SK Home Ad
Home ಸಿನಿ ಮಿಲ್ಸ್ “ಕಷ್ಟದ ದಿನಗಳನ್ನು ಎದುರಿಸುತ್ತಿದ್ದೇನೆ”: ಉಪ್ಪಿದಾದಾ ನಟಿ ಭಾವುಕ ಪೋಸ್ಟ್

“ಕಷ್ಟದ ದಿನಗಳನ್ನು ಎದುರಿಸುತ್ತಿದ್ದೇನೆ”: ಉಪ್ಪಿದಾದಾ ನಟಿ ಭಾವುಕ ಪೋಸ್ಟ್

0
118

ರಿಯಲ್‌ ಸ್ಟಾರ್‌ ಉಪೇಂದ್ರ ಅಭಿನಯದ ʻಉಪ್ಪಿ ದಾದಾ ಎಂಬಿಬಿಎಸ್ʼ ಚಿತ್ರದಲ್ಲಿ ನಟಿಸಿರುವ ಖ್ಯಾತ ನಟಿ ಡಿ.ಆ‌ರ್. ಉಮಾಶಂಕರಿ ಅವರು ಸದ್ಯ ಸ್ತನ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿರುವ ನಟಿ ತಮ್ಮ ಚಿಕಿತ್ಸೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ. ಪ್ರಸ್ತುತ ಕೀಮೋಥೆರಪಿ ಹಾಗೂ ಇಮ್ಯುನೊಥೆರಪಿಯ ಎರಡನೇ ಸುತ್ತಿನ ಚಿಕಿತ್ಸೆ ಪಡೆಯುತ್ತಿರುವ ಅವರು, “ಒಂದು ದಿನವನ್ನು ಅತ್ಯಂತ ಸವಾಲಿನಂತೆ ಎದುರಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

ಚಿಕಿತ್ಸೆಯ ಅವಧಿಯಲ್ಲಿ ಕಠಿಣ ದಿನಗಳನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಕಲಿಯುತ್ತಿದ್ದೇನೆ. ದೈಹಿಕವಾಗಿ ಚೇತರಿಕೆ ಅನುಭವಿಸುವ ದಿನಗಳನ್ನು ಸಂಭ್ರಮಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಈ ಹೋರಾಟದಲ್ಲಿ ಸದಾ ಬೆಂಬಲವಾಗಿ ನಿಂತಿರುವ ಕುಟುಂಬದವರಿಗೆ ಹಾಗೂ ನಿರಂತರ ಪ್ರೀತಿ ಮತ್ತು ಪ್ರೋತ್ಸಾಹ ನೀಡುತ್ತಿರುವ ಅಭಿಮಾನಿಗಳಿಗೆ ಅವರು ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.

“ನಾನು ಧೈರ್ಯದಿಂದ ಮುಂದೆ ಸಾಗುತ್ತಿದ್ದೇನೆ. ಚೇತರಿಕೆಯತ್ತ ಗಮನಹರಿಸಿದ್ದೇನೆ. ಪ್ರಗತಿ ಎಂದರೆ ಅದು ಯಾವಾಗಲೂ ಪರಿಪೂರ್ಣವಾಗಿರಬೇಕೆಂದಿಲ್ಲ. ಆದರೆ ಅದು ನಿಜವಾಗಿರುತ್ತದೆ,” ಎಂದು ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಹಾಗೂ ಸಿನಿರಂಗದ ಗಣ್ಯರು ಅವರ ಶೀಘ್ರ ಗುಣಮುಖತೆಗಾಗಿ ಶುಭ ಹಾರೈಸುತ್ತಿದ್ದಾರೆ.