SK Home Ad
Home ನಮ್ಮ ಜಿಲ್ಲೆ ವಿಜಯಪುರ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿಯೂ ಗೊಂದಲ: ಪ್ರತಿಭಟನೆ

ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿಯೂ ಗೊಂದಲ: ಪ್ರತಿಭಟನೆ

0
52

ವಿಜಯಪುರ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಅಂತಾರಾಷ್ಟ್ರೀಯ ಸುದ್ದಿಯಾದ ಬೆನ್ನಲೇ ಅತ್ಯಂತ ಭದ್ರತೆಯಲ್ಲಿ ನಡೆದ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿಯೂ ಓಎಂಆರ್ ಶೀಟ್ ಹಾಗೂ ಪ್ರಶ್ನೆ ಪತ್ರಿಕೆಯಲ್ಲಿ ಆಗಿರುವ ವ್ಯತ್ಯಾಸದಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಪ್ರಸಂಗ ವಿಜಯಪುರದ ತಿಕೋಟಾ ಪಟ್ಟಣದ ಪರೀಕ್ಷಾ ಕೇಂದ್ರದ ಎದುರು ನಡೆಯಿತು.

ಆಗಿದ್ದೇನು?: ತಿಕೋಟಾ ಪಟ್ಟಣದ ಶಾರದಾಂಬಾ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ವಿತರಿಸಲಾದ ಪ್ರಶ್ನೆ ಪತ್ರಿಕೆ ಮತ್ತು ಒಎಂಆರ್ ಶೀಟ್ ನಡುವೆ ವ್ಯತ್ಯಾಸವಾದ ಕಾರಣಕ್ಕೆ ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದರು. ಈ ವೇಳೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಗೇಟ್‌ನ್ನು ತಳ್ಳಿ, ಪೊಲೀಸರ ಜೊತೆ ವಾಗ್ವಾದ ಮಾಡಿದರು. ಕೆಲವು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದತ್ತ ನುಗ್ಗಲು ಯತ್ನಿಸಿದರು. ಈ ವೇಳೆ ಅಭ್ಯರ್ಥಿಗಳನ್ನು ಚದುರಿಸಲು ಲಾಠಿ ಬೀಸಿದರು. ಅಯೋಮಯ ಸ್ಥಿತಿ ಉಂಟಾಯಿತು. ಅಭ್ಯರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಅರ್ಧ ಗಂಟೆ ವಿಳಂಬ: 10.30ಕ್ಕೆ ಕೊಡಬೇಕಿದ್ದ ಪ್ರಶ್ನೆ ಪತ್ರಿಕೆ ಅರ್ಧ ಗಂಟೆ ತಡವಾಗಿ 11ಕ್ಕೆ ನೀಡಲಾಗಿದೆ, ನಾವು ಕೇವಲ ಐದು ನಿಮಿಷ ತಡವಾದರೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡುವುದಿಲ್ಲ. ಭರ್ತಿ ಅರ್ಧಗಂಟೆ ಪತ್ರಿಕೆ ತಡವಾಗಿ ವಿತರಿಸಲಾಗಿದೆ. ವರ್ಷಗಟ್ಟಲೇ ನಾವು ಓದಿದ್ದಕ್ಕೆ ಬೆಲೆ ಇಲ್ಲವೇ, ಈ ರೀತಿ ಗೊಂದಲ ಹಾಗೂ ಓಎಂಆರ್ ಕೊಡುವುದು ವಿಳಂಬವಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ ಮರು ಪರೀಕ್ಷೆ ನಡೆಸಿ, ನಮಗೆ ಅನ್ಯಾಯ ಮಾಡಲು ಹೋಗಬೇಡಿ ಎಂದು ಅನೇಕ ವಿದ್ಯಾರ್ಥಿಗಳು ಅಳಲು ತೋಡಿಕೊಂಡ ಘಟನೆ ನಡೆಯಿತು.

ಜಿಲ್ಲೆಯ 61 ಕೇಂದ್ರಗಳಲ್ಲಿ ಪೊಲೀಸ್ ನೇಮಕಾತಿ ಪರೀಕ್ಷೆ ನಡೆದಿದ್ದು, ಪರೀಕ್ಷೆಗೆ 24,434 ಪರೀಕ್ಷಾರ್ಥಿಗಳು ಹೆಸರು ನೊಂದಾಯಿಸಿಕೊಂಡಿದ್ದರೂ, ಸೂಸೂತ್ರ ಪರೀಕ್ಷೆ ಹಾಗೂ ಪರೀಕ್ಷಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಅನೇಕ ಕ್ರಮ ಕೈಗೊಂಡಿದ್ದರೂ ತಿಕೋಟಾ ಕೇಂದ್ರದಲ್ಲಿ ಗೊಂದಲ ಉಂಟಾಯಿತು.