SK Home Ad
Home ನಮ್ಮ ಜಿಲ್ಲೆ ರಾಯಚೂರು KBJNL ಇಇ ಬಸನಗೌಡ ಮನೆ ಸೇರಿ 7 ಕಡೆ ಲೋಕಾಯುಕ್ತರ ದಾಳಿ

KBJNL ಇಇ ಬಸನಗೌಡ ಮನೆ ಸೇರಿ 7 ಕಡೆ ಲೋಕಾಯುಕ್ತರ ದಾಳಿ

0
143

ರಾಯಚೂರಿನಲ್ಲಿ ಲೋಕಾಯುಕ್ತ ದಾಳಿ: ಕೆಬಿಜೆಎನ್‌ಎಲ್ ಇಇ ಬಸನಗೌಡ ಅವರ ಮನೆ, ಪೆಟ್ರೋಲ್ ಬಂಕ್ ಸೇರಿ 7 ಕಡೆ ಶೋಧ

ರಾಯಚೂರು: ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್‌ಎಲ್)ದ ಕಾರ್ಯನಿರ್ವಾಹಕ ಎಂಜಿನಿಯರ್ (ಇಇ) ಬಸನಗೌಡ ಅವರಿಗೆ ಸೇರಿದ ಮನೆ, ಕಚೇರಿ, ಪೆಟ್ರೋಲ್ ಬಂಕ್, ಗೋದಾಮು ಹಾಗೂ ಫಾರ್ಮ್‌ಹೌಸ್ ಸೇರಿದಂತೆ ಏಳು ಕಡೆ ಬುಧವಾರ ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ರಾಯಚೂರು ಲೋಕಾಯುಕ್ತ ಎಸ್‌ಪಿ ಸಿದ್ದರಾಜು ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ಬಳ್ಳಾರಿ, ಹೊಸಪೇಟೆ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳ ಏಳು ತಂಡಗಳು ದಾಳಿಯಲ್ಲಿ ಭಾಗವಹಿಸಿವೆ. 30ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ದಾಖಲೆಗಳ ಪರಿಶೀಲನೆ ಹಾಗೂ ಆಸ್ತಿಗಳ ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತರ ಶಾಕ್

ಮಾಹಿತಿಯ ಪ್ರಕಾರ, ನೀರಾವರಿ ಇಲಾಖೆಯಲ್ಲಿ ಮಿತಿ ಮೀರಿದ ಭ್ರಷ್ಟಾಚಾರ ಮತ್ತು ಅಕ್ರಮ ಆಸ್ತಿ ಸಂಪಾದನೆ ಸಂಬಂಧ ಹಲವು ದೂರುಗಳು ಲೋಕಾಯುಕ್ತಕ್ಕೆ ಬಂದಿದ್ದವು. ಈ ಹಿನ್ನೆಲೆ ಮುಂಜಾನೆ ದಾಳಿ ನಡೆಸಿದ ಅಧಿಕಾರಿಗಳು ಬಸನಗೌಡ ಅವರಿಗೆ ಸೇರಿದ ವಿವಿಧ ಆಸ್ತಿಗಳ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಸಮೀಪದ ಕೃಷ್ಣಾ ನದಿ ದಂಡೆಯಲ್ಲಿ ಸುಮಾರು 30 ಎಕರೆ ಜಮೀನು ಖರೀದಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಜಮೀನು ಖರೀದಿ, ಆಸ್ತಿ ಹೂಡಿಕೆ ಮತ್ತು ಹಣಕಾಸು ವ್ಯವಹಾರಗಳ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಇದಲ್ಲದೆ, ರಾಯಚೂರು ಬೈಪಾಸ್ ರಸ್ತೆಯಲ್ಲಿರುವ ಬಸನಗೌಡ ಅವರ ಪತ್ನಿ ಅನಿತಾ ಶೆಟ್ಟಿ ಹೆಸರಿನಲ್ಲಿನ ‘ಶ್ರೀ ಫಿಲ್ಲಿಂಗ್ ನಾಯರಾ’ ಪೆಟ್ರೋಲ್ ಬಂಕ್, ಅದರ ಪಕ್ಕದಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ಗೋದಾಮಿನ ಮೇಲೆಯೂ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಇದನ್ನೂ ಓದಿ: ಕರ್ತವ್ಯನಿರತ ಪೇದೆ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ

ಯಕ್ಲಾಸಪುರ ಗ್ರಾಮದ ನಿವಾಸಗಳು, ಎಚ್‌ಆರ್‌ಬಿ ಲೇಔಟ್‌ನ ಮನೆ, ಸೆಲೆಬ್ರಿಟಿ ಗಾರ್ಡನ್, ಹಾಗೂ ಬಸನಗೌಡ ಅವರ ಸಂಬಂಧಿಕರ ಮನೆಗಳಲ್ಲಿಯೂ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ದಾಳಿ ನಡೆದ ಪ್ರಮುಖ ಸ್ಥಳಗಳು: ಎಚ್‌ಆರ್‌ಬಿ ಲೇಔಟ್‌ನ ನಿವಾಸ, ಯಕ್ಲಾಸಪುರ ಗ್ರಾಮದ ಎರಡು ಮನೆಗಳು, ಶಿವನಗೌಡ ಹಾಗೂ ಶರಣಗೌಡ ಅವರ ನಿವಾಸಗಳು, ಪ್ರಿನ್ಸ್ ಬಾರ್ ಅಂಡ್ ರೆಸ್ಟೋರೆಂಟ್, ಶ್ರೀ ಫಿಲ್ಲಿಂಗ್ ನಾಯರಾ ಪೆಟ್ರೋಲ್ ಬಂಕ್, ಪಕ್ಕದಲ್ಲಿನ ಗೋದಾಮು, ಕೆಬಿಜೆಎನ್‌ಎಲ್ ಚಿಕ್ಕಹೊನ್ನಕುಣಿ ಕಚೇರಿ ಹಾಗೂ ಯಕ್ಲಾಸಪುರ ಸಮೀಪದ ತೋಟದ ಮನೆ.

ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ವಶಪಡಿಸಿಕೊಂಡಿರುವ ಆಸ್ತಿ ಹಾಗೂ ಹಣಕಾಸು ವಿವರಗಳ ಬಗ್ಗೆ ಅಧಿಕೃತ ಮಾಹಿತಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.