SK Home Ad
Home ನಮ್ಮ ಜಿಲ್ಲೆ ಉಡುಪಿ ಅಯೋಧ್ಯೆ ಪ್ರಕರಣ: ಸುಪ್ರೀಂ ನ್ಯಾಯಾಧೀಶರಿಂದ ತನಿಖೆಯಾಗಲಿ

ಅಯೋಧ್ಯೆ ಪ್ರಕರಣ: ಸುಪ್ರೀಂ ನ್ಯಾಯಾಧೀಶರಿಂದ ತನಿಖೆಯಾಗಲಿ

0
41

ಸಂ.ಕ. ಸಮಾಚಾರ, ಉಡುಪಿ: ಅಯೋಧ್ಯೆಯ ರಾಮ ಮಂದಿರ ಮಂದಿರದ ಹುಂಡಿ ಹಣ ಲೂಟಿ ಪ್ರಕರಣ ಹಾಗೂ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ವಿವಿಧ ಆರೋಪಗಳ ಕುರಿತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ದೇಶದ ಜನರ ಮುಂದೆ ಬಹಿರಂಗಪಡಿಸಬೇಕು ಎಂದು ಮಾಜಿ ಸಚಿವ ವಿನಯ‌ಕುಮಾರ್ ಸೊರಕೆ ಒತ್ತಾಯಿಸಿದ್ದಾರೆ.

ಬುಧವಾರ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನ ಹೆಸರನ್ನು ಬಳಸಿಕೊಂಡು ಬಿಜೆಪಿ ಹಲವು ಚುನಾವಣೆಗಳನ್ನು ಎದುರಿಸಿದ್ದು, ಮನೆ-ಮನೆಗೆ ಇಟ್ಟಿಗೆಗಳನ್ನು ನೀಡಿ ಪೂಜೆ ಮಾಡಿಸಿ ಜನರ ಬೆಂಬಲ ಕೋರಿತ್ತು. ಆದರೆ, ರಾಮ ಮಂದಿರ ನಿರ್ಮಾಣಕ್ಕಾಗಿ ದಶಕಗಳಿಂದ ಸಂಗ್ರಹಿಸಲಾದ ಹಣದ ಸಂಪೂರ್ಣ ಲೆಕ್ಕಪತ್ರ ಇನ್ನೂ ಸಾರ್ವಜನಿಕರಿಗೆ ಲಭ್ಯವಾಗಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ: ಭಯೋತ್ಪಾದನಾ ಪಿತೂರಿ: ಕರ್ನಾಟಕ ಸೇರಿ ದೇಶದಾದ್ಯಂತ NIA ದಾಳಿ

ಮಂದಿರ ನಿರ್ಮಾಣದಲ್ಲಿ ಅಕ್ರಮ ಆರೋಪ : ಮಂದಿರ ನಿರ್ಮಾಣದ ವೇಳೆ ರಿಯಲ್ ಎಸ್ಟೇಟ್ ವ್ಯವಹಾರ ನಡೆದಿರುವ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ಸಂಬಂಧಿತ ಟ್ರಸ್ಟ್ ಸದಸ್ಯರು ಜನರಿಗೆ ಸ್ಪಷ್ಟನೆ ನೀಡಬೇಕಾಗಿದೆ ಎಂದು ಸೊರಕೆ ಹೇಳಿದರು. ಕರ್ನಾಟಕ ಮೂಲದ ಟ್ರಸ್ಟಿಯೊಬ್ಬರ ಅಳಿಯನಿಗೆ ಮಂದಿರ ನಿರ್ಮಾಣ ಕಾಮಗಾರಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದ್ದು, ಈ ಎಲ್ಲ ವಿಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ ಎಂದು ಅವರು ಆಗ್ರಹಿಸಿದರು.

ಚಿನ್ನದ ಬಳಕೆ, ಆರ್‌ಟಿಐ ಮತ್ತು ಸಿಸಿ ಟಿವಿ ವಿವಾದ : ರಾಮ ಮಂದಿರಕ್ಕೆ ಭಕ್ತರು ನೀಡಿದ ಚಿನ್ನವನ್ನು ಕರ್ನಾಟಕದಲ್ಲೇ ಕರಗಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಅಲ್ಲದೆ, ಮಂದಿರವನ್ನು ಮಾಹಿತಿ ಹಕ್ಕು ಕಾಯ್ದೆ (RTI) ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ದೂರಿದ ಸೊರಕೆ, ಇದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದರು.

ಇದನ್ನೂ ಓದಿ: ಬಳ್ಳಾರಿಯಲ್ಲಿ NIA ದಾಳಿ : ಕೌಲಬಜಾರ್‌ನಲ್ಲಿ ಶೋಧ ಕಾರ್ಯಾಚರಣೆ

ಮಂದಿರದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾಗಳನ್ನು ತೆಗೆದುಹಾಕಲಾಗಿದೆ ಎಂಬ ವರದಿಗಳು ಹಾಗೂ ಮಂದಿರದ ಕಟ್ಟಡದ ಕೆಲವು ಭಾಗಗಳಲ್ಲಿ ಹಾನಿಯ ಲಕ್ಷಣಗಳು ಕಂಡುಬರುತ್ತಿವೆ ಎಂಬ ಮಾಹಿತಿ ಹೊರಬಂದಿರುವ ಹಿನ್ನೆಲೆಯಲ್ಲಿ ಪಾರದರ್ಶಕ ತನಿಖೆ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಎಸ್‌ಐಟಿ ತನಿಖೆಯಿಂದ ಸತ್ಯ ಹೊರಬರುವುದಿಲ್ಲ : ಈ ಎಲ್ಲಾ ಆರೋಪಗಳ ಸತ್ಯಾಸತ್ಯತೆ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಯಿಂದ ಹೊರಬರಲು ಸಾಧ್ಯವಿಲ್ಲ. ಆದ್ದರಿಂದ ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ಪಾರದರ್ಶಕ ತನಿಖೆ ನಡೆಯಬೇಕು ಎಂದು ಸೊರಕೆ ಒತ್ತಾಯಿಸಿದರು.

‘ಮನ್ ಕೀ ಬಾತ್’ನಲ್ಲಿ ಮೌನ ಏಕೆ? : ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಎಲ್ಲ ವಿಷಯಗಳ ಕುರಿತು ಮಾತನಾಡುತ್ತಾರೆ. ಆದರೆ, ರಾಮ ಮಂದಿರಕ್ಕೆ ಸಂಬಂಧಿಸಿದ ಆರೋಪಗಳ ಬಗ್ಗೆ ಮೌನ ವಹಿಸಿರುವುದು ಏಕೆ ಎಂದು ಸೊರಕೆ ಪ್ರಶ್ನಿಸಿದರು.

ಇದನ್ನೂ ಓದಿ: KBJNL ಇಇ ಬಸನಗೌಡ ಮನೆ ಸೇರಿ 7 ಕಡೆ ಲೋಕಾಯುಕ್ತರ ದಾಳಿ

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಹಾಗೂ ಕಾಪು ಬ್ಲಾಕ್ ಕಾಂಗ್ರೆಸ್ (ದಕ್ಷಿಣ) ಅಧ್ಯಕ್ಷ ವೈ. ಸುಕುಮಾರ್ ಉಪಸ್ಥಿತರಿದ್ದರು.