ದಾವಣಗೆರೆ: ದೆಹಲಿಯಲ್ಲಿ ಸಿಜೆಪಿ ನಡೆಸಿರುವ ಪ್ರತಿಭಟನೆ ಕಾಂಗ್ರೆಸ್ ಕೃಪಾಪೋಷಿತ ನಕಲಿ ಹೋರಾಟವಾಗಿದ್ದು, ಕೇಂದ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಹಿಂಸಾಚಾರಕ್ಕೆ ತಿರುಗಿಸಲಾಗಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಕೇಂದ್ರ ಸರ್ಕಾರ ಸಿಬಿಐಗೆ ವಹಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪಾತ್ರ ಇಲ್ಲದಿದ್ದರೂ ಅವರನ್ನು ಗುರಿಯಾಗಿಸಿಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಬಾಂಗ್ಲಾದೇಶ ಹಾಗೂ ನೇಪಾಳ ಮಾದರಿಯಲ್ಲಿ ದೇಶದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದ್ದು, ವಿದೇಶಿ ಹಣಕಾಸಿನ ನೆರವಿನಿಂದ ಹೋರಾಟ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಿಗಿಂತ ರಾಷ್ಟ್ರವಿರೋಧಿ ಶಕ್ತಿಗಳೇ ಭಾಗಿಯಾಗಿದ್ದಾರೆ ಎಂದು ದೂರಿದರು.
ದೆಹಲಿ ಪ್ರತಿಭಟನೆಯನ್ನು ಹಿಂಸಾಚಾರಕ್ಕೆ ತಿರುಗಿಸಲು ಪ್ರಚೋದನೆ ನೀಡಿದ ರಾಜಕಾರಣಿ ಮರುದಿನವೇ ಪ್ರಧಾನಿ ನರೇಂದ್ರ ಮೋದಿ ನಿವಾಸದ ಎದುರು ದಿಢೀರ್ ಪ್ರತಿಭಟನೆ ನಡೆಸಿರುವುದರ ಹಿಂದಿನ ಉದ್ದೇಶವೇನು ಎಂದು ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಹರಿಹರ ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ಮೊಟ್ಟೆ ಎಸೆದ ಘಟನೆ ಕುರಿತು ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಕಲ್ಲು ಹಾಗೂ ಮೊಟ್ಟೆ ಎಸೆಯುವುದು ಕಾಂಗ್ರೆಸ್ ಸಂಸ್ಕೃತಿಯಾಗಿದ್ದು, ಇಂತಹ ನಡೆ ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ ಎಂದು ಟೀಕಿಸಿದರು.
ಭದ್ರಾ ಮುಖ್ಯ ಎಂಜಿನಿಯರ್ ವಿರುದ್ಧ ಕ್ರಮಕ್ಕೆ ಆಗ್ರಹ: ಭದ್ರಾ ಜಲಾಶಯದಲ್ಲಿ ಪ್ರಸ್ತುತ ಸುಮಾರು 150 ಅಡಿ ನೀರು ಸಂಗ್ರಹವಾಗಿದ್ದು, ಕುಡಿಯುವ ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ನೀರು ಬಿಡಬಾರದೆಂಬ ಆದೇಶ ಜಾರಿಯಲ್ಲಿದೆ. ಆದರೂ ರಾತ್ರೋರಾತ್ರಿ ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ಜಲಾಶಯದಿಂದ ನೀರು ಹರಿಸಿರುವ ಮುಖ್ಯ ಎಂಜಿನಿಯರ್ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದರು.






















