SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ಸವಾಲುಗಳ ಕೋಟೆನಾಡಿಗೆ ರಘುಮೂರ್ತಿ ಪ್ರವೇಶ : ಬೆಟ್ಟದಷ್ಟು ಭರವಸೆ

ಸವಾಲುಗಳ ಕೋಟೆನಾಡಿಗೆ ರಘುಮೂರ್ತಿ ಪ್ರವೇಶ : ಬೆಟ್ಟದಷ್ಟು ಭರವಸೆ

0
92
File Photo

ಬರ, ಭದ್ರೆ, ಹಿರಿಯೂರು ಚುನಾವಣೆ ಟಾಸ್ಕ್ : ದೊಡ್ಡಹಳ್ಳಿಯೆಂಬ ವ್ಯಂಗ್ಯಕ್ಕೆ ಬೇಕು ಮುಕ್ತಿ

ಈ. ಮಹೇಶಬಾಬು

ಸಂ.ಕ.ಸಮಾಚಾರ, ಚಿತ್ರದುರ್ಗ: ಜಿಲ್ಲಾ ಕೇಂದ್ರವನ್ನೇ ನಾಚಿಸುವ ರೀತಿ ಚಳ್ಳಕೆರೆ ತಾಲೂಕಲ್ಲಿ ವಿಶಾಲ ರಸ್ತೆ, ಸರ್ಕಾರಿ ಕಾಲೇಜ್-ಕಚೇರಿಗಳ ಕಟ್ಟಡ, ಹೈಟೆಕ್ ಬಸ್ ನಿಲ್ದಾಣ, ಎಲ್ಲೆಡೆ ಚೆಕ್‌ಡ್ಯಾಮ್…! ಹೀಗೆ ಅಭಿವೃದ್ಧಿಯ ಹೊಳೆ ಹರಿಸಿ ಜನರ ಚಿತ್ತ ಚಳ್ಳಕೆರೆಯತ್ತ ಸೆಳೆದಿರುವ ಶಾಸಕ ಟಿ.ರಘುಮೂರ್ತಿ ಅವರಿಗೆ ಸಚಿವ ಸ್ಥಾನ ಒಲಿದಿದ್ದು, ಜಿಲ್ಲಾ ಉಸ್ತುವಾರಿ ಸೌಭಾಗ್ಯವೂ ಲಭಿಸುವುದು ಖಚಿತವಾಗಿದೆ.

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಜಿಲ್ಲೆಗೆ ಬುಧವಾರ ಪ್ರವೇಶಿಸಿರುವ ಟಿ.ರಘುಮೂರ್ತಿ ಅವರನ್ನು ಸ್ವಾಗತಿಸಲು ದುರ್ಗ ಸಜ್ಜಾಗಿದ್ದು, ಎಲ್ಲೆಡೆ ಫ್ಲೆಕ್ಸ್, ಬಾವುಟಗಳು ರಾರಾಜಿಸುತ್ತಿವೆ. ಚಳ್ಳಕೆರೆ ಗೇಟ್‌ನಿಂದ ಮದಕರಿ ನಾಯಕ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಸಿ ವಾಲ್ಮೀಕಿ ಸಮುದಾಯ ಸನ್ಮಾನಿಸಲಿದೆ. ಬಳಿಕ ಅಂಬೇಡ್ಕರ್ ವೃತ್ತದಲ್ಲಿ ಕರುನಾಡು ವಿಜಯಸೇನೆ ಅಭಿನಂದನೆ ಅರ್ಪಿಸಲಿದೆ. ಹೀಗೆ ಅನೇಕ ಸಂಘಟನೆಗಳು ಸಾಲು ಸಾಲಾಗಿ ಕಾರ್ಯಕ್ರಮ ಹಮ್ಮಿಕೊಂಡಿವೆ.

ಮೊದಲ ಬಾರಿಗೆ ಮಂತ್ರಿ ಸ್ಥಾನ ಅಲಂಕರಿಸಿರುವ ಸಂಭ್ರಮದಲ್ಲಿರುವ ಟಿ.ರಘುಮೂರ್ತಿ ಸವಾಲುಗಳ ಮೂಟೆಯನ್ನೇ ಹೆಗಲ ಮೇಲೆ ಹೊತ್ತುಕೊಂಡು ಜಿಲ್ಲೆ ಪ್ರವೇಶಿಸುತ್ತಿರುವುದು ನೈಜ ಸತ್ಯ. ಅದೇ ರೀತಿ ನೂತನ ಸಚಿವರ ಮೇಲೆ ಬೆಟ್ಟದಷ್ಟು ಭರವಸೆಗಳನ್ನಿಟ್ಟುಕೊಂಡೇ ಕೋಟೆನಾಡು ಜನರು ಅದ್ದೂರಿ ಸ್ವಾಗತಕ್ಕೆ ಸಿದ್ಧಗೊಂಡಿದ್ದಾರೆ. ನೂರಾರು ಬೇಡಿಕೆಗಳ ಮೂಟೆಗೆ ಕಟ್ಟಿರುವ ಗಂಟನ್ನು ಸಚಿವರು ಬಿಚ್ಚಿ ಸಮಸ್ಯೆ ಪರಿಹರಿಸುತ್ತಾರೆಂಬ ಭರವಸೆಯಲ್ಲಿ ಮದಕರಿ ಊರಿನ ಜನರಿದ್ದಾರೆ.

ಪ್ರಮುಖವಾಗಿ ಎದುರಾಗಿರುವ ಬರಗಾಲ ಸವಾಲಿಗೆ ತಕ್ಷಣವೇ ಉತ್ತರ ಕಂಡುಕೊಳ್ಳಬೇಕಿದೆ. ಚಳ್ಳಕೆರೆಯಲ್ಲಿನ ಅಭಿವೃದ್ಧಿಯ ಹೆಗ್ಗುರುತುಗಳು ಚಿತ್ರದುರ್ಗ ಅಷ್ಟೇ ಅಲ್ಲದೆ ಜಿಲ್ಲಾದ್ಯಂತ ಮೂಡಬೇಕಿದೆ. ಅದರಲ್ಲೂ ಜಿಲ್ಲಾ ಕೇಂದ್ರವನ್ನು ದೊಡ್ಡಹಳ್ಳಿಯೆಂಬ ಅಪಹಾಸ್ಯಕ್ಕೆ ಮುಕ್ತಿ ನೀಡಬೇಕಿದೆ. ದಶಕಗಳ ಕಾಲದಿಂದಲೂ ಮಾತುಗಳಲ್ಲಿಯೇ ಉಳಿದಿರುವ ರಸ್ತೆ ವಿಸ್ತರಣೆ ಕಾರ್ಯರೂಪಕ್ಕೆ ಇಳಿಯಬೇಕಿದೆ. ಜಿಲ್ಲಾಸ್ಪತ್ರೆಗೆ ಬಹುದೊಡ್ಡ ತುರ್ತು ಶಸ್ತçಚಿಕಿತ್ಸೆ ಆಗಬೇಕಿದ್ದು, ಶಾಲಾ-ಕಾಲೇಜ್‌ಗಳ ಕಟ್ಟಡಗಳು ಮರು ನಿರ್ಮಾಣಗೊಳ್ಳಬೇಕಿದೆ.

ಐತಿಹಾಸಿಕ ಕೋಟೆ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರನ್ನು ಕಿರಿಕಿರಿಗೊಳಿಸುವ ಕಿಷ್ಕಿಂಧೆ ರಸ್ತೆಯನ್ನು ರಾಜಮಾರ್ಗವನ್ನಾಗಿಸಬೇಕಿದೆ. 17 ವರ್ಷವಾಗಿದ್ದರೂ ಪೂರ್ಣಗೊಳ್ಳದ ಭದ್ರಾ ಯೋಜನೆ ಕಾಮಗಾರಿ ತ್ವರಿತಗೊಳಿಸಿ ಬಯಲುಸೀಮೆಗೆ ನೀರು ಹರಿಸಬೇಕಿದೆ. ಇನ್ನೂ ರಾಜಕೀಯವಾಗಿ ಚಾಣಾಕ್ಷö್ಯತನ ಪ್ರದರ್ಶನಕ್ಕೆ ಹಿರಿಯೂರು ಉಪ ಚುನಾವಣೆಯಲ್ಲಿ ಮುಖಂಡರನ್ನು ಒಗ್ಗೂಡಿಸಿಕೊಂಡು ಗೆದ್ದು ಬೀಗಬೇಕಿದೆ.

ಹೀಗೆ ವಿವಿಧ ಕ್ಷೇತ್ರಗಳಲ್ಲಿನ ಬೇಡಿಕೆ ಈಡೇರಿಕೆಗೆ ಜೊತೆಗೆ ಅನೇಕ ಜ್ವಲಂತ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಮೇಲ್ನೋಟಕ್ಕೆ ಹೂವಿನ ಹಾಸಿಗೆಯಂತೆ ಸಚಿವ ಸ್ಥಾನ ಕಾಣುತ್ತಿದ್ದರೂ ಮುಳ್ಳಿನ ಹಾದಿಯಲ್ಲಿ ಸಾಗಿ ಅಭಿವೃದ್ಧಿಯ ಹರಿಕಾರನೆಂಬ
ಪಟ್ಟಕ್ಕೆ ಧಕ್ಕೆ ಬಾರದಂತೆ ಕೇವಲ 645 ದಿನಗಳಲ್ಲಿ ಕಾರ್ಯನಿರ್ವಹಿಸುವ ಸವಾಲು ರಘುಮೂರ್ತಿ ಎದುರಿಗಿದೆ.

ಪ್ರಮುಖ ಕಾರ್ಯಗಳು : 1) ಭದ್ರಾ ಕಾಮಗಾರಿ ಶೀಘ್ರ ಮುಕ್ತಾಯ. 2) ಜಿಲ್ಲೆಯಲ್ಲಿ ಸಮಗ್ರ ನೀರಾವರಿ. 3) ಕೇಂದ್ರದಿಂದ ಘೋಷಿತ 5,300 ಕೋಟಿ ಹಣ ತರಲು ಸಮನ್ವಯತೆ. 4) ಜಿಲ್ಲಾ ಕೇಂದ್ರದಲ್ಲಿ ರಸ್ತೆ ವಿಸ್ತರಣೆ. 5) ದುಗೋತ್ಸವ ಆಚರಣೆಯೊಂದಿಗೆ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕಿದೆ. 6) ಹಿರಿಯೂರು ಉಪ ಚುನಾವಣೆ. 7) ಜಿಲ್ಲಾಧಿಕಾರಿ ಕಚೇರಿ, ಮೆಡಿಕಲ್, ಕಾಲೇಜ್ ಕಟ್ಟಡ ಗೊಂದಲ ನಿವಾರಣೆ. 8) ಪಕ್ಷ ಹಾಗೂ ಸರ್ಕಾರದ ಮಧ್ಯೆ ಸಮನ್ವಯತೆ. 9) ಪಕ್ಷನಿಷ್ಠರಿಗೆ ಸರ್ಕಾರದಲ್ಲಿ ಸ್ಥಾನಮಾನ. 10) ಜಾತ್ಯತೀತ ತತ್ವ ಪಾಲನೆ. 11) ಜಿಲ್ಲಾಸ್ಪತ್ರೆಗೆ ಹೈಟೆಕ್ ಸ್ಪರ್ಶ. 12) ಜಡ್ಡುಗಟ್ಟಿದ ಅಧಿಕಾರಿ ವರ್ಗ, ನಗರಸಭೆಯಲ್ಲಿನ ಅವ್ಯವಸ್ಥೆಗೆ ಮುಕ್ತಿ. 13) ಕಿರಿದಾದ ರಸ್ತೆಗಳಿಗೆ ವಿಶಾಲತೆ ಭಾಗ್ಯ. 14) ಒಳ ಮತ್ತು ಹೊರ ಚರಂಡಿ ಅವ್ಯವಸ್ಥೆ ಸರಿಪಡಿಸುವುದು. 15) ತೋಟಗಾರಿಕೆ ಇಲಾಖೆ ಹಾಗೂ ವಿಜ್ಞಾನ ಕಾಲೇಜ್ ಆವರಣದಲ್ಲಿನ ಮರ-ಗಿಡ ಉಳಿಸುವುದು ಸೇರಿ ನೂರಾರು ಸವಾಲುಗಳು ಎದುರಿಗಿದ್ದು, ಇವುಗಳನ್ನು ಮೆಟ್ಟಿನಿಂತು ಜಿಲ್ಲೆಯ ಸಮಗ್ರ ಪ್ರಗತಿಗೆ ಶ್ರಮಿಸಬೇಕಿದೆ.

ನಕಲಿ ಪಿಎಗಳ ಹಾವಳಿ? :

ಸಚಿವರಾದ ಬಳಿಕ ಜವಾಬ್ದಾರಿ ಹೆಚ್ಚುವ ಜೊತೆಗೆ ಜಿಲ್ಲೆ, ರಾಜ್ಯ ಸುತ್ತಾಟ ಹಿನ್ನೆಲೆಯಲ್ಲಿ ಕ್ಷೇತ್ರದತ್ತ ಗಮನ ಕಡಿಮೆ ಆಗಲಿದೆ. ಇದನ್ನೇ ತನ್ನ ಹಿಂಬಾಲಕರು, ಬೆಂಬಲಿಗರು, ಆಪ್ತ ಬಳಗದಲ್ಲಿ ಬೆರಳೆಣಿಕೆ ಮಂದಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಹೆಜ್ಜೆಗೊಬ್ಬರು, ಹಳ್ಳಿಗೆ ಹತ್ತು ಮಂದಿ ಅನಧಿಕೃತ ಪಿಎಗಳು ಅಣಬೆ ರೀತಿ ಹುಟ್ಟಿಕೊಂಡು ಕಳಂಕ ತರುವ ಸಂಭವ ಹೆಚ್ಚು. ಪಟ್ಟಭದ್ರರ ಕೋಟೆ ಸುತ್ತಲೂ ನಿರ್ಮಾಣಗೊಳ್ಳಲಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ.