SK Home Ad
Home ಅಂಕಣ ಅಂಕಣ ಬರಹ | ಎಸ್‌ಐಆರ್: `ರಾಜ್ಯ’ಕೀಯ ಚೆಸ್ ಆಡಿದ ಡಿಕೆ!

ಅಂಕಣ ಬರಹ | ಎಸ್‌ಐಆರ್: `ರಾಜ್ಯ’ಕೀಯ ಚೆಸ್ ಆಡಿದ ಡಿಕೆ!

0
12

ರಾಜ್ಯದಲ್ಲೀಗ ಎಸ್‌ಐಆರ್ (ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ) ಜ್ವರ ವ್ಯಾಪಿಸಿದೆ. ನಿಧಾನವಾಗಿ ಇದರ ಕಾವು ರಾಜಕೀಯ ಪಕ್ಷಗಳ ನೆತ್ತಿಗೇರಿದೆ. ಎಸ್‌ಐಆರ್ ಮೂಲಕ ಗದ್ದುಗೆ ಏರಲು ತಂತ್ರ ರೂಪಿಸಿದವರಿಗೆ ರಾಜ್ಯದಲ್ಲಿ ಹೆಣೆದ ಪ್ರತಿತಂತ್ರ ಕಂಗಾಲಾಗಿಸಿದೆ.

ನಿಜ. ಈಗಾಗಲೇ ಹದಿಮೂರು ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಸುಮಾರು ಐದೂವರೆ ಕೋಟಿ ಮತದಾರರಿಗೆ ವಲಸಿಗರು, ಅಕ್ರಮ ನಿವಾಸಿಗಳು, ನುಸುಳುಕೋರರು ಎಂದೆಲ್ಲ ಹಣೆಪಟ್ಟಿ ಕಟ್ಟಲಾಯಿತು. ಬಿಹಾರ, ಹರಿಯಾಣಾ, ಪಶ್ಚಿಮ ಬಂಗಾಳ, ಕೇರಳಂ, ತಮಿಳುನಾಡು, ಅಸ್ಸಾಂ, ದೆಹಲಿ ಎಲ್ಲೆಡೆ ಮತದಾರರ ಹಕ್ಕು ರಕ್ಷಣೆಗಿಂತ ತಿರಸ್ಕರಿಸುವುದು ಹೇಗೆಂಬ ತಂತ್ರಕ್ಕೆ ಮನ್ನಣೆ ನೀಡಲಾಯಿತು. ಇದರ ಪರಿಣಾಮ ಆಯಾ ರಾಜ್ಯಗಳಲ್ಲಿ ಚುನಾವಣಾ ಫಲಿತಾಂಶ ಕಂಡಿದೆ.

ಎಸ್‌ಐಆರ್ ಕರ್ನಾಟಕದಲ್ಲೂ ನಡೆಸಿದರೆ 2028ರ ವಿಧಾನಸಭಾ ಚುನಾವಣೆ ಸಲೀಸಾದೀತು ಎನ್ನುವ ಯೋಜನೆಯೊಂದಿಗೆ ಈಗ ಪ್ರಕ್ರಿಯೆ ಆರಂಭವಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಸ್‌ಐಆರ್ ಮಾನದಂಡ ಮತ್ತು ಅದರ ರೀತಿ ರಿವಾಜುಗಳಿಗೆ ತೀವ್ರ ಆಕ್ಷೇಪಿಸಿ ಪರಿಷ್ಕರಣೆಗೆ ತಾಂತ್ರಿಕ ವಿರೋಧವನ್ನೂ ಕೂಡ ಒಡ್ಡಿದರು. ನ್ಯಾಯಾಲಯಗಳೇ `ಎಸ್‌ಐಆರ್ ನಡೆಸುವುದು ಕಡ್ಡಾಯ’ ಎಂದು ಬೆಂಬಲವಾಗಿ ನಿಂತು, ಪ್ರಕ್ರಿಯೆಗೆ ಮನ್ನಣೆ ನೀಡಿದ ನಂತರ ರಾಜ್ಯ ಸರ್ಕಾರವೇನೋ, ವಿರೋಧವಿದೆ ಎನ್ನುತ್ತಲೇ ಅಗತ್ಯ ಸಿಬ್ಬಂದಿ ಸೌಲಭ್ಯಗಳ ಸಹಕಾರ ನೀಡಿತು.

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದ ನಂತರ, ಅವರೀಗ ಹೆಣೆದ ಎಸ್‌ಐಆರ್ ತಂತ್ರಗಾರಿಕೆ ಈಗ ಗದ್ದುಗೆಗೆ ಸಮೀಪ ಬಂದುಬಿಟ್ಟಿವೆನ್ನುವ ಎಲ್ಲರಿಗೂ ಆಘಾತ ತಂದಿದೆ. ಹಾಗಾಗಿಯೇ ಎಸ್‌ಐಆರ್ ಬಂದ್ ಮಾಡಿ, ಪ್ರಕ್ರಿಯೆ ನಿಲ್ಲಿಸಿ, ಹೊರ ರಾಜ್ಯದ ಅಧಿಕಾರಿಗಳನ್ನು ಕಳಿಸಿ ಎಂದು ಬಿಜೆಪಿ-ಜೆಡಿಎಸ್ ಮುಖಂಡರು ಆಯೋಗದ ಮೊರೆ ಹೋಗಿದ್ದಾರೆ!

ರಾಜ್ಯದಲ್ಲಿಯ ಸುಮಾರು 95 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಹೊರಗಿಡಬೇಕೆಂಬ ಯೋಚನೆ, ಸಂಚಿನೊಂದಿಗೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭವಾದದ್ದು. ಎಸ್‌ಐಆರ್ ನಿಗೂಢ ಅಜೆಂಡಾವೇ ಹಾಗಿತ್ತು. 2002ರ ಮತದಾರರ ಪಟ್ಟಿಯನ್ನು ಮಾನದಂಡವಾಗಿಸಿಕೊಂಡು ನಡೆಸಲಾಗುತ್ತಿರುವ ಎಸ್‌ಐಆರ್‌ನಲ್ಲಿ ಹಕ್ಕು ಕಳೆದುಕೊಳ್ಳುವವರು ಬಹುತೇಕ ಅನಕ್ಷರಸ್ಥರು; ಗುಡ್ಡಗಾಡು ಸಮುದಾಯದವರು; ಅತೀ ಹಿಂದುಳಿದವರು; ಸ್ಲಂ ನಿವಾಸಿಗಳು, ಅಲ್ಪಸಂಖ್ಯಾತರು… ಇವರೇ ಟಾರ್ಗೆಟ್… ಏಕೆಂದರೆ ಇವರೆಲ್ಲ ಕೈ' ಹಿಡಿದವರು,ಕಮಲ’ವನ್ನು ಸೋಕಿಸಿಲ್ಲ ಎಂಬ ಕಲ್ಪನೆ !!

ಡಿಕೆ ತಿಂಗಳ ಹಿಂದಷ್ಟೇ ಕೆಪಿಸಿಸಿ ಅಧ್ಯಕ್ಷರಾಗಿದ್ದವರು. ಆಗ ಉಪ ಮುಖ್ಯಮಂತ್ರಿ ಕೂಡ. ಸಿಎಂ ಆದ ಕೂಡಲೇ ಬಿ.ಕೆ. ಹರಿಪ್ರಸಾದ್‌ಗೆ ಕೆಪಿಸಿಸಿ ಅಧಿಕಾರ ಹಸ್ತಾಂತರಿಸಿದರು. ಅಧ್ಯಕ್ಷರಿದ್ದಾಗಲೇ ಎಸ್‌ಐಆರ್ ಬಗ್ಗೆ ತಲೆಕೆಡಿಸಿಕೊಂಡಿದ್ದ ಡಿಕೆಶಿ ಮುಖ್ಯಮಂತ್ರಿಯಾದ ತಕ್ಷಣವೇ ನಾವು ಎಸ್‌ಐಆರ್‌ಗೆ ರೆಡಿ’ ಎಂದು ಗ್ರೀನ್ ಸಿಗ್ನಲ್ ನೀಡಿದರು!

ಡಿ.ಕೆ ನಡೆ ಬಿಜೆಪಿಗೆ ತಿಳಿಯಲೇ ಇಲ್ಲ. ಚುನಾವಣಾ ಆಯೋಗದ ಬಿಎಲ್‌ಓಗಳ, ಎಬಿಎಲ್‌ಓಗಳಿದ್ದ ಕಡೆಯಲ್ಲೇ ಕಾಂಗ್ರೆಸ್‌ನ ಪದಾಧಿಕಾರಿಗಳನ್ನು, ಕಾರ್ಯಕರ್ತರನ್ನು ಅದೇ ರೀತಿ ವಿಂಗಡಿಸಿ ಅಣಿಗೊಳಿಸಿದರು. `ನಾವು ಮತದಾರರ ಪಟ್ಟಿ ಪರಿಷ್ಕರಣೆಗೆ, ನೋಂದಣಿ, ಸಹಕಾರ ನೀಡುತ್ತೇವೆ. ಎಲ್ಲ ಮತದಾರರಿಗೆ ಅವರ ಹಕ್ಕು- ದಾಖಲೆಗಳನ್ನು ಒದಗಿಸಿ ಜಾಗೃತಿ ಮೂಡಿಸುತ್ತೇವೆ’ ಎಂದು ಘೋಷಿಸಿಕೊಂಡು ಇದಕ್ಕೊಂದು ಸ್ಟ್ರ್ಯಾಟೆಜಿ ಹೆಣೆದುಬಿಟ್ಟರು.

ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳನ್ನು ಪರಿಷ್ಕರಿಸುವ, ಯಾರು ಮತದಾರರ ಪಟ್ಟಿಯಲ್ಲಿ ಉಳಿದು, ಕಾರ್ಡ್‌ ಹೊಂದಿರುತ್ತಾರೋ ಅವರಿಗೆ ಮಾತ್ರ ಈ ಗ್ಯಾರಂಟಿಗಳ ಫಲ ದೊರೆಯಲಿದೆ ಎಂದು ಪ್ರಕಟಿಸಿ, ನಮ್ಮ ಮತದಾರರಿಗೆ ಮಾತ್ರ ಗ್ಯಾರಂಟಿ ಎನ್ನುತ್ತ ಸಿಎಂ. ಈ ಸಂಬಂಧ ಕಾರ್ಯಾನುಷ್ಟಾನಕ್ಕೂ ಇಳಿದರು. ಪರಿಣಾಮ, ಗ್ಯಾರಂಟಿ ಅಗತ್ಯತೆ ಇರುವ ಜನರೆಲ್ಲ ಎಸ್‌ಐಆರ್ ಮಾಡಿಸಿಕೊಳ್ಳಲು ಮುಗಿಬಿದ್ದರು. ಇದೇ ಕಾರಣಕ್ಕೆ ಮತದಾರರು ತಾವೇ ನೋಂದಣಿಗೆ ತಮ್ಮ ಕುಟುಂಬದ ಸದಸ್ಯರನ್ನು ದಾಖಲಿಸಲು ಮುಂದಾಗುತ್ತಿದ್ದಾರೆ.

ಈ ತಂತ್ರಗಾರಿಕೆಯೇ ಭಾಜಪ, ಜೆಡಿಎಸ್ ಸಮಸ್ಯೆ ತಂದೊಡ್ಡಿರುವುದು. ಯಾರನ್ನು ಮತಪಟ್ಟಿಯಿಂದ ಹೊರಗಿಡಬೇಕು ಎಂಬ ಯೋಚನೆ ಇತ್ತೋ, ಅದೇ ಸಮುದಾಯ, ಅದೇ ಜನ ಮತ್ತು ಅನಕ್ಷರಸ್ಥರು- ಗುಡ್ಡಗಾಡು ಜನರೆಲ್ಲ ಗ್ಯಾರಂಟಿ ಲಾಭ ಹೋಗುತ್ತದೆ ಎನ್ನುವ ಭಯದಿಂದ, ತಮ್ಮ ಬದುಕು, ಹೊಟ್ಟೆಪಾಡು ಬಿಟ್ಟು ಬಿಎಲ್‌ಓಗಳ ಆಗಮನಕ್ಕೆ ಅಥವಾ ಅವರ ಶೋಧಕ್ಕೆ ತೊಡಗಿದರು. ನಿಮಗೇನು ದಾಖಲೆ ಬೇಕು ಹೇಳಿ, ನಾವು ಕೊಡುತ್ತೇವೆ ಎಂದು ತಮ್ಮ ಹುಟ್ಟು, ಬದುಕು, ಅಪ್ಪ, ಅಮ್ಮ, ಅಜ್ಜಿ, ಮುತ್ತಜ್ಜ ಎಲ್ಲರ ದಾಖಲೆಗಳನ್ನು ಕೂಡ ಸಂಗ್ರಹಿಸಿಕೊಳ್ಳಲಾರಂಭಿಸಿದರು. ಅಲ್ಲದೇ ಸರ್ಕಾರದಿಂದ ರಹವಾಸಿ ಪತ್ರ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಎಲ್ಲವನ್ನೂ ಕೂಡ ಸಂಗ್ರಹಿಸಿ ಬಿಎಲ್‌ಓಗಳ ಮುಂದಿಡುತ್ತಿದ್ದಾರೆ. ಸಿಎಂ ಶಿವಕುಮಾರ್ ತಂತ್ರ ಫಲ ಕೊಟ್ಟಂತಿದೆ. ಹಾಗಾಗಿ ರಾಜ್ಯದಲ್ಲೂ ಎಸ್‌ಐಆರ್ ಮಾಡಿ ಎಂದು ಒತ್ತಾಯಿಸುತ್ತಿದ್ದವರೆಲ್ಲ ಈಗ ಎಸ್‌ಐಆರ್ ಸ್ಥಗಿತಗೊಳಿಸಿ, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಮಂತ್ರಿಗಳು ಸ್ವತಃ ಈ ಒತ್ತಡ ಹೇರುವ ನೇತೃತ್ವ ವಹಿಸಿದ್ದಾರೆ!

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಜನರನ್ನು ಜಾಗೃತಗೊಳಿಸಿ ಅವರಿಗೆ ಎಸ್‌ಐಆರ್ ದಾಖಲೆಗಳನ್ನು ಪೂರೈಸುವ ಕಾರ್ಯ ಮಾಡುವುದು ಬಿಟ್ಟು, ನ್ಯಾಯಾಲಯದ ಹೋರಾಟಕ್ಕಿಳಿದರು. ಅತ್ತ ನ್ಯಾಯಾಲಯದಲ್ಲಿಯೂ ಯಶ ಕಾಣಲಿಲ್ಲ. ಇತ್ತ ಮತದಾರರನ್ನೂ ಉಳಿಸಿಕೊಳ್ಳಲು (ರಕ್ಷಿಸಲು) ಆಗಲಿಲ್ಲ. ಹರಿಯಾಣ – ಬಿಹಾರದಲ್ಲಂತೂ ಎಸ್‌ಐಆರ್ ಪರಿಕಲ್ಪನೆ ಗೊತ್ತಾಗುವ ಮೊದಲೇ ಪ್ರಕ್ರಿಯೆಯೇ ಮುಗಿದು ಹೋಗಿತ್ತು.

ಪಶ್ಚಿಮ ಬಂಗಾಳ, ಹರಿಯಾಣ, ಬಿಹಾರ ಚುನಾವಣೆ ನಂತರ ನಡೆದ `ವೋಟ್ ಚೋರಿ’ ಶಬ್ದ ಬಳಕೆಗೆ ಬಂತು. ಹೇಗೆ ಈ ಮತಚೋರಿ? ನೋಡಿ… ಈಗ ಕೆಲ ಶಾಸಕರುಗಳು, ಒಂದು ಸಾವಿರ, ಎರಡು ಸಾವಿರ, ಮೂರು ಸಾವಿರ ಮತಗಳ ಅಂತರದಿಂದ ಗೆದ್ದಿದ್ದರೆ ಆ ಕ್ಷೇತ್ರಗಳಲ್ಲಿ ಅಷ್ಟು ಮತಗಳನ್ನು ಪ್ರತಿಪಕ್ಷ ಬೆಂಬಲಿಸುವ ಪ್ರದೇಶದಲ್ಲಿ ಕಡಿತಗೊಳಿಸುವುದು…! ಉದಾಹರಣೆಗೆ, ನವಲಗುಂದ ಕ್ಷೇತ್ರ ಎಂದಿಟ್ಟುಕೊಳ್ಳೋಣ… ಅಥವಾ ಹುಬ್ಬಳ್ಳಿ ಪೂರ್ವ ಕ್ಷೇತ್ರ ಎನ್ನೋಣ… ಅಲ್ಲಿ ಆಯ್ಕೆಯಾಗಿರುವ ಶಾಸಕರು ಮತ್ತು ಪ್ರತಿಸ್ಪರ್ಧಿಯ ನಡುವಿನ ಅಂತರ ನಾಲ್ಕೂವರೆ ಸಾವಿರ ಇದೆ. ಅವರನ್ನು ಬೆಂಬಲಿಸುವ ಸಮುದಾಯ ಮತ್ತು ಪ್ರದೇಶ ಯಾವುದೆಂಬುದು ಗೊತ್ತಿರುತ್ತದೆ. ಆ ಸಮುದಾಯದ ಬಹುತೇಕ ಮತಗಳನ್ನು ಎಸ್‌ಐಆರ್‌ನಲ್ಲಿ ಕಡಿತಗೊಳಿಸುವುದೇ ಈ ತಂತ್ರ ಅಥವಾ ಮತ ಚೋರಿ.

ಪಶ್ಚಿಮ ಬಂಗಾಳ, ಹರಿಯಾಣ, ಬಿಹಾರದಲ್ಲಿ ಆಗಿರುವುದೂ ಇದೇ..! ಕಳೆದ ಸಾರಿ ಸೋತ ಅಭ್ಯರ್ಥಿ ಮುಂಬರುವ ಚುನಾವಣೆಯಲ್ಲಿ ಗೆಲ್ಲುವ ಅವಕಾಶ ಹೆಚ್ಚಿರುತ್ತದೆ. ಆಶ್ಚರ್ಯವಾದೀತಲ್ಲವೇ. ಪಶ್ಚಿಮ ಬಂಗಾಳದ ಒಂದೇ ಕ್ಷೇತ್ರದಲ್ಲಿ ಹದಿನೆಂಟು ಸಾವಿರಕ್ಕೂ ಅಧಿಕ ಮತದಾರರನ್ನು ಮತಪಟ್ಟಿಯಿಂದ ಹೊರಗಿಡಲಾಯಿತು. ಆ ಕ್ಷೇತ್ರದಲ್ಲಿ ಕಮಲ ಅರಳಿತು! ಅದಕ್ಕಾಗಿಯೇ ಡಿಕೆ- ಬಿಕೆ ಪಡೆ ಪ್ರತಿತಂತ್ರವನ್ನು ರೂಪಿಸಿದ್ದು. ಗ್ಯಾರಂಟಿಗಳಿಗೆ ಮತ ಗುರುತಿನ ಕಾರ್ಡ್ ಅಗತ್ಯ ಎಂದಿದ್ದು! ರಾಜ್ಯ ಸರ್ಕಾರದ ಗ್ಯಾರಂಟಿ ಬಡವರ, ದುರ್ಬಲರ ಪಾಲಿಗಂತೂ ಜೀವ ಹಿಡಿದುಕೊಳ್ಳುವ ಸಣ್ಣ ಸೆಲೆ. ಇದೇ ಕಾರಣಕ್ಕೆ ಗ್ಯಾರಂಟಿ ಫಲಾನುಭವಿಯಾಗುವುದನ್ನು ತಪ್ಪಿಸಿಕೊಳ್ಳಲು ಯಾರೂ ಸಿದ್ಧರಿಲ್ಲ. ಅದಕ್ಕಾಗಿ ಡಿಕೆ-ಬಿಕೆ ತಂತ್ರ ಗೃಹಲಕ್ಷ್ಮೀ ಮತ್ತು ಗೃಹಜ್ಯೋತಿ ಯೋಜನೆಗಳ ಕುರಿತು ಮಾತ್ರ ಮಾತು ಕೇಂದ್ರೀಕರಿಸಿತು. ಇದು ನಿಜಕ್ಕೂ ಮಾಸ್ಟರ್ ಸ್ಟ್ರೋಕ್…

ವಿಧಾನ ಪರಿಷತ್ ಚುನಾವಣೆಯಲ್ಲಿ ವಿರೋಧ ಪಕ್ಷದ ಸದಸ್ಯರ ಹನ್ನೊಂದು ಮತಗಳನ್ನು ಸೆಳೆದುಕೊಂಡು ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಝಲಕ್ ತೋರಿಸಿದ್ದ ಡಿಕೆಶಿ ಈಗ ಎಸ್‌ಐಆರ್‌ಗೆ ಹೆಣೆದ ಪ್ರತಿತಂತ್ರದಿಂದ ದೆಹಲಿ ನಾಯಕರ ನಿದ್ದೆಗೆಡಿಸಿದ್ದಾರೆ.

ಮಾಸ್ ಲೀಡರ್ ಸಿದ್ದರಾಮಯ್ಯ ಹೋಗಲೆಂದು ಪ್ರಾರ್ಥಿಸುತ್ತಿದ್ದವರು ಈಗ ಡಿಕೆಶಿ ತಂತ್ರದ ಮುಂದೆ ಒಂದೇ ತಿಂಗಳಿನಲ್ಲಿ ತಲ್ಲಣಗೊಂಡಿದ್ದಾರೆ. `ಮಿಂಚಿನ ಓಟ ನನ್ನದಿನ್ನೂ ಇದೆ’ ಎಂದು ಸೂಚನೆಯನ್ನು ಡಿಕೆ ಕೊಟ್ಟಂತಿದೆ ಅಲ್ಲವೇ? ಏನೇ ಇದ್ದರೂ ಎಸ್‌ಐಆರ್ ಪ್ರಕ್ರಿಯೆ ಈಗ ನಡೆಯುತ್ತಿರುವುದು ಗೊಂದಲ- ಗೋಜಲಿನ ಗೂಡು… ಎನ್ನುವುದು ಸತ್ಯವಾದರೂ ಜನರೇ ಇದಕ್ಕೆ ಒಪ್ಪುವ ಅನಿವಾರ್ಯತೆ ಅಗತ್ಯತೆ ಸೃಷ್ಟಿಸಿ, ಅವರ ಹಕ್ಕು ಉಳಿಸಿಕೊಳ್ಳುವುದನ್ನು ಸಿಎಂ ಕಡ್ಡಾಯಗೊಳಿಸಿದರಲ್ಲ, ಇದು ನಿಜಕ್ಕೂ ದೊಡ್ಡ ರಾಜಕೀಯ ಪಟ್ಟು!