SK Home Ad
Home ನಮ್ಮ ಜಿಲ್ಲೆ ಉಡುಪಿ ಹಿಂಸಾತ್ಮಕವಾಗಿ ಅಕ್ರಮ ಗೋ ಸಾಗಾಟ: ನಾಲ್ವರ ಬಂಧನ

ಹಿಂಸಾತ್ಮಕವಾಗಿ ಅಕ್ರಮ ಗೋ ಸಾಗಾಟ: ನಾಲ್ವರ ಬಂಧನ

0
54

ಸಂ.ಕ.ಸಮಾಚಾರ, ಉಡುಪಿ : ಮೇಯಲು ಬಿಟ್ಟ ದನಗಳನ್ನು ಟೆಂಪೋದಲ್ಲಿ ಹಿಂಸಾತ್ಮಕವಾಗಿ ಕಟ್ಟಿ, ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಮೊದಲ ಆರೋಪಿ ಕಳತ್ತೂರು ಗ್ರಾಮದ ಉಮ್ಮರಬ್ಬ (64)ನನ್ನು ಸೆ.19ರಂದು ಬಂಧಿಸಿ ನ್ಯಾಯಾಲಯದೆದುರು ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ತಲೆಮರೆಸಿಕೊಂಡಿದ್ದ ಆರೋಪಿಗಳಾದ ಮೊಹಮ್ಮದ್ ಶರೀಫ್ (31), ಶಂಶುದ್ದೀನ್ (57) ಹಾಗೂ ಮಹಮ್ಮದ್ ಆಸೀರ್ (24) ಎಂಬಬರನ್ನು ಸೆ.20ರಂದು ಕಾಪು ಕೊಪ್ಪಲಂಗಡಿಯಲ್ಲಿ ಟೆಂಪೋ ಸಮೇತ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕೆಎ19 ಬಿ 5641 ನೋಂದಣಿ ಸಂಖ್ಯೆಯ ಟೆಂಪೋ ಹಾಗೂ ದನವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸೆ.19ರಂದು ಸಂಜೆ ಕಳತ್ತೂರು ಗ್ರಾಮದ ನಡಿಗುತ್ತು ಎಂಬಲ್ಲಿ ವಸಂತಿ ಸುನೀತಾ ಕ್ವಾಡ್ರಸ್ ಅವರು ಮೇಯಲು ಬಿಟ್ಟಿದ್ದ ಐದು ದನಗಳ ಪೈಕಿ ದನವೊಂದು ಕಾಣೆಯಾಗಿತ್ತು. ದನವನ್ನು ಹುಡುಕುತ್ತಿದ್ದ ವೇಳೆ ಸಮೀಪದಲ್ಲಿ ನಿಂತಿದ್ದ ಟೆಂಪೋವೊಂದರಲ್ಲಿ ಕಾಣೆಯಾಗಿದ್ದ ದನದ ಜೊತೆಗೆ ಮತ್ತೊಂದು ದನವನ್ನೂ ಹಿಂಸಾತ್ಮಕವಾಗಿ ಕಟ್ಟಿರುವುದು ಕಂಡುಬಂದಿದ್ದು, ಟೆಂಪೋವನ್ನು ಪರಿಶೀಲಿಸಿದಾಗ ವಾಹನದ ಬಳಿ ದೂರುದಾರರಿಗೆ ಪರಿಚಿತರಾದ ಉಮರಬ್ಬ ಸೇರಿದಂತೆ ನಾಲ್ವರು ಇದ್ದರು. ದೂರುದಾರರನ್ನು ಕಂಡ ತಕ್ಷಣ ಆರೋಪಿಗಳು ಟೆಂಪೋ ಚಲಾಯಿಸಿಕೊಂಡು ಪರಾರಿಯಾದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಸಂತಿ ಸುನೀತಾ ಕ್ವಾಡ್ರಸ್ ನೀಡಿದ ದೂರಿನ ಮೇರೆಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್‌ ಅಧೀಕ್ಷಕಿ ಇಶಿತಾ ಗುಪ್ತ ಹಾಗೂ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಝಮತ್ ಅಲಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿ, ಶಿರ್ವ ಠಾಣೆ ಉಪನಿರೀಕ್ಷಕ ಮಂಜುನಾಥ ಮೊರಬದ, ಪಡುಬಿದ್ರಿ ಠಾಣೆ ಉಪನಿರೀಕ್ಷಕ ಶಕ್ತಿವೇಲು ಇ., ಅನಿಲ್ ಕುಮಾರ್ ಟಿ. ನಾಯ್ಡು ಹೆಬ್ರಿ ಠಾಣೆ ಉಪನಿರೀಕ್ಷಕ ಲೋಹಿತ್‌ ಕುಮಾ‌ರ್ ಹಾಗೂ ಶಿರ್ವ, ಕಾಪು, ಪಡುಬಿದ್ರಿ ಠಾಣೆಗಳ ಸಿಬ್ಬಂದಿ ಮತ್ತು ಉಡುಪಿ ಜಿಲ್ಲಾ ಪೊಲೀಸ್‌ ಕಚೇರಿಯ ಸಿ.ಡಿ.ಆರ್‌. ವಿಭಾಗದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.