SK Home Ad
Home ಸಿನಿ ಮಿಲ್ಸ್ ಅಯೋಗ್ಯ 2 ಚಿತ್ರದ ಎರಡನೇ ಹಾಡು ಅನಾವರಣ

ಅಯೋಗ್ಯ 2 ಚಿತ್ರದ ಎರಡನೇ ಹಾಡು ಅನಾವರಣ

0
41

‘ಅಯೋಗ್ಯ 2’ ಚಿತ್ರದ ‘ಅಣ್ಣ ಬಂದ್ರೆ…’ ಹಾಡು ರಿಲೀಸ್; ಸತೀಶ್ ನೀನಾಸಂ ಮಾಸ್ ಅವತಾರಕ್ಕೆ ಅಭಿಮಾನಿಗಳ ಫಿದಾ

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಅಯೋಗ್ಯ 2 ಚಿತ್ರದ ಎರಡನೇ ಹಾಡು ‘ಅಣ್ಣ ಬಂದ್ರೆ…’ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಜೋಡಿಯ ಈ ಚಿತ್ರವು ಈಗಾಗಲೇ ಭಾರೀ ಕುತೂಹಲ ಮೂಡಿಸಿದ್ದು, ಇತ್ತೀಚೆಗೆ ಬಿಡುಗಡೆಯಾಗಿದ್ದ ‘ಮುದ್ದು ಮುದ್ದು ಪುಟ್ಟಲಕ್ಷ್ಮಿ’ ಹಾಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು.

ಈಗ ಬಿಡುಗಡೆಯಾಗಿರುವ ‘ಅಣ್ಣ ಬಂದ್ರೆ…’ ಹಾಡು ಚಿತ್ರದ ಇಂಟ್ರೊಡಕ್ಷನ್ ಸಾಂಗ್ ಆಗಿದ್ದು, ನಾಯಕ ಸತೀಶ್ ನೀನಾಸಂ ಅವರ ಮಾಸ್ ಅವತಾರವನ್ನು ಭರ್ಜರಿಯಾಗಿ ಪರಿಚಯಿಸುತ್ತದೆ. ನೂರಾರು ಡಾನ್ಸರ್‌ಗಳೊಂದಿಗೆ ಸತೀಶ್ ನೀನಾಸಂ ಹೆಜ್ಜೆ ಹಾಕಿರುವ ಈ ಹಾಡನ್ನು ಅದ್ಧೂರಿಯಾಗಿ ಚಿತ್ರೀಕರಿಸಲಾಗಿದೆ.

ಅರ್ಜುನ್ ಜನ್ಯ ಸಂಗೀತದ ಮ್ಯಾಜಿಕ್: ಹಾಡಿಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, ‘ಬಹದ್ದೂರ್’ ಚೇತನ್ ಕುಮಾರ್ ಸಾಹಿತ್ಯ ರಚಿಸಿದ್ದಾರೆ. ಗಾಯಕ ಆಂಥೊನಿ ದಾಸನ್ ಅವರ ಕಂಠದಲ್ಲಿ ಮೂಡಿ ಬಂದಿರುವ ಈ ಹಾಡಿಗೆ ನೃತ್ಯ ನಿರ್ದೇಶಕ ಸಂತೋಷ್ ಕೊರಿಯೋಗ್ರಫಿ ಮಾಡಿದ್ದಾರೆ.

ಆಡಿಯೋ ಹಕ್ಕಿಗೆ ದಾಖಲೆ ಮೊತ್ತ : ‘ಅಯೋಗ್ಯ’ ಚಿತ್ರದ ಮೊದಲ ಭಾಗದ ಆಡಿಯೋ ಹಕ್ಕು ಕೇವಲ ₹9 ಲಕ್ಷಕ್ಕೆ ಮಾರಾಟವಾಗಿತ್ತು. ಆದರೆ, ‘ಅಯೋಗ್ಯ 2’ ಚಿತ್ರದ ಆಡಿಯೋ ಹಕ್ಕು ಅದಕ್ಕಿಂತ ಸುಮಾರು 20 ಪಟ್ಟು ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿರುವುದು ವಿಶೇಷ. ಪ್ರಸಿದ್ಧ ಆನಂದ ಆಡಿಯೋ ಸಂಸ್ಥೆಯು ಚಿತ್ರದ ಆಡಿಯೋ ಹಕ್ಕುಗಳನ್ನು ಬರೋಬ್ಬರಿ ₹2 ಕೋಟಿಗೆ ಖರೀದಿಸಿದೆ ಎನ್ನಲಾಗಿದೆ. ಇದು ಚಿತ್ರದ ಮೇಲಿರುವ ನಿರೀಕ್ಷೆ ಮತ್ತು ಮಾರುಕಟ್ಟೆ ಮೌಲ್ಯವನ್ನು ತೋರಿಸುತ್ತದೆ.

‘ಅಯೋಗ್ಯ’ ಕಥೆ ಮುಂದುವರಿಯಲಿದೆ?: ಚಿತ್ರದ ನಿರ್ದೇಶಕ ಮಹೇಶ ಕುಮಾರ್‌ ಅವರ ಪ್ರಕಾರ, ‘ಅಯೋಗ್ಯ’ ಮೊದಲ ಭಾಗ ಎಲ್ಲಿ ಅಂತ್ಯಗೊಂಡಿತ್ತೋ, ಅಲ್ಲಿಂದ ಮರುದಿನವೇ ಎರಡನೇ ಭಾಗದ ಕಥೆ ಆರಂಭವಾಗುತ್ತದೆ. ಮೊದಲ ಭಾಗದ ಕೊನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯನಾಗುವ ಸಿದ್ಧೇಗೌಡ ಮುಂದಿನ ದಿನಗಳಲ್ಲಿ ಯಾವ ಸವಾಲುಗಳನ್ನು ಎದುರಿಸುತ್ತಾನೆ ಎಂಬುದು ಚಿತ್ರದ ಮುಖ್ಯ ಕಥಾಹಂದರವಾಗಿದೆ. ಕೆಲವು ಹೊಸ ಪಾತ್ರಗಳು ಸೇರ್ಪಡೆಯಾಗಿದ್ದರೂ, ಮೊದಲ ಭಾಗದ ಬಹುತೇಕ ಪಾತ್ರಗಳು ಎರಡನೇ ಭಾಗದಲ್ಲೂ ಮುಂದುವರಿಯಲಿವೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಆಗಸ್ಟ್ 7ಕ್ಕೆ ಚಿತ್ರ ಬಿಡುಗಡೆ : ಎಸ್‌ವಿಸಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಎಂ. ಮುನೇ ಗೌಡ ನಿರ್ಮಿಸಿರುವ ಈ ಚಿತ್ರವು ಆಗಸ್ಟ್ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಜೊತೆಗೆ ರವಿಶಂಕರ್, ಸಾಧು ಕೋಕಿಲ, ತಬಲ ನಾಣಿ, ಸುಂದರ್ ರಾಜ್, ಶಿವರಾಜ್ ಕೆ.ಆರ್.ಪೇಟೆ, ಅರುಣಾ ಬಾಲರಾಜ್, ಗಿರಿ ಶಿವಣ್ಣ ಹಾಗೂ ಮಂಜು ಪಾವಗಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಮಾಸ್ತಿ ಉಪ್ಪಾರಳ್ಳಿ ಸಂಭಾಷಣೆ ಬರೆದಿದ್ದು, ‘ಶಾಖಾಹಾರಿ’ ಖ್ಯಾತಿಯ ವಿಶ್ವಜಿತ್ ರಾವ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ ಹಾಗೂ ಅರ್ಜುನ್ ರಾಜ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.