದನದಲ್ಲಿ ಎತ್ತಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರಗಾರಿಕೆ ಎಣೆದು ಜನತೆಯ ತೀರ್ಮಾನಕ್ಕೆ ಬಿಡಬಹುದಿತ್ತು. ದುರದೃಷ್ಟ ಎಂದರೆ ಈಗಿನ ರಾಜಕೀಯ ಆ ಸ್ಥಿತಿಯಿಲ್ಲ. ಕೇವಲ ಪ್ರತಿಷ್ಠೆ ಮತ್ತು ದ್ವೇಷ, ಹಠಮಾರಿತನದ ರಾಜಕಾರಣ ಮೇಳೈಸಿರುವಾಗ ಗಾಯಗೊಂಡಿರುವುದು ಪ್ರಜಾಪ್ರಭುತ್ವಕ್ಕೆ ಮತ್ತು ಬಲಿಯಾಗಿರುವುದು ಸಂಸತ್ ಕಲಾಪ ಅಷ್ಟೇ.

“ಅಟಲ್ ಬಿಹಾರಿ ವಾಜಪೇಯಿ” ಪ್ರತಿಪಕ್ಷದ ನೇತಾರರಾಗಿದ್ದಾಗ ʻನಿಮ್ಮ ಬಳಿ ಸಂಖ್ಯಾಬಲದ ಮತವಿರಬಹುದು, ನಮ್ಮ ಬಳಿ ಪ್ರಭಲವಾದ ತರ್ಕಗಳು ಇವೆ. ಸಂಖ್ಯಾಬಲ ಶಕ್ತಿ ಪ್ರದರ್ಶನಕ್ಕಲ್ಲ. ಸದನದ ವಾದ ವಿವಾದವನ್ನು ಶಕ್ತಿಯಾಗಿಸಿಕೊಂಡು ದೇಶ ಕಟ್ಟಬೇಕುʼ ನೇರವಾಗಿ ಇಂದಿರಾಗಾಂಧಿ ಅವರೆದುರು ವಾದಿಸಿದ್ದರು. ಆ ಸ್ಥಿತಿ ಈಗಿಲ್ಲ. ಪರಿಣಾಮ ನೋಡಿ ಸಂಸತ್ ಅಧಿವೇಶನವನ್ನು ಪ್ರತಿಪಕ್ಷಗಳು ಸಮರ್ಥವಾಗಿ ಬೆಳೆಸಿಕೊಂಡು ಸರಕಾರವನ್ನೇ ಬೆತ್ತಲೆಗೊಳಿಸಬಹುದಿತ್ತು. ಪ್ರತಿಪಕ್ಷದ ಬಹುದೊಡ್ಡ ಅಸ್ತ್ರ ಪ್ರಶ್ನೋತ್ತರ ಮತ್ತು ಶೂನ್ಯವೇಳೆ. ಸಾಕಷ್ಟು ಪ್ರಶ್ನೆಗಳನ್ನು ದೇಶ, ರಾಜ್ಯ, ಸಾರ್ವಜನಿಕ ಸಮಸ್ಯೆ, ಆರ್ಥಿಕ ಸಾಮಾಜಿಕ ವ್ಯವಸ್ಥೆ, ಹಲವಷ್ಟು ಯೋಜನೆಗಳ ಕುರಿತು ಸಂಸದರಿಗೆ ಪ್ರಶ್ನೆ ಕೇಳುವ ಹಕ್ಕಿದೆ. ತನ್ಮೂಲಕ ಮಾಹಿತಿಯನ್ನು ದೇಶಾದ್ಯಂತ ಹೊರ ಹಾಕಬಹುದಿತ್ತು. ಹಾಗೇ ಶೂನ್ಯ ವೇಳೆಯನ್ನು ಬಳಸಿಕೊಂಡು ವಿಶೇಷ ನಿಲುವಳಿ ಸೂಚನೆಗಳನ್ನು ಮಂಡಿಸಿ, ಸರಕಾರ ತಪ್ಪು ಮಾಡಿದ್ದರೆ ಜಾಡಿಸಬಹುದಿತ್ತು. ಹಾಗೇ ಸರಕಾರ ಕೂಡ ತಾನು ಮಾಡಿರುವ ಸಾಧನೆಗೆ, ಕೈಗೊಂಡ ಯೋಜನೆಗಳ ಬಗ್ಗೆ ಸಂಸತ್ತಿನಲ್ಲಿ ಪ್ರಭಲವಾಗಿ ಮಂಡಿಸುವ ಮೂಲಕ ಪ್ರಚಾರ ಪಡೆಯಬಹುದಿತ್ತು. ಯಾವುದೂ ಇಲ್ಲದಂತಾಯಿತಲ್ಲ.

ಪ್ರತಿಪಕ್ಷಗಳ ಬಹಿಷ್ಕಾರದ ಪರಿಣಾಮ ಸುಮಾರು 19 ಮಸೂದೆಗಳು ಯಾವ ಚರ್ಚೆ ಇಲ್ಲದೆ ಐದು ನಿಮಿಷದಲ್ಲಿ ಮಂಜೂರುವಾಗಿಬಿಟ್ಟಿವೆ. ಸಂಸದೀಯ ದಾಖಲಾಗಿರಬೇಕಾಗಿರುವುದು ಸುದೀರ್ಘ ಚರ್ಚೆ, ಮಸೂದೆಗಳ ಆಗು-ಹೋಗುಗಳ ಮೇಲೆ ಬೆಳಕು ಚೆಲ್ಲಬೇಕಾಗಿತ್ತು. ಪ್ರತಿಪಕ್ಷ ಇದಕ್ಕೆ ಬೆಲೆ ತೆರಲೇಬೇಕಾಗಿದೆ.

ಪ್ರತಿಭಟನೆಗಳು, ವಾದ-ವಿವಾದಗಳು ಸಂಸತ್ತಿನಲ್ಲಿ ಈಗಷ್ಟೇ ಅಲ್ಲ, ನೆಹರು ಅವರ ಕಾಲದಿಂದಲೂ ಇದೆ. ಆಗಲೆ ಪ್ರಖರ ಸಮಾಜವಾದಿ ಚಿಂತಕ ರಾಮಮನೋಹರ ಲೋಹಿಯಾ ಹೇಳುತ್ತಿದ್ದರು, ʻಸಂಸತ್ ಅಸಮರ್ಥವಾದಾಗ ಬೀದಿಗಳು ಸಕ್ರೀಯವಾಗುತ್ತವೆ. ಜೀವಂತವಾಗಿರುವ ಸಮಾಜಗಳು ಐದು ವರ್ಷಗಳ ಕಾಲ ಸಮಸ್ಯೆ ಪರಿಹಾರಕ್ಕಾಗಿ ಕಾಯುವುದಿಲ್ಲʼ ಎಂದು ಎಚ್ಚರಿಸಿ, ಸಮಾಜವಾದಿ ಆಂದೋಲನ ಕೈಗೊಂಡವರು. ʻಪ್ರಜಾಪ್ರಭುತ್ವ ಕೇವಲ ಪಕ್ಷಗಳ ಸರ್ವಾಧಿಕಾರವಾಗಬಾರದು. ಅಧಿಕಾರವೂ ತಳಮಟ್ಟದ ಸಮುದಾಯಕ್ಕೆ ಸಿಗಬೇಕುʼ ಎಂದು ಜಯಪ್ರಕಾಶ ನಾರಾಯಣ ʻಸಂಪೂರ್ಣ ಕ್ರಾಂತಿಯ ಅಗತ್ಯತೆʼಯ ಬಗ್ಗೆ ಪ್ರತಿಪಾದಿಸಿದ್ದರು. ಈಗಾಗಿರುವ 20 ದಿನಗಳ ಸಂಸತ್ ಕಲಾಪ ನಷ್ಟಕ್ಕೆ ಸರಕಾರ ಪ್ರತಿಪಕ್ಷ ಎರಡೂ ಹೊಣೆ ಹೊರಲೇಬೇಕಾಗಿದೆ.

ಇನ್ನೊಂದು ದುರಂತ ಹಾಗೂ ತಮಾಷೆಯೆಂದರೆ ಉತ್ತರಾದಾಯಿತ್ವ ಹೊಂದಿರುವ ಸಂಸತ್ತಿಗೆ ಪ್ರಧಾನ ಮಂತ್ರಿ, ಗೃಹಸಚಿವರು ಬಾರದೇ ಉಪೇಕ್ಷಿಸಿರುವುದು! ಇದನ್ನ ಪ್ರಜಾಪ್ರಭುತ್ವದ ಅಣಕವೋ, ಅಪಹಾಸ್ಯ ಎನ್ನಬೇಕೋ!. ಭವ್ಯ ಪರಂಪರೆ ಹೊಂದಿರುವ ಭಾರತದ ಸಂಸತ್ತಿಗೆ ಪ್ರಜಾಪ್ರಭುತ್ವದ ಕೇಂದ್ರ ಸ್ಥಾನವಾಗಿರುವ ಲೋಕಸಭೆ- ರಾಜ್ಯಸಭೆ ಅಧಿವೇಶನಗಳಿಗೆ ಪ್ರಧಾನಿ ಹಾಜರಾಗುವುದೇ ಇಲ್ಲ. ಈಗೀಗ ಗೃಹಸಚಿವರೂ ಬರುತ್ತಿಲ್ಲ! ಸದನ ಎತ್ತಿದ ಪ್ರಶ್ನೆಗಳಿಗೆ ಹೊರಗಡೆ ಮನ್ ಕೀ ಬಾತ್, ಸಭೆ ಸಾರಂಭಗಳಲ್ಲಿ, ಇನ್‌ಸ್ಟಾಗ್ರಾಮ್ ರೀಲ್ಸ, ಸೆಲ್ಫಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಉತ್ತರಿಸುತ್ತಿರುವ ಪ್ರಧಾನ ಮಂತ್ರಿಗಳು ಮತ್ತು ಗೃಹಸಚಿವರು ಸಂಸತ್ತಿಗೆ ಏಕೇ ಬರುವುದಿಲ್ಲ? ಇದು ಜನಸಾಮಾನ್ಯರು ಕೇಳುವ ಪ್ರಶ್ನೆಯಾಗಿ ಬಿಟ್ಟಿದೆ.

ಸಂಸತ್ ಹೋರಾಟದ ವೇದಿಕೆಯಲ್ಲ, ಆದರೆ ಜವಾಬ್ದಾರಿ ಸ್ಥಾನದಲ್ಲಿರುವವರೂ ದೇಶದ ಚುಕ್ಕಾಣಿ ಹಿಡಿದವರು ಸಂಸತ್ತಿಗೆ ಬಾರದಿದ್ದರೇ ಸಂಸತ್ತಿನ ಘನತೆ, ಉತ್ತರದಾಯಿತ್ವ ಎಲ್ಲಿ? ನೆಹರು ಆದಿಯಾಗಿ ಮನಮೋಹನ್ ಸಿಂಗ್‌ವರೆಗೂ ಸಂಸತ್ ಅಧಿವೇಶನದ ವೇಳೆ ಬಹುತೇಕ ಸಮಯ ಅಲ್ಲಿಯೇ ಕಳೆಯುತ್ತಿದ್ದರು. ಸದಸ್ಯರು ಎತ್ತಿದ ಪ್ರಶ್ನೆಗಳಿಗೆ ಆ ಕ್ಷಣದಲ್ಲಿಯೇ ಉತ್ತರಿಸುತ್ತಿದ್ದರು. ಪ್ರಧಾನಿ ಮಂತ್ರಿಗಳೇ ನೇರವಾಗಿ ನಿರ್ವಹಣೆ ಮಾಡುವ ಎಲ್ಲ ಖಾತೆಗಳಿಗೆ ಪ್ರಶ್ನೋತ್ತರ ಅವಧಿಯಲ್ಲಿಯೇ ಅವರುಗಳೇ ಉತ್ತರಿಸುತ್ತಿದ್ದರು. ಈ ಘನಪರಂಪರೆ ಈಗೇಕ್ಕಿಲ್ಲ. ಪ್ರಜಾಪ್ರಭುತ್ವದ ಕರಾಳ ಅಧ್ಯಾಯ ಎನ್ನುವ ತುರ್ತು ಪರಿಸ್ಥಿತಿ ಘೋಷಣೆ ರುವಾರಿ ಇಂದಿರಾ ಗಾಂಧಿ ಸಂಸತ್ ಕಲಾಪಗಳಲ್ಲಿ ಸಕ್ರೀಯವಾಗಿದ್ದರು ಹಾಗೂ ಆ ನಂತರವೂ ಸಂಸತ್ತಿನಲ್ಲಿ ಪ್ರತಿಪಕ್ಷವಾಗಿದ್ದುಕೊಂಡು ತುರ್ತುಪರಿಸ್ಥಿತಿಯನ್ನೂ ಸಮರ್ಥಿಸಿಕೊಂಡಿದ್ದರು. ಹಾಗೇಂದು ಯಾರ ಮೈಕ್ ಕಟ್ ಆಗಿರಲಿಲ್ಲ ಅಥವಾ ಚುಪ್ ರಹೋ ನಾನು ಹೇಳಿದ ಹಾಗೆ ಸಂಸತ್ ನಡೆಯಬೇಕು.. ಎಂದು ಹೇಳಿದವರಿಲ್ಲ. ಭಾರತದ ಸಂಸತ್ತಿನ ಪ್ರೌಢ ಚರ್ಚೆ, ಮಹಾನ್ ಸಂಸದೀಯ ಪಟುಗಳ ವಾದ ಸರಣಿ ಕೇಳಿದ ಜನ ಜಗತ್ತು ಹೆಮ್ಮೆ ಪಟ್ಟುಕೊಂಡಿದೆ. ಪ್ರೌಢ ಪ್ರಜಾಪ್ರಭುತ್ವ ಎಂಬ ಹಿರಿಮೆ ಗರಿಮೆ ಗಳಿಸಿದ್ದುಂಟು..

ಈಗ ಈ ವಿಷಯ ಪ್ರಸ್ತಾಪಿಸುತ್ತಿರುವುದು ಏಕೆಂದರೆ, ಕರ್ನಾಟಕ ವಿಧಾನಸಭೆಯ ಪ್ರಸಕ್ತ ಮುಂಗಾರು ಅಧಿವೇಶನ ಆರಂಭವಾಗುತ್ತಿದೆ. ಹೊಸ ಮುಖ್ಯಮಂತ್ರಿ, ಇಂದಷ್ಟೇ ಖಾತೆ ಪಡೆದ ಮಂತ್ರಿಗಳು, ನೂತನ ಸಭಾಧ್ಯಕ್ಷರು, ಸಭಾಪತಿಗಳ ಪಟ್ಟಾಭಿಷೇಕದೊಂದಿಗೆ ಕರ್ನಾಟಕ ವಿಧಾನಸಭಾ ಕಲಾಪ ಇನ್ನೇನು ಪ್ರಾರಂಭವಾಗಲಿದೆ. ಇಡೀ ಅಧಿವೇಶನದಲ್ಲಿ ಈಗ ಬರ-ಅನಾವೃಷ್ಟಿಯಿಂದ ಬಳಲಿರುವ ಜನಸಂಕಷ್ಟಕ್ಕೆ ಪರಿಹಾರ ಬೇಕಿದೆ. ಬಿತ್ತನೆ ಮಾಡಲಾಗದೆ ಬೀಳು ಬಿಟ್ಟ ರೈತರ ಭೂಮಿಗೂ ಪರಿಹಾರ, ವಲಸೆ ಹೊಂಟವರಿಗೆ ದುಡಿಮೆ ಕಲ್ಪಿಸುವ, ಬೆಳೆವಿಮೆ ವೈಫಲ್ಯ ನಿವಾರಿಸುವ ಚರ್ಚೆ ನಡೆಯಬೇಕಿದೆ. ಹಾಗೇ ಬಿಡದಿ ನೂತನ ಟೌನ್ಶಿಪ್ ವಿವಾದ ಬೀದಿ ಕಾಳಗವಾಗಿದೆ. ಕಾವೇರಿ ನೀರು ವಿವಾದ ರಾಜ್ಯದ ರೈತರ ಪಾಲಿಗೆ ಕಣ್ಣೀರು ತರಿಸಿದೆ. ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಬಹುತೇಕ ಬರ ಆವರಿಸಿವೆ. ಶೇ. 40ರಷ್ಟೂ ಮಳೆಯಿಲ್ಲದ 34 ತಾಲೂಕುಗಳಲ್ಲಿ ಕುಡಿಯುವ ನೀರಿನ ಅಭಾವ ಕಂಡು ಬಂದಿದೆ. ಈ ಎಲ್ಲ ಸಂಕಷ್ಟಗಳಿಗೆ ಪರಿಹಾರ ನೀಡುವುದಾ ಪ್ರಸ್ತುತ ಅಧಿವೇಶನ? ಅಥವಾ ಸಚಿವ ನಾಗೇಂದ್ರ ಅವರ ವಜಾ, ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ಇತ್ಯಾದಿಗಳನ್ನೇ ಹಿಡಿದು ಕರ್ನಾಟಕದ ವಿಧಾನಸಭೆಯ ಅಧಿವೇಶನವೂ ಸಂಸತ್ ಕಲಾಪದಂತೆ ಬಲಿಯಾಗದಿರಲಿ ಹಾಗೂ ಸರ್ಕಾರ , ಮುಖ್ಯಮಂತ್ರಿ ಕೂಡ ಗಂಭೀರವಾಗಿ ಸದನದ ಕಲಾಪ ಪರಿಗಣಿಸಿ ಉತ್ತರದಾಯಿತ್ವ ತೋರಲಿ ಎನ್ನುವ ಎಚ್ಚರಿಕೆಯ ಆಶಯವಿದು.

ಸಂಸತ್‌ನಲ್ಲಷ್ಟೇಯಲ್ಲ, ಕರ್ನಾಟಕ ವಿಧಾನಸಭೆಯಲ್ಲೂ ಧರಣಿ, ಪ್ರತಿಭಟನೆ, ಬಟ್ಟೆ ಹರಿದುಕೊಳ್ಳುವಿಕೆ, ಕೈ ಕೈ ಮಿಲಾಯಿಸಿದ ಘಟನೆಗಳೂ ಜರುಗಿದ ಇತಿಹಾಸಗಳು ಸಾಕಷ್ಟಿದೆ!. ಆದರೆ ಈಗ ಅದು ಮತ್ತೆ ಮರುಕಳಿಸಬಾರದು ಹಾಗೂ ಜನರ ಸಹನೆಯ ಕಟ್ಟೆ ಒಡೆಯುವ ಸ್ಥಿತಿ ತಲುಪಬಾರದು.

ರಾಜ್ಯದಲ್ಲಷ್ಟೇ ಅಲ್ಲ ಈಗ ದೇಶ್ಯಾದಂತ ಜೆನ್ ಜಿ ಯುವಕರು ಎಚ್ಚೆತ್ತಿದ್ದಾರೆ! ಜನರೂ ಜಾಗೃತರಾಗಿದ್ದಾರೆ. ನಿಮ್ಮ ಚಲನವಲನ, ಮಾತು ವಾದ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಚ್ಚರ..!!.