SK Home Ad
Home ಸಿನಿ ಮಿಲ್ಸ್ ‘ಲಕ್ಷ್ಮೀಪುತ್ರ’ : ಅಮ್ಮನ ಮಮತೆಯೇ ಮಗನ ಬದುಕಿನ ದೊಡ್ಡ ಆಸ್ತಿ!

‘ಲಕ್ಷ್ಮೀಪುತ್ರ’ : ಅಮ್ಮನ ಮಮತೆಯೇ ಮಗನ ಬದುಕಿನ ದೊಡ್ಡ ಆಸ್ತಿ!

0
60
ತಾರಾ-ಚಿಕ್ಕಣ್ಣ ಅಭಿನಯದ ‘ಲಕ್ಷ್ಮೀಪುತ್ರ’; ನಗು ಮತ್ತು ಭಾವನೆಗಳ ಕೌಟುಂಬಿಕ ಸಿನಿಮಾ

ಮಂಡ್ಯ ಸೊಗಡಿನಲ್ಲಿ ಅಮ್ಮನ ಪ್ರೀತಿ, ಮಗನ ತುಂಟಾಟ; ತೆರೆಗೆ ಬಂದ ‘ಲಕ್ಷ್ಮೀಪುತ್ರ’

– ಗಣೇಶ್ ರಾಣೆಬೆನ್ನೂರು

ಚಿತ್ರ: ಲಕ್ಷ್ಮೀಪುತ್ರ
ನಿರ್ದೇಶನ: ವಿಜಯ್ ಸ್ವಾಮಿ
ನಿರ್ಮಾಣ: ಎ.ಪಿ.ಅರ್ಜುನ್ ಮತ್ತು ರವಿಕಿರಣ್ ಗೌಡ
ತಾರಾಗಣ: ಚಿಕ್ಕಣ್ಣ, ತಾರಾ, ವಂದಿತಾ ಗೌಡ, ಮಿತ್ರ, ಶಿವರಾಜ್ ಕೆ.ಆರ್ ಪೇಟೆ, ಕುರಿ ಪ್ರತಾಪ್, ಗಿರಿ, ಧರ್ಮಣ್ಣ ಹಾಗೂ ಇತರರು.

ಬೆಂಗಳೂರು: ಪ್ರೀತಿ ಮಾಡಿದವರು ಕೈಕೊಡಬಹುದು, ಸ್ನೇಹಿತರು ಮೋಸ ಮಾಡಬಹುದು, ಒಡಹುಟ್ಟಿದವರೇ ಕಷ್ಟದ ಸಮಯದಲ್ಲಿ ನೆರವಿಗೆ ಬಾರದೆ ಇರಬಹುದು. ಆದರೆ ಯಾವುದೇ ಪರಿಸ್ಥಿತಿಯಲ್ಲೂ ಮಕ್ಕಳಿಗಾಗಿ ಮಿಡಿಯುವ ಅಮ್ಮನ ಪ್ರೀತಿ ಮಾತ್ರ ಎಂದಿಗೂ ಕಡಿಮೆಯಾಗುವುದಿಲ್ಲ ಎಂಬ ಸಂದೇಶವನ್ನು ಸಾರುವ ಸಿನಿಮಾ ‘ಲಕ್ಷ್ಮೀಪುತ್ರ’. ತಾಯಿ-ಮಗನ ನಡುವಿನ ಅಪರೂಪದ ಬಾಂಧವ್ಯವನ್ನು ಹಾಸ್ಯ, ಪ್ರೀತಿ ಮತ್ತು ಭಾವನಾತ್ಮಕ ಸನ್ನಿವೇಶಗಳೊಂದಿಗೆ ತೆರೆಗೆ ತಂದಿದ್ದಾರೆ ನಿರ್ದೇಶಕ ವಿಜಯ್ ಸ್ವಾಮಿ.

ಅಮ್ಮನೇ ಮಗನಿಗೆ ಎಲ್ಲವೂ! : ಚಿತ್ರದ ನಾಯಕ ಕೃಷ್ಣ (ಚಿಕ್ಕಣ್ಣ) ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿರುತ್ತಾನೆ. ತಂದೆಯ ನೆನಪಿನಿಂದ ಮಗನಿಗೆ ನೋವಾಗದಂತೆ ನೋಡಿಕೊಳ್ಳುವ ತಾಯಿ ಲಕ್ಷ್ಮಿ (ತಾರಾ), ಆತನನ್ನು ಪ್ರೀತಿಯಿಂದ ಬೆಳೆಸುತ್ತಾಳೆ. ಅಮ್ಮನನ್ನು ಕೇವಲ ತಾಯಿಯಾಗಿ ನೋಡದೆ ಸ್ನೇಹಿತೆಯಂತೆಯೇ ಕಾಣುವ ಕೃಷ್ಣನ ಬದುಕಿನಲ್ಲಿ ಆಕೆಯೇ ಎಲ್ಲವೂ.

ಮದುವೆಯ ವಯಸ್ಸು ಬಂದರೂ ಕೃಷ್ಣನಿಗೆ ಇನ್ನೂ ಸೂಕ್ತ ಹುಡುಗಿ ಸಿಕ್ಕಿರುವುದಿಲ್ಲ. ಆತನಿಗೆ ಪ್ರೇಮವಿವಾಹವಾಗಬೇಕೆಂಬ ಆಸೆ. ಆದರೆ ಮಗನಿಗೊಂದು ಒಳ್ಳೆಯ ಹುಡುಗಿಯನ್ನು ಹುಡುಕಿ ಮದುವೆ ಮಾಡಬೇಕೆಂಬುದು ತಾಯಿ ಲಕ್ಷ್ಮಿಯ ಬಯಕೆ. ಇವರಿಬ್ಬರ ಆಸೆಗಳು ಈಡೇರುತ್ತವೆಯೇ? ಮಗನ ಮದುವೆಯ ಕನಸಿಗೆ ಅಮ್ಮ ಹೇಗೆ ಸಾಥ್ ನೀಡುತ್ತಾಳೆ? ತಾಯಿಗೆ ಆಸರೆಯಾಗಿ ಮಗ ನಿಲ್ಲುತ್ತಾನೆಯೇ? ಎಂಬ ಪ್ರಶ್ನೆಗಳ ಸುತ್ತ ಕಥೆ ಸಾಗುತ್ತದೆ.

ಮೊದಲಾರ್ಧದಲ್ಲಿ ಹಾಸ್ಯ, ದ್ವಿತೀಯಾರ್ಧದಲ್ಲಿ ಭಾವನೆ : ಮಂಡ್ಯ ಸೊಗಡಿನ ಭಾಷೆ, ಅಲ್ಲಿನ ಜನಜೀವನದ ಶೈಲಿ ಮತ್ತು ಸಂಭಾಷಣೆಗಳು ಚಿತ್ರಕ್ಕೆ ಸ್ಥಳೀಯ ಸ್ಪರ್ಶ ನೀಡಿವೆ. ಮೊದಲಾರ್ಧದಲ್ಲಿ ನಾಯಕನ ಸ್ನೇಹಿತರು, ಅವರೊಂದಿಗಿನ ಹರಟೆ, ಪ್ರೀತಿ ಹಾಗೂ ಹಾಸ್ಯ ಸನ್ನಿವೇಶಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಸಿನಿಮಾ ಆರಂಭದಲ್ಲಿ ಹಗುರವಾದ ಮನರಂಜನೆಯ ಹಾದಿಯಲ್ಲಿ ಸಾಗುತ್ತದೆ.

ದ್ವಿತೀಯಾರ್ಧದಲ್ಲಿ ಕಥೆಯ ನಿಜವಾದ ಭಾವನಾತ್ಮಕ ಆಯಾಮ ತೆರೆದುಕೊಳ್ಳುತ್ತದೆ. ತಾಯಿ-ಮಗನ ನಡುವಿನ ಪ್ರೀತಿ, ಪರಸ್ಪರ ಕಾಳಜಿ, ತ್ಯಾಗ ಮತ್ತು ಕುಟುಂಬದ ಮಹತ್ವವನ್ನು ನಿರ್ದೇಶಕರು ಮುಖ್ಯವಾಗಿ ಕಟ್ಟಿಕೊಟ್ಟಿದ್ದಾರೆ. ತಾಯಿಯ ಮಮತೆಯೇ ಚಿತ್ರದ ಮೂಲ ತಿರುಳಾಗಿದ್ದು, ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುವ ಸನ್ನಿವೇಶಗಳು ಕಥೆಯಲ್ಲಿವೆ.

ತಾರಾ-ಚಿಕ್ಕಣ್ಣ ಅಭಿನಯವೇ ಚಿತ್ರದ ಆಕರ್ಷಣೆ : ತಾಯಿ ಲಕ್ಷ್ಮಿಯ ಪಾತ್ರದಲ್ಲಿ ತಾರಾ ಮನೋಜ್ಞವಾಗಿ ನಟಿಸಿದ್ದಾರೆ. ಮಗನ ಮೇಲಿನ ಪ್ರೀತಿ, ಕಾಳಜಿ ಮತ್ತು ಮಮತೆಯನ್ನು ತಮ್ಮ ಅಭಿನಯದ ಮೂಲಕ ಪರಿಣಾಮಕಾರಿಯಾಗಿ ವ್ಯಕ್ತಪಡಿಸಿದ್ದಾರೆ. ಕೃಷ್ಣನ ಪಾತ್ರದಲ್ಲಿ ಚಿಕ್ಕಣ್ಣ ತಮ್ಮ ಕಾಮಿಡಿ ಟೈಮಿಂಗ್‌ನಿಂದ ಮೊದಲಾರ್ಧವನ್ನು ಲವಲವಿಕೆಯಿಂದ ಮುನ್ನಡೆಸುತ್ತಾರೆ. ಭಾವನಾತ್ಮಕ ಸನ್ನಿವೇಶಗಳಲ್ಲಿಯೂ ಗಮನ ಸೆಳೆಯುತ್ತಾರೆ.

ನಾಯಕಿಯಾಗಿ ಕಾಣಿಸಿಕೊಂಡಿರುವ ವಂದಿತಾ ಗೌಡ ತಮ್ಮ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. ಮಿತ್ರ, ಶಿವರಾಜ್ ಕೆ.ಆರ್. ಪೇಟೆ, ಕುರಿ ಪ್ರತಾಪ್, ಗಿರಿ ಮತ್ತು ಧರ್ಮಣ್ಣ ಸೇರಿದಂತೆ ಇತರ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಸಂಗೀತ ಮತ್ತು ನಿರ್ದೇಶನ : ನಿರ್ದೇಶಕ ವಿಜಯ್ ಸ್ವಾಮಿ ತಾಯಿ-ಮಗನ ಬಾಂಧವ್ಯವನ್ನು ಕೇಂದ್ರವಾಗಿಟ್ಟುಕೊಂಡು ಕೌಟುಂಬಿಕ ಮನರಂಜನೆಯ ಕಥೆಯನ್ನು ರೂಪಿಸಿದ್ದಾರೆ. ಕಥೆ ಮತ್ತು ಸಂಭಾಷಣೆಯಲ್ಲಿ ಮಂಡ್ಯ ಭಾಷೆಯ ಸೊಗಡನ್ನು ಬಳಸಿರುವುದು ಚಿತ್ರದ ವಿಶೇಷತೆ. ಎ.ಪಿ. ಅರ್ಜುನ್ ಅವರ ಬರವಣಿಗೆಯೂ ಗಮನ ಸೆಳೆಯುತ್ತದೆ. ಅರ್ಜುನ್ ಜನ್ಯ ಅವರ ಸಂಗೀತ ಚಿತ್ರಕ್ಕೆ ಪೂರಕವಾಗಿದ್ದು, ಕಥೆಯ ಭಾವನಾತ್ಮಕ ಸನ್ನಿವೇಶಗಳಿಗೆ ಮೆರುಗು ನೀಡುತ್ತದೆ.

ಒಟ್ಟಾರೆ: ತಾಯಿಯ ಪ್ರೀತಿ, ಮಗನ ತುಂಟಾಟ, ಮದುವೆಯ ಆಸೆ ಮತ್ತು ಕುಟುಂಬದ ಬಾಂಧವ್ಯವನ್ನು ಮನರಂಜನೆಯ ಚೌಕಟ್ಟಿನಲ್ಲಿ ಕಟ್ಟಿಕೊಟ್ಟಿರುವ ಸಿನಿಮಾ ‘ಲಕ್ಷ್ಮೀಪುತ್ರ’. ಹಾಸ್ಯದ ಜೊತೆಗೆ ತಾಯಿ-ಮಗನ ಸಂಬಂಧದ ಭಾವನಾತ್ಮಕ ಕಥೆಗಳನ್ನು ಇಷ್ಟಪಡುವ ಕುಟುಂಬ ಪ್ರೇಕ್ಷಕರಿಗೆ ಈ ಚಿತ್ರ ಆಸಕ್ತಿದಾಯಕವಾಗಬಹುದು.