ಹುಬ್ಬಳ್ಳಿ: ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಬಹುಮತ ಪಡೆದಿರುವ ಹಿನ್ನೆಲೆಯಲ್ಲಿ ತಮ್ಮವರನ್ನೇ ಸಭಾಪತಿಯನ್ನಾಗಿ ಮಾಡಬೇಕು ಎನ್ನುವ ಚಿಂತನೆಗೆ, ಈಗ ಸ್ವತಃ ಮುಖ್ಯಮಂತ್ರಿಗಳೇ ಅಖಾಡಾಕ್ಕೆ ಇಳಿದಿರುವುದು ರಾಜಕೀಯವಾಗಿ ರಂಗು ಪಡೆದುಕೊಂಡಿದೆ.
ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆ ನೀಡುವಂತೆ ಖುದ್ದು ಸಿಎಂ ಡಿ.ಕೆ.ಶಿವಕುಮಾರ್ ದೂರವಾಣಿ ಕರೆ ಮಾಡಿ ಸೂಚಿಸಿರುವುದಾಗಿ ತಿಳಿದು ಬಂದಿದೆ.
ಸಾಂವಿಧಾನಿಕವಾದ ಅತ್ಯುನ್ನತ ಹುದ್ದೆಯಲ್ಲಿರುವ ಸಭಾಪತಿಗಳಿಗೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಗಳೇ ನೇರವಾಗಿ ಹೇಳಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ನಿಕಟಪೂರ್ವ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಇರುವ ಆತ್ಮೀಯ ಸಂಬಂಧದ ಹಿನ್ನೆಲೆಯಲ್ಲಿ ಹೊರಟ್ಟಿಯವರನ್ನು ಬದಲಿಸುವುದಕ್ಕೆ ಈವರೆಗೆ ಕಾಂಗ್ರೆಸ್ ಮನಸ್ಸು ಮಾಡಿರಲಿಲ್ಲ. ಆದರೆ ಜೂನ್ ತಿಂಗಳಲ್ಲಿ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯ ನಂತರ ಮೇಲ್ಮನೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದುಕೊಂಡಿದೆ.
ಜೊತೆಗೆ ಇನ್ನೈದು ಸ್ಥಾನಗಳಿಗೆ ನಾಮಕರಣ ಪ್ರಕ್ರಿಯೆ ಮುಗಿದ ಮೇಲೆ ಈ ಬಹುಮತ ಇನ್ನಷ್ಟು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಇಂತಹ ಕ್ರಮಕ್ಕೆ ಮುಂದಾಗಿದೆ. ವಿಶೇಷವೆಂದರೆ ಕರ್ನಾಟಕ ವಿಧಾನ ಪರಿಷತ್ ಅಸ್ತಿತ್ವಕ್ಕೆ ಬಂದ ನಂತರ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸಭಾಪತಿ ಬದಲಿಸುವ, ರಾಜೀನಾಮೆ ಅಥವಾ ಅವಿಶ್ವಾಸ ನಿರ್ಣಯ ಮಂಡಿಸುವುದು ಇದುವರೆಗೂ ಆಗಿರಲಿಲ್ಲ.
ಆಸ್ಪತ್ರೆಯಲ್ಲಿದ್ದಾಗ ಕರೆ?: ಜುಲೈ 24ರಂದು ಸಭಾಪತಿ ಹೊರಟ್ಟಿಯವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಧ್ಯರಾತ್ರಿ ಹೊತ್ತಿಗೆ ಸಭಾಪತಿಗಳಿಗೆ ಫೋನ್ ಮಾಡಿ `ನೀವು ರಾಜೀನಾಮೆ ಕೊಡಬೇಕು’ ಎಂದರೆನ್ನಲಾಗಿದೆ. ಮುಖ್ಯಮಂತ್ರಿಗಳ ಫೋನ್ ಬಂದಾಗ ಹೊರಟ್ಟಿಯವರು ಡ್ರಿಪ್ ಹಾಕಿಸಿಕೊಂಡು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಮುಖ್ಯಮಂತ್ರಿಗಳ ಕರೆಯಾಗಿದ್ದರಿಂದ ಸಭಾಪತಿಗಳ ಸಹಾಯಕರು ಇಂಥ ಸ್ಥಿತಿಯಲ್ಲೂ ಹೊರಟ್ಟಿ ಯವರನ್ನು ಎಬ್ಬಿಸಿ ಫೋನ್ ಕೊಟ್ಟರು ಎಂದು ತಿಳಿದು ಬಂದಿದೆ.
ಮುಂದಿನ ನಡೆಯೇನು?: ಸಭಾಪತಿ ಹೊರಟ್ಟಿಯವರ ಮುಂದಿನ ನಡೆ ಏನು? ಇದು ಈಗ ವ್ಯಾಪಕವಾಗಿ ಕೇಳಿ ಬರುತ್ತಿರುವ ಹಾಗೂ ಭಾರೀ ಜಿಜ್ಞಾಸೆಗೆ ಕಾರಣವಾಗಿರುವ ಪ್ರಶ್ನೆ. ಹೊರಟ್ಟಿಯವರನ್ನು ಸಮೀಪದಿಂದ ಬಲ್ಲವರು ಹೇಳುವ ಪ್ರಕಾರ, `ಸಿಎಂ ನೆರವಾಗಿ ಹೀಗೆ ಸೂಚಿಸಿದ್ದು ಸೂಕ್ಷ್ಮಮತಿಯಾಗಿರುವ ಸಭಾಪತಿಗಳಿಗೆ ಇನ್ನಿಲ್ಲದ ನೋವು ತಂದಿದೆ’. ಹೀಗಾಗಿ ಈ ವಿಷಯದಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಡದಂತೆ ಘನತೆಯನ್ನು ಕಾದುಕೊಳ್ಳುವ ತೀರ್ಮಾನಕ್ಕೆ ಅವರು ಬಂದಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಅವಿಶ್ವಾಸ ನಿರ್ಣಯ ಅಥವಾ ಬೇರೆ ಸ್ವರೂಪದ ಅಪಸ್ವರ ಬರುವುದಕ್ಕೆ ಮೊದಲೇ ತಮ್ಮ ಸ್ಥಾನವನ್ನು ಗೌರವಯುತವಾಗಿ ತೊರೆಯಲಿದ್ದಾರೆ ಎಂಬುದು ಸಮೀಪವರ್ತಿಗಳ ಮಾತಿನಿಂದ ವ್ಯಕ್ತವಾಗಿದೆ.
ಉತ್ತರದ ಗಟ್ಟಿ ಧ್ವನಿ: ಮೇಲ್ಮನೆಯಲ್ಲಿ ಉತ್ತರ ಕರ್ನಾಟಕದ ಗಟ್ಟಿ ಧ್ವನಿ ಬಸವರಾಜ ಹೊರಟ್ಟಿ ಅವರದ್ದು. ವೀರಣ್ಣ ಮತ್ತೀಕಟ್ಟಿ ನಂತರ ಕಿತ್ತೂರು ಪ್ರಾಂತ್ಯವನ್ನು ಸ್ಪೀಕರ್ ಆಗಿ ದೀರ್ಘ ಅವಧಿಗೆ ಪ್ರತಿನಿಧಿಸಿರುವುದಲ್ಲದೇ, ಅನೇಕ ರಚನಾತ್ಮಕ ಹೆಜ್ಜೆಗಳನ್ನೂ ಈ ಅವಧಿಯಲ್ಲಿ ದಾಖಲಿಸಿದ್ದಾರೆ. ಅವರನ್ನು ಇಳಿಸಿದರೆ ಪ್ರಾದೇಶಿಕ ಅಸಮಾನತೆ ಮಾತಿಗೆ ಪುಷ್ಟಿ ಬಂದಂತಾಗಲಿದೆ.
ಇತಿಹಾಸದಲ್ಲೇ ಇಲ್ಲ: ಸಭಾಪತಿಗಳು ಸ್ಥಾನ ಬಿಡದಿದ್ದರೆ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ತರುವುದು ಪಕ್ಕಾ ಎಂಬ ಮಾತುಗಳು ಡಿಕೆ ಸಿಎಂ ಆದ ನಂತರ ಹರಿದಾಡುತ್ತಿದ್ದವು. ರಾಜ್ಯ ಮೇಲ್ಮನೆಯ ಇತಿಹಾಸದಲ್ಲಿ 1956ರಿಂದ ಇದುವರೆಗೆ, ಸಭಾಪತಿಗಳ ವಿರುದ್ಧ ಆಡಳಿತಾರೂಢ ಪಕ್ಷದಿಂದ ಅವಿಶ್ವಾಸ ಮಂಡನೆಯಾಗಿಲ್ಲ. ಸರ್ಕಾರ ಬದಲಾದರೂ ಸಭಾಪತಿಗಳು ತಮ್ಮ ಅವಧಿ ಮುಗಿಯುವವರೆಗೆ ಕಾರ್ಯನಿರ್ವಹಿಸಿದ್ದಾರೆ. ಬಿಜೆಪಿಯ ಡಿ.ಎಚ್. ಶಂಕರಮೂರ್ತಿ ವಿರುದ್ಧ ಮಾತ್ರ ಕಾಂಗ್ರೆಸ್‌ನ ವಿ.ಎಸ್. ಉಗ್ರಪ್ಪ ಅವಿಶ್ವಾಸ ಮಂಡಿಸಿದ್ದರು, ಅದಕ್ಕೆ ಸೋಲಾಗಿತ್ತು.




















