ಸೂಪರ್ ಎಲ್ ನಿನೋ ಪರಿಣಾಮ ಎದುರಿಸಲು ಸಜ್ಜಾಗಬೇಕು: ಅಧಿಕಾರಿಗಳಿಗೆ ಡಿಸಿಎಂ ಡಾ.ಜಿ. ಪರಮೇಶ್ವರ್ ಕಟ್ಟುನಿಟ್ಟಿನ ಸೂಚನೆ
ಸಂ.ಕ. ಸಮಾಚಾರ ಕಲಬುರಗಿ: ಸೂಪರ್ ಎಲ್ ನಿನೋ ಪರಿಣಾಮದಿಂದ ರಾಜ್ಯದಲ್ಲಿ ಉಂಟಾಗಬಹುದಾದ ಬರಗಾಲ ಹಾಗೂ ಪ್ರಕೃತಿ ವಿಕೋಪವನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ಈಗಿನಿಂದಲೇ ಸಕಲ ಸಿದ್ಧತೆ ಕೈಗೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಸೂಚನೆ ನೀಡಿದ್ದಾರೆ.
ಕಲಬುರಗಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ ಕಲಬುರಗಿ ಕಂದಾಯ ವಿಭಾಗದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನರ ಜೀವನೋಪಾಯ, ಕುಡಿಯುವ ನೀರು, ಉದ್ಯೋಗ, ಜಾನುವಾರುಗಳ ಮೇವು ಹಾಗೂ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಇದನ್ನೂ ಓದಿ: ‘ಸಿನಿಮಾ ಎಲ್ಲಕ್ಕಿಂತ ದೊಡ್ಡದು’: ‘ಕರಾವಳಿ’ ವಿವಾದದ ಬಗ್ಗೆ ರಾಜ್ ಬಿ. ಶೆಟ್ಟಿ ಬೇಸರ
ಬರಗಾಲಕ್ಕೆ ಮುನ್ನವೇ ಸಿದ್ಧತೆ ಅಗತ್ಯ : ಸೂಪರ್ ಎಲ್ ನಿನೋ ಪರಿಣಾಮದಿಂದ ದೇಶದ ಹಲವು ಭಾಗಗಳಲ್ಲಿ ಬರ, ಅಕಾಲಿಕ ಮಳೆ, ಭೂಕುಸಿತದಂತಹ ಪ್ರಕೃತಿ ವಿಕೋಪಗಳು ಸಂಭವಿಸುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದೇ ಪರಿಸ್ಥಿತಿ ರಾಜ್ಯದಲ್ಲೂ ನಿರ್ಮಾಣವಾಗುವ ಲಕ್ಷಣಗಳಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಪರಮೇಶ್ವರ್ ಹೇಳಿದರು.
ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗಿದ್ದರೂ, ಬಯಲು ಸೀಮೆಯ ಜಿಲ್ಲೆಗಳಲ್ಲಿ ಇನ್ನೂ ಮಳೆಯ ಕೊರತೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: ಕಾಕ್ರೋಚ್ ಪಕ್ಷದ ‘X’ ಖಾತೆ ತಡೆ ಆದೇಶ ರದ್ದುಗೊಳಿಸಿದ ದೆಹಲಿ ಹೈಕೋರ್ಟ್
ಜನರು ಊರು ಬಿಡದಂತೆ ಉದ್ಯೋಗ ಕಲ್ಪಿಸಿ : ಬರಗಾಲದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜನರು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಬಾರಿ ಅಂತಹ ಪರಿಸ್ಥಿತಿ ಬರದಂತೆ ನರೇಗಾ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳ ಮೂಲಕ ಗ್ರಾಮದಲ್ಲೇ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಡಿಯುವ ನೀರು ಮತ್ತು ಮೇವಿನ ಕೊರತೆ ಆಗದಂತೆ ಎಚ್ಚರಿಕೆ: ಬರಗಾಲದಿಂದ ಜನರಿಗೆ ಕುಡಿಯುವ ನೀರು, ಆಹಾರ ಹಾಗೂ ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಎಲ್ಲಾ ಜಿಲ್ಲೆಗಳು ಮುಂಚಿತವಾಗಿಯೇ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: ‘PDO ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ’– ಡೆತ್‌ನೋಟ್‌ನಲ್ಲಿ ಆರೋಪ
ಕಲಬುರಗಿ ಕಂದಾಯ ವಿಭಾಗದಲ್ಲಿ ಒಟ್ಟು 47 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರೂ, ಭಾಲ್ಕಿ, ಹುಮ್ನಾಬಾದ್, ಚಿಟಗುಪ್ಪ, ಹುಲಸೂರು, ಯಾದಗಿರಿ ಹಾಗೂ ಗುರುಮಿಟಕಲ್ ತಾಲ್ಲೂಕುಗಳಲ್ಲಿ ಕೇವಲ 20 ರಿಂದ 24 ವಾರಗಳಿಗೆ ಸಾಕಾಗುವಷ್ಟು ಮಾತ್ರ ಮೇವು ಲಭ್ಯವಿದೆ. ಆದ್ದರಿಂದ ಅಗತ್ಯವಿರುವ ಕಡೆಗಳಲ್ಲಿ ಮೇವು ಬ್ಯಾಂಕ್ ಹಾಗೂ ಗೋಶಾಲೆಗಳನ್ನು ತ್ವರಿತವಾಗಿ ಆರಂಭಿಸಲು ಸೂಚಿಸಿದರು.
ಮಳೆ ಕೊರತೆ – ಬಿತ್ತನೆ ಕುಸಿತ: ಈ ಬಾರಿ ಕಲಬುರಗಿ ಕಂದಾಯ ವಿಭಾಗದ 37 ತಾಲ್ಲೂಕುಗಳಲ್ಲಿ ಮಳೆ ಕೊರತೆ ದಾಖಲಾಗಿದ್ದು, 26 ತಾಲ್ಲೂಕುಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಹಾಗೂ 11 ತಾಲ್ಲೂಕುಗಳಲ್ಲಿ ತೀವ್ರ ಮಳೆಯ ಕೊರತೆ ಉಂಟಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 19.41 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದರೆ, ಈ ಬಾರಿ ಕೇವಲ 11.76 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ. ಅಂದರೆ ಶೇ.38ರಷ್ಟು ಮಾತ್ರ ಬಿತ್ತನೆ ಪೂರ್ಣಗೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಬರಗಾಲ, ರೈತರ ಸಂಕಷ್ಟದತ್ತ ಸರ್ಕಾರದ ಗಮನ: CM ಡಿ.ಕೆ. ಶಿ ಭರವಸೆ
ಬೀಜ-ಗೊಬ್ಬರ ಕೊರತೆ ಆಗದಂತೆ ಸೂಚನೆ : ಮುಂದಿನ ದಿನಗಳಲ್ಲಿ ಏಕಾಏಕಿ ಮಳೆಯಾದರೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಆರಂಭಿಸುವ ಸಾಧ್ಯತೆ ಇದೆ. ಆಗ ಬೀಜ ಹಾಗೂ ಗೊಬ್ಬರದ ಕೊರತೆ ಉಂಟಾಗದಂತೆ ಕೃಷಿ ಇಲಾಖೆ ಮುಂಚಿತವಾಗಿಯೇ ಅಗತ್ಯ ಸಂಗ್ರಹ ಮಾಡಿಕೊಳ್ಳಬೇಕು ಎಂದು ಸೂಚಿಸಿದರು. ಕಡಿಮೆ ಮಳೆಯಲ್ಲೂ ಬೆಳೆಯಬಹುದಾದ ಬೆಳೆಗಳ ಬಗ್ಗೆ ರೈತರಿಗೆ ಕೃಷಿ ಇಲಾಖೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಇ-ಪೌತಿ ಪ್ರಕರಣಗಳನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಿ: ಸಭೆಯಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಪರಮೇಶ್ವರ್ ಅವರು, ಕಲಬುರಗಿ ಕಂದಾಯ ವಿಭಾಗದಲ್ಲಿ ಬಾಕಿ ಉಳಿದಿರುವ 2,23,190 ಇ-ಪೌತಿ ಪ್ರಕರಣಗಳನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸುವಂತೆ ಸೂಚಿಸಿದರು. ಒಟ್ಟು 3,57,024 ಪ್ರಕರಣಗಳಲ್ಲಿ ಇದುವರೆಗೆ 1,33,834 ಪ್ರಕರಣಗಳು ಮಾತ್ರ ಪೂರ್ಣಗೊಂಡಿದ್ದು, ಉಳಿದ ಪ್ರಕರಣಗಳನ್ನು ವಿಜಯನಗರ, ಕಲಬುರಗಿ, ಬೀದರ್ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದನ್ನೂ ಓದಿ: ಪದ್ಮಶ್ರೀ ಪುರಸ್ಕೃತ, ‘ಬ್ರಿಡ್ಜ್ ಮ್ಯಾನ್’ ಖ್ಯಾತಿಯ ಗಿರೀಶ್ ಭಾರದ್ವಜ್ ನಿಧನ
ಹೊಸ ಕಂದಾಯ ಗ್ರಾಮಗಳ ರಚನೆಗೆ ವೇಗ : ಕಲಬುರಗಿ ವಿಭಾಗದಲ್ಲಿ 1,483 ಹೊಸ ಕಂದಾಯ ಗ್ರಾಮಗಳನ್ನು ರಚಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಇದರಲ್ಲಿ 1,048 ಗ್ರಾಮಗಳಿಗೆ ಈಗಾಗಲೇ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಉಳಿದ 435 ಗ್ರಾಮಗಳಿಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸುವಂತೆ ಸೂಚಿಸಿದರು.
ದೇವಾಲಯಗಳ ಅಭಿವೃದ್ಧಿಗೆ ಕಾರ್ಯಯೋಜನೆ : ಕಲಬುರಗಿ ವಿಭಾಗದಲ್ಲಿರುವ 32 ಪ್ರವರ್ಗ ‘ಎ’ ಅಧಿಸೂಚಿತ ದೇವಾಲಯಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಕಾರ್ಯಯೋಜನೆ ರೂಪಿಸುವಂತೆ ಸೂಚಿಸಿದ ಡಿಸಿಎಂ, ದೇವಾಲಯಗಳ ಆಸ್ತಿಗಳ ಮೇಲಿನ ಒತ್ತುವರಿಯನ್ನು ತೆರವುಗೊಳಿಸಿ ಇಲಾಖೆಯ ವಶಕ್ಕೆ ಪಡೆಯಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ದೇವಾಲಯಗಳ ಒಟ್ಟು 32.26 ಎಕರೆ ಜಮೀನಿನ ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ತ್ವರಿತಗೊಳಿಸಬೇಕು ಎಂದರು. ಅಲ್ಲದೆ, ವಿಭಾಗದಲ್ಲಿರುವ 7,606 ದೇವಾಲಯಗಳ ಪೈಕಿ 4,971 ದೇವಾಲಯಗಳ ಖಾತೆ ಇನ್ನೂ ಬಾಕಿ ಉಳಿದಿದ್ದು, ಸಂಬಂಧಿತ ತಹಶೀಲ್ದಾರರು ತ್ವರಿತವಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: ‘AMMA ಸದಸ್ಯತ್ವಕ್ಕೆ ನಟಿಯರಾದ ರೇವತಿ, ಪದ್ಮಪ್ರಿಯಾ ರಾಜೀನಾಮೆ!
ಡಿಸಿಎಂ ಪರಮೇಶ್ವರ್ ಅವರು, ಬರಗಾಲ ನಿರ್ವಹಣೆ, ಕಂದಾಯ ಸೇವೆಗಳು ಹಾಗೂ ಗ್ರಾಮೀಣ ಅಭಿವೃದ್ಧಿ ಕಾರ್ಯಗಳಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.






















