ಗ್ಲಾಸ್ಗೊ: ಕಾಮನ್‌ವೆಲ್ತ್ ಗೇಮ್ಸ್–2026ರಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದ್ದು, ಸೋಮವಾರ ನಡೆದ ಮಹಿಳೆಯರ 53 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಜ್ಞಾನೇಶ್ವರಿ ಯಾದವ್ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತ ಈ ಬಾರಿಯ ಕ್ರೀಡಾಕೂಟದಲ್ಲಿ ತನ್ನ 5ನೇ ಪದಕವನ್ನು ಖಾತೆಗೆ ಸೇರಿಸಿಕೊಂಡಿದೆ.
ಫೈನಲ್‌ನಲ್ಲಿ ಆರಂಭದಿಂದಲೇ ಸ್ಥಿರ ಪ್ರದರ್ಶನ ನೀಡಿದ ಜ್ಞಾನೇಶ್ವರಿ, ಸ್ಟ್ರಾಚ್ ವಿಭಾಗದಲ್ಲಿ ಕ್ರಮವಾಗಿ 82 ಕೆಜಿ, 85 ಕೆಜಿ ಹಾಗೂ 88 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದರು. ಮೂರು ಪ್ರಯತ್ನಗಳಲ್ಲೂ ಯಶಸ್ಸು ಕಂಡ ಅವರು 88 ಕೆಜಿ ಸಾಧನೆಯೊಂದಿಗೆ ಎರಡನೇ ಸ್ಥಾನದಲ್ಲೇ ಉಳಿದರು. ನೈಜೀರಿಯಾದ ಒನೊಮೆ ಡಿಡಿಕ್ ಮೊದಲ ಸ್ಥಾನದಲ್ಲಿದ್ದರೆ, ಕೆನಡಾದ ರೆಬೆಕಾ ಗೌಲ್ಡ್ ಮೂರನೇ ಸ್ಥಾನದಲ್ಲಿದ್ದರು.
ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ ಜ್ಞಾನೇಶ್ವರಿ ಮೊದಲ ಪ್ರಯತ್ನದಲ್ಲೇ 103 ಕೆಜಿ ಭಾರ ಎತ್ತಿದರು. ಅದಕ್ಕೆ ಪ್ರತಿಯಾಗಿ ಒನೊಮೆ ಡಿಡಿಕ್ 105 ಕೆಜಿ ಎತ್ತಿ ತಮ್ಮ ಮುನ್ನಡೆಯನ್ನು ಕಾಯ್ದುಕೊಂಡರು. ಎರಡನೇ ಪ್ರಯತ್ನದಲ್ಲಿ ಜ್ಞಾನೇಶ್ವರಿ 107 ಕೆಜಿ ಭಾರ ಎತ್ತಿ ಚಿನ್ನದ ಪದಕದ ಪೈಪೋಟಿಯನ್ನು ಮತ್ತಷ್ಟು ರೋಚಕಗೊಳಿಸಿದರು. ಆದರೆ ಡಿಡಿಕ್ 110 ಕೆಜಿ ಭಾರ ಎತ್ತುವ ಮೂಲಕ ತಮ್ಮ ಮೇಲುಗೈ ಮುಂದುವರಿಸಿದರು.
ಕೊನೆಯ ಹಾಗೂ ನಿರ್ಣಾಯಕ ಮೂರನೇ ಪ್ರಯತ್ನದಲ್ಲಿ ಜ್ಞಾನೇಶ್ವರಿ 111 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿ ಭಾರತಕ್ಕೆ ಬೆಳ್ಳಿ ಪದಕವನ್ನು ಖಚಿತಪಡಿಸಿದರು. ಅವರ ಆತ್ಮವಿಶ್ವಾಸಭರಿತ ಪ್ರದರ್ಶನ ಭಾರತೀಯ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಇದಕ್ಕೂ ಮುನ್ನ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದು ಭಾರತದ ಪದಕ ಖಾತೆ ತೆರೆದಿದ್ದರು. ಇದೀಗ ಜ್ಞಾನೇಶ್ವರಿ ಯಾದವ್ ಅವರ ಬೆಳ್ಳಿ ಪದಕದೊಂದಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಸಾಧನೆ ಮತ್ತಷ್ಟು ಮೆರೆದಿದೆ.






















