11ನೇ ವಯಸ್ಸಿನಲ್ಲಿ ಐಡಿಯಾ, 12ನೇ ವಯಸ್ಸಿನಲ್ಲಿ ಸ್ಟಾರ್ಟಪ್; ‘ವೋಕ್ಸಾ’ ಮೂಲಕ ಮಿಂಚಿದ ಮಾನ ಜಂಪಾಲಾ : ದಿನದ 24 ಗಂಟೆ ಕೆಲಸ ಮಾಡುವ ಎಐ ರಿಸಿಪ್ಷನಿಸ್ಟ್ ನಿರ್ಮಿಸಿದ ಭಾರತೀಯ ಮೂಲದ ಬಾಲಕಿ
ನವದೆಹಲಿ: ತಂತ್ರಜ್ಞಾನ ಕ್ಷೇತ್ರದಲ್ಲಿ ವಯಸ್ಸು ಯಾವುದೇ ಅಡ್ಡಿಯಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿರುವ ಭಾರತೀಯ ಮೂಲದ 12 ವರ್ಷದ ಬಾಲಕಿ ಮಾನ ಜಂಪಾಲಾ (Mana Jampala), ತನ್ನ ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಸ್ಟಾರ್ಟಪ್ ಮೂಲಕ ಜಗತ್ತಿನ ಗಮನ ಸೆಳೆದಿದ್ದಾಳೆ.
ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ವಾಸಿಸುತ್ತಿರುವ ಮಾನ ಜಂಪಾಲಾ, ‘ವೋಕ್ಸಾ’ (Voxa) ಎಂಬ ಹೆಸರಿನ ಎಐ ಆಧಾರಿತ ವರ್ಚುವಲ್ ರಿಸಿಪ್ಷನಿಸ್ಟ್‌ನ್ನು ಅಭಿವೃದ್ಧಿಪಡಿಸಿದ್ದು, ಇದು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ 24 ಗಂಟೆಯೂ ಗ್ರಾಹಕರ ಕರೆಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ: ಕಾಶ್ಮೀರದ ಯುವ ಉದ್ಯಮಿಗೆ ಕನ್ನಡಿಗರಿಂದ ಪ್ರಶಂಸೆಗಳ ಮಹಾಪೂರ
ಐಡಿಯಾ ಹುಟ್ಟಿದ್ದು ಹೇಗೆ? : ಮಾನಗೆ ಕೇವಲ 11 ವರ್ಷ ವಯಸ್ಸಿದ್ದಾಗ ತನ್ನ ತಂದೆಯ ಕಚೇರಿಗೆ ಭೇಟಿ ನೀಡುತ್ತಿದ್ದಳು. ಅಲ್ಲಿ ಸಿಬ್ಬಂದಿ ಕೆಲಸದ ಒತ್ತಡದಿಂದಾಗಿ ಅನೇಕ ಗ್ರಾಹಕರ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗದೆ, ಹಲವು ಕರೆಗಳು ಮಿಸ್ ಆಗುತ್ತಿರುವುದನ್ನು ಗಮನಿಸಿದಳು. ಗ್ರಾಹಕರ ಕರೆಗಳನ್ನು ಕಳೆದುಕೊಳ್ಳುವುದು ವ್ಯವಹಾರಕ್ಕೆ ದೊಡ್ಡ ಮಟ್ಟದ ನಷ್ಟ ಉಂಟುಮಾಡಬಹುದು ಎಂಬುದನ್ನು ಅರಿತ ಮಾನ, ಈ ಸಮಸ್ಯೆಗೆ ತಂತ್ರಜ್ಞಾನ ಆಧಾರಿತ ಪರಿಹಾರ ಹುಡುಕಲು ಮುಂದಾದಳು. ಇದೇ ಆಲೋಚನೆಯಿಂದ ‘ವೋಕ್ಸಾ’ ಜನ್ಮ ತಾಳಿತು.
ಏನಿದು ‘ವೋಕ್ಸಾ’? : ‘ವೋಕ್ಸಾ’ ಒಂದು ಎಐ ಧ್ವನಿ ಸಹಾಯಕ (AI Voice Assistant) ಆಗಿದ್ದು, ಇದು ಗ್ರಾಹಕರ ಕರೆಗಳನ್ನು ಸ್ವೀಕರಿಸುತ್ತದೆ. ಅಪಾಯಿಂಟ್‌ಮೆಂಟ್‌ಗಳನ್ನು ಬುಕ್ ಮಾಡುತ್ತದೆ. ರೆಸ್ಟೋರೆಂಟ್ ಆರ್ಡರ್‌ಗಳನ್ನು ದಾಖಲಿಸುತ್ತದೆ. ಪ್ರತಿಯೊಂದು ಸಂಭಾಷಣೆಯ ಬಳಿಕ ಅದರ ಪ್ರಮುಖ ಅಂಶಗಳ ಸಾರಾಂಶವನ್ನು ಸಿದ್ಧಪಡಿಸಿ ಮಾಲೀಕರಿಗೆ ಕಳುಹಿಸುತ್ತದೆ ಹಾಗೂ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ. ಇದರ ಮೂಲಕ ಸಣ್ಣ ಉದ್ಯಮಗಳಿಗೆ ಸಿಬ್ಬಂದಿ ಕೊರತೆಯ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ದೊರೆಯುತ್ತಿದೆ.
ಇದನ್ನೂ ಓದಿ: ಗ್ರಾಮೀಣ ವಿದ್ಯಾರ್ಥಿಯ AI ಕ್ರಾಂತಿ: ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸಂಚಲನ!
9ನೇ ವಯಸ್ಸಿನಲ್ಲೇ ಪೈಥಾನ್ ಕಲಿತ ಪ್ರತಿಭೆ : ಮಾನಗೆ ಕೇವಲ 9 ವರ್ಷ ವಯಸ್ಸಾಗಿದ್ದಾಗಲೇ ಕೋಡಿಂಗ್ ಮತ್ತು ಕೃತಕ ಬುದ್ಧಿಮತ್ತೆ ಬಗ್ಗೆ ಆಸಕ್ತಿ ಬೆಳೆಯಿತು. ಆರಂಭದಲ್ಲಿ ಸ್ಕ್ರಾಚ್ ಕೋಡಿಂಗ್ ಕ್ಯಾಂಪ್‌ಗಳಲ್ಲಿ ಭಾಗವಹಿಸಿದ್ದ ಆಕೆ, ಬಳಿಕ ಪೈಥಾನ್ ಪ್ರೋಗ್ರಾಮಿಂಗ್ ಭಾಷೆಯನ್ನು ಕಲಿತು ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನ ಕೌಶಲ್ಯವನ್ನು ವಿಸ್ತರಿಸಿಕೊಂಡಳು. ಭಾರತದಲ್ಲಿ ನಡೆದ ಕಾಲೇಜು ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲೂ ಭಾಗವಹಿಸಿ ವಿಶೇಷ ಪ್ರಶಸ್ತಿಯನ್ನು ಪಡೆದಿದ್ದಳು.
Chatgpt ಮತ್ತು ಕ್ಲೋಡ್ ನೆರವಿನಿಂದ ಅಭಿವೃದ್ಧಿ : ತನ್ನ ಸ್ಟಾರ್ಟಪ್ ಅಭಿವೃದ್ಧಿಯ ಆರಂಭಿಕ ಹಂತದಲ್ಲಿ ಮಾನ, ಓಪನ್‌ಎಐನ ‘ಚಾಟ್‌ಜಿಪಿಟಿ’ ಹಾಗೂ ಆಂಥ್ರೋಪಿಕ್ ಸಂಸ್ಥೆಯ ‘ಕ್ಲೋಡ್’ ತಂತ್ರಜ್ಞಾನಗಳನ್ನು ಬಳಸಿ ಹಂತ-ಹಂತವಾಗಿ ಕೋಡ್ ಬರೆದು ಪರೀಕ್ಷೆ ನಡೆಸಿದಳು. ಬಳಿಕ ತನ್ನದೇ ಆದ ಸ್ವತಂತ್ರ ಬ್ಯಾಕೆಂಡ್ ವ್ಯವಸ್ಥೆಯನ್ನು ರೂಪಿಸಿ ‘ವೋಕ್ಸಾ’ವನ್ನು ಅಭಿವೃದ್ಧಿಪಡಿಸಿದಳು.
ಇದನ್ನೂ ಓದಿ: ‘ಶ್ರೀ ರಾಮ ಭೂಮಿ’ ಚಿತ್ರದಲ್ಲಿ ಅನುಪಮ್ ಖೇರ್ ಹೊಸ ಲುಕ್
ಜಾಗತಿಕ ನಿಧಿಯಿಂದ ಅನುದಾನ : ಮಾನಳ ಪ್ರತಿಭೆಯನ್ನು ಗುರುತಿಸಿರುವ ವಿದ್ಯಾರ್ಥಿ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ಜಾಗತಿಕ ನಿಧಿ 1517 ಮೆಡಿಸಿ ಪ್ರಾಜೆಕ್ಟ್ (1517 Medici Project), ಆಕೆಗೆ ಮಹತ್ವದ ಅನುದಾನವನ್ನು ನೀಡಿದೆ.
ಮುಂದಿನ ಗುರಿ ಏನು? : “ನನ್ನ ವಯಸ್ಸನ್ನು ನೋಡಿ ಆರಂಭದಲ್ಲಿ ಅನೇಕ ಗ್ರಾಹಕರು ಮತ್ತು ಹೂಡಿಕೆದಾರರು ಅನುಮಾನ ವ್ಯಕ್ತಪಡಿಸುತ್ತಿದ್ದರು. ಆದರೆ, ನಂತರ ನನ್ನ ಉತ್ಪನ್ನದ ಗುಣಮಟ್ಟವನ್ನು ನೋಡಿ ಮೆಚ್ಚಲಾರಂಭಿಸಿದರು,” ಎಂದು ಮಾನ ತನ್ನ ಅನುಭವವನ್ನು ಹಂಚಿಕೊಂಡಿದ್ದಾಳೆ. ಸದ್ಯ ಪ್ರಸಿದ್ಧ ಸ್ಟಾರ್ಟಪ್ ಆಕ್ಸಿಲರೇಟರ್ ವೈ ಕಾಂಬಿನೇಟರ್ (Y Combinator) ಕಾರ್ಯಕ್ರಮದಲ್ಲಿ ಭಾಗವಹಿಸುವ ಗುರಿಯನ್ನು ಹೊಂದಿರುವ ಮಾನ, ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರನ್ನು ಸೆಳೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾಳೆ.
ಇದನ್ನೂ ಓದಿ: ಶಿಕ್ಷಣ ಕ್ಷೇತ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ: ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವರ ಆಕ್ರೋಶ
12 ವರ್ಷದ ಈ ಬಾಲಕಿಯ ಸಾಧನೆ, ಇಂದಿನ ಯುವ ಪೀಳಿಗೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಕನಸುಗಳನ್ನು ಕಾಣಲು ಪ್ರೇರಣೆಯಾಗಿದ್ದು, ಪರಿಶ್ರಮ ಮತ್ತು ಹೊಸ ಆಲೋಚನೆಗಳಿದ್ದರೆ ವಯಸ್ಸು ಯಶಸ್ಸಿಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ.





















