ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಮತ್ತೆ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹಾಗೂ ವಿವಿಧ ಜಲಾಶಯಗಳಿಂದ ನೀರು ಬಿಡುಗಡೆ ಮಾಡುತ್ತಿರುವುದರಿಂದ ರಾಜ್ಯಕ್ಕೆ ಬುಧವಾರ 76,288 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದಾಗಿ ನೀರಿನ ಮಟ್ಟ ಸುಮಾರು 4 ಅಡಿ ಮತ್ತೆ ಏರಿಕೆಯಾಗಿದ್ದು, ಕೆಳಹಂತದ ಬ್ಯಾರೇಜ್ಗಳು ಮತ್ತೆ ಮುಳುಗಡೆಯಾಗಿವೆ.
ರಾಧಾನಗರ ಜಲಾಶಯದಿಂದ 1,400 ಕ್ಯೂಸೆಕ್, ವಾರಣಾ-6,900, ಧೂವ್-1,668 ಮತ್ತು ಕನ್ಹೇರದಿಂದ 3,649 ಕ್ಯೂಸೆಕ್ ಬಿಡುಗಡೆಯಿಂದಾಗಿ ಸುಳಕೂಡ ಬ್ಯಾರೇಜ್ ಮುಖಾಂತರ ದೂಧಗಂಗಾ ನದಿಗೆ 14,080 ಕ್ಯೂಸೆಕ್ ಮತ್ತು ಕೃಷ್ಣಾ ನದಿಗೆ ರಾಜಾಪುರ ಬ್ಯಾರೇಜ್ ಮುಖಾಂತರ 62,208 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ವೇದಗಂಗಾ ನದಿಯ ಜತ್ರಾಟ-ಭಿವಸಿ, ಅಕ್ಕೋಳ-ಸಿದ್ನಾಳ, ಬಾರವಾಡ-ಕುನ್ನುರ ಮತ್ತು ಭೋಜ-ಶಿವಾಪುರವಾಡಿ, ದೂಧಗಂಗಾ ನದಿಯ ಕಾರದಗಾ-ಭೋಜ, ಮಲಿಕವಾಡ-ದತವಾಡ, ಕೃಷ್ಣಾ ನದಿಯ ಕಲ್ಲೋಳ-ಯಡೂರ, ಮಾಂಜರಿ-ಸವದತ್ತಿ ಹೀಗೆ ಗಡಿಭಾಗದ ಎಲ್ಲಾ 8 ಬ್ಯಾರೇಜ್ಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ. ಈ ಬಾರಿ 3ನೇ ಬಾರಿ ಬ್ಯಾರೇಜ್ಗಳು ಜಲಾವೃತಗೊಂಡಿವೆ. ಇದರಿಂದಾಗಿ ಪ್ರಯಾಣಿಕರು ಸುತ್ತುವರೆದು ಪ್ರವಾಸ ಬೆಳೆಸುವ ಪ್ರಸಂಗ ಬಂದೊದಗಿದೆ.
ಭರ್ತಿಯಾಗುತ್ತಿರುವ ಮಹಾರಾಷ್ಟ್ರ ಜಲಾಶಯ: ಕೊಯ್ನಾ ಶೇ. 78.28 ರಷ್ಟು, ವಾರಣಾ ಶೇ. 84.91ರಷ್ಟು, ರಾಧಾನಗರ ಶೇ. 86.53ರಷ್ಟು, ಪಾಟಗಾಂವ ಶೇ. 65.85 ಮತ್ತು ಕಾಳಮ್ಮವಾಡಿ ಶೇ. 58.97 ರಷ್ಟು ಭರ್ತಿಯಾಗಿದೆ.






















