BBK13: ಬಿಗ್ ಬಾಸ್ ಕನ್ನಡ ಸೀಸನ್ 13 ಫಿನಾಲೆ ಹಂತಕ್ಕೆ ಸಮೀಪಿಸುತ್ತಿದ್ದು, 13ನೇ ವಾರದ ಕ್ಯಾಪ್ಟನ್ ಆಗಿ ಸೌಂದರ್ಯ ಶೆಟ್ಟಿ ಆಯ್ಕೆಯಾಗಿರುವುದು ಹೊಸ ಪ್ರೋಮೋ ಮೂಲಕ ಸ್ಪಷ್ಟವಾಗಿದೆ. ಕ್ಯಾಪ್ಟನ್ಸಿ ರೇಸ್ನಲ್ಲಿದ್ದ ಸೌಂದರ್ಯ ಶೆಟ್ಟಿ, ಯಶಸ್ ಕೃಷ್ಣ, ಗಾನವಿ ಗೌಡ, ಕಿರಣ್ ಶಾಸ್ತ್ರಿ ಹಾಗೂ ಗಗನ್ ಚಿನ್ನಪ್ಪ ಅವರಿಗೆ ಕಣ್ಣು ಕಟ್ಟಿ ಕೂರಿಸಲಾಗಿತ್ತು. ಸೀಸನ್ 12ರ ಸ್ಪರ್ಧಿ ಸೂರಜ್ ಸಿಂಗ್ ಅವರ ಸಮ್ಮುಖದಲ್ಲಿ ಮೇಣದಬತ್ತಿ ಆರಿಸುವ ಪ್ರಕ್ರಿಯೆ ನಡೆದು, ಅಂತಿಮವಾಗಿ ಸೌಂದರ್ಯ ಶೆಟ್ಟಿ ಗೆದ್ದು ಎರಡನೇ ಬಾರಿಗೆ ಮನೆಯ ಕ್ಯಾಪ್ಟನ್ ಪಟ್ಟ ಅಲಂಕರಿಸಿದ್ದಾರೆ.
ಕ್ಯಾಪ್ಟನ್ ಆಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಸೌಂದರ್ಯ ಶೆಟ್ಟಿ ಮತ್ತು ಜಗದೀಶ್ ನಡುವೆ ಅಡುಗೆಮನೆ ಸ್ವಚ್ಛತೆ ವಿಚಾರವಾಗಿ ಹೈವೋಲ್ಟೇಜ್ ಗಲಾಟೆ ನಡೆದಿದೆ. ಮಧ್ಯಾಹ್ನದ ಊಟಕ್ಕೂ ಮುನ್ನ ಕಿಚನ್ ಸ್ಲ್ಯಾಬ್ ಕ್ಲೀನ್ ಮಾಡುವಂತೆ ಕ್ಯಾಪ್ಟನ್ ಸೌಂದರ್ಯ ಸೂಚಿಸಿದಾಗ, ಚಪಾತಿ ಒತ್ತುತ್ತಿರುವುದರಿಂದ ತನ್ನಿಂದ ಸಾಧ್ಯವಿಲ್ಲ ಎಂದು ಜಗದೀಶ್ ನೇರವಾಗಿ ನಿರಾಕರಿಸಿದ್ದಾರೆ. ಇದರಿಂದ ಕೆರಳಿದ ಸೌಂದರ್ಯ, “ಬೇರೆಯವರು ಕ್ಯಾಪ್ಟನ್ ಆಗಿದ್ದಾಗ ಮಾತ್ರ ಚಮಚಗಿರಿ ಮಾಡುತ್ತೀರಾ, ಈಗ ಕೆಲಸ ಮಾಡಲು ಆಗಲ್ವಾ?” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಮಾತಿಗೆ ಜಗದೀಶ್ ಕೂಡ ಏರುಧ್ವನಿಯಲ್ಲಿ ಕೂಗಾಡಿದ್ದು, ಪರಸ್ಪರ ಏಕವಚನದಲ್ಲಿ “ಬಾಯಿ ಮುಚ್ಚಿ” ಎನ್ನುವಷ್ಟರ ಮಟ್ಟಿಗೆ ವಾಗ್ವಾದ ತಾರಕಕ್ಕೇರಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಖಡಕ್ ನಿರ್ಧಾರ ತೆಗೆದುಕೊಂಡ ಕ್ಯಾಪ್ಟನ್ ಸೌಂದರ್ಯ, ಬೇರೆಯವರ ಕೈಯಲ್ಲಿ ಸ್ಲ್ಯಾಬ್ ಕ್ಲೀನ್ ಮಾಡಿಸುವುದಾಗಿ ಹೇಳಿ, ಮುಂದಿನ ಎರಡು ದಿನಗಳ ಕಾಲ ಜಗದೀಶ್ ಅವರಿಗೆ ಯಾರೂ ಊಟ ನೀಡಬಾರದು ಎಂದು ಕಠಿಣ ಶಿಕ್ಷೆ ವಿಧಿಸಿದ್ದಾರೆ.






















