ಹಾವೇರಿ: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಜಿಲ್ಲಾಡಳಿತ ತನ್ನ ಹಿಡಿತವನ್ನು ಕಳೆದುಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಕೊಲೆಯಾದ ಶಿವಾಜಿರಾವ್ ಬೈರೋಜಿ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಸರಣಿ ಅಪರಾಧ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಘಟನೆಗಳ ಕುರಿತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
“ಭರತ್ ಮತ್ತು ಅವರ ತಂದೆ ಕಳೆದ 60 ವರ್ಷಗಳಿಂದ ಅಲ್ಲಿ ವ್ಯಾಪಾರ ಮಾಡಿಕೊಂಡಿದ್ದಾರೆ. ಮೊಟ್ಟೆ ಕೇಳಲು ಬಂದು, ಹಣದ ವಿಚಾರವಾಗಿ ಗಲಾಟೆ ಮಾಡಿದ್ದು ಕೇವಲ ಒಂದು ಸಣ್ಣ ಕಾರಣವಷ್ಟೇ. ಆದರೆ ಇದರ ಹಿಂದಿನ ಅಸಲಿ ಉದ್ದೇಶ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಿ, ಅಲ್ಲಿರುವ ಎಲ್ಲಾ ಅಂಗಡಿಗಳನ್ನು ತಮ್ಮ ವಶಕ್ಕೆ ಪಡೆಯುವುದಾಗಿದೆ” ಎಂದು ಆರೋಪಿಸಿದರು.
ರಾಜಕೀಯ ಕುಮ್ಮಕ್ಕಿನಿಂದ ಹೆಚ್ಚಿದ ಧೈರ್ಯ: ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಯನ್ನು ಕೆಡಿಸುವ ದುರುದ್ದೇಶ ಇಟ್ಟುಕೊಳ್ಳಲಾಗಿದೆ ಎಂದ ಅವರು, “ಇಂತಹ ಶಕ್ತಿಗಳಿಗೆ ದೊಡ್ಡ ಪ್ರಮಾಣದಲ್ಲಿ ರಾಜಕೀಯ ಬೆಂಬಲ ಮತ್ತು ಕುಮ್ಮಕ್ಕು ಸಿಗುತ್ತಿರುವುದರಿಂದಲೇ ಇಷ್ಟೊಂದು ಧೈರ್ಯ ಬಂದಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಸಣ್ಣ ಕೋಮು ಗಲಭೆಯೂ ನಡೆದಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ, ವಿಶೇಷವಾಗಿ 7-8 ಗಂಭೀರ ಪ್ರಕರಣಗಳು ನಡೆದಿವೆ” ಎಂದರು.
ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಅತ್ಯಾಚಾರ ಎಸಗಿದ ಯುವಕರು ಬೇಲ್ ಮೇಲೆ ಬಂದಾಗ, ಏನೋ ಯುದ್ಧ ಗೆದ್ದು ಬಂದವರಂತೆ ಮೆರವಣಿಗೆ ನಡೆಸಿ, ತಲವಾರ್ ಪ್ರದರ್ಶಿಸಿದ್ದಾರೆ. ಈ ವೇಳೆ ಪೊಲೀಸರು ಕಣ್ಣು ಮುಚ್ಚಿ ಕುಳಿತಿದ್ದರು. ಶಿಗ್ಗಾಂವಿಯಲ್ಲಿ ಹಗಲು ಹೊತ್ತಿನಲ್ಲೇ ಭೀಕರ ಕೊಲೆ ನಡೆದಿದೆ. ಹಾನಗಲ್ ತಾಲೂಕಿನಲ್ಲಿ 4-5 ಲವ್ ಜಿಹಾದ್ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ನರೇಗಲ್ ಹಾಗೂ ಕಾಗಿನೆಲೆಯಲ್ಲೂ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದರು.
ಪೊಲೀಸರು ಮತ್ತು ರಾಜಕೀಯ ನಾಯಕರು ಶಾಮೀಲು: ”ಜಿಲ್ಲೆಯಲ್ಲಿ ಓಸಿ, ಜೂಜಾಟ ಸೇರಿದಂತೆ ಅಕ್ರಮಗಳು ಎಗ್ಗಿಲ್ಲದೆ ನಡೆಯುತ್ತಿವೆ. ಮಾಧ್ಯಮಗಳು ಹಾಗೂ ಸಾರ್ವಜನಿಕರು ವಿಡಿಯೋ ಮಾಡಿಕೊಟ್ಟರೂ ಪೊಲೀಸರು ಕೇವಲ ನಾಮ್ ಕೇ ವಾಸ್ತೆ ಕ್ರಮ ಜರುಗಿಸುತ್ತಿದ್ದಾರೆ. ಇದಕ್ಕೆ ಕಾರಣ ಪೊಲೀಸರು ಹಾಗೂ ರಾಜಕೀಯ ನಾಯಕರು ಇದರಲ್ಲಿ ಶಾಮೀಲಾಗಿದ್ದಾರೆ. ಎಲ್ಲವೂ ಪರ್ಸೆಂಟೇಜ್ ಲೆಕ್ಕದಲ್ಲೇ ನಡೆಯುತ್ತಿದೆ” ಎಂದು ಅವರು ಗಂಭೀರ ಆರೋಪ ಮಾಡಿದರು.
ಕೋಮು ಸೌಹಾರ್ದತೆಗೆ ಹೆಸರಾಗಿದ್ದ ಜಿಲ್ಲೆಯಲ್ಲಿ ಶಾಂತಿ ಕದಡುತ್ತಿರುವ ಶಕ್ತಿಗಳನ್ನು ಮಟ್ಟಹಾಕದಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ಹೀಗಾಗಿ ಇದರ ವಿರುದ್ಧ ದೊಡ್ಡ ಮಟ್ಟದ ಜಾಗೃತಿ ಹಾಗೂ ಪ್ರತಿಭಟನೆ ನಡೆಸುವ ಅಗತ್ಯವಿದೆ ಎಂದರು.
ಜುಲೈ 16 ರಂದು ಬೃಹತ್ ಪ್ರತಿಭಟನೆ: ರಾಜ್ಯ ಸರ್ಕಾರದ ತುಷ್ಟೀಕರಣ ರಾಜಕಾರಣ, ಕೋಮು ಸೌಹಾರ್ದತೆ ಕೆಡಿಸುವ ಸಂಚು ಹಾಗೂ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ವಿರುದ್ಧ ಬರುವ ಜುಲೈ 16 ರಂದು ಹಾವೇರಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಇತ್ತೀಚೆಗೆ ಹಾನಗಲ್ ತಾಲೂಕಿನ ನರೇಗಲ್‌ನಲ್ಲಿ ನಡೆದ ಹಲ್ಲೆ ಮತ್ತು ರಟ್ಟಿಹಳ್ಳಿ ಕೊಲೆ ಪ್ರಕರಣವನ್ನು ಉಲ್ಲೇಖಿಸಿದ ಅವರು, “ವೈಯಕ್ತಿಕ ಗಲಾಟೆ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ, ತಂದೆ-ಮಗನ ಮೇಲೆ ನಡೆದಿರುವ ಹಲ್ಲೆ ಕೇವಲ ಸಣ್ಣ ಕಾರಣಕ್ಕೆ ಅಲ್ಲ. ಒಂದು ನಿರ್ದಿಷ್ಟ ಕೋಮಿನ ಜನರು ಅತ್ಯಂತ ಅಮಾನುಷ ಹಾಗೂ ಕ್ರೂರವಾಗಿ ಮರ್ಮಾಂಗಕ್ಕೆ ಒದ್ದು ತಂದೆಯನ್ನು ಕೊಲೆ ಮಾಡಿದ್ದಾರೆ ಎಂದರೆ, ಅವರ ಈ ಧೈರ್ಯದ ಹಿಂದೆ ರಾಜಕೀಯ ಕುಮ್ಮಕ್ಕಿದೆ ಎಂಬುದು ಸ್ಪಷ್ಟವಾಗುತ್ತದೆ” ಎಂದು ಆರೋಪಿಸಿದರು.
ಮುಖ್ಯಮಂತ್ರಿಗಳಿಗೆ ಎಚ್ಚರಿಕೆ: ಈ ಪ್ರಕರಣದಲ್ಲಿ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇಂತಹ ಕೃತ್ಯ ಎಸಗುವವರು ಯಾರೇ ಇರಲಿ, ಯಾವ ಪಕ್ಷಕ್ಕೆ ಸೇರಿರಲಿ, ಮುಲಾಜಿಲ್ಲದೆ ಜೈಲಿಗಟ್ಟಬೇಕು. ಪೊಲೀಸರು ಹಾಗೂ ಸರ್ಕಾರ ತಪ್ಪಿತಸ್ಥರಿಗೆ ಪಾಠ ಕಲಿಸದಿದ್ದರೆ, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳಿಗೇ ಇದು ಕುತ್ತಾಗಿ ಪರಿಣಮಿಸಲಿದೆ ಮತ್ತು ಸರ್ಕಾರಕ್ಕೆ ದೊಡ್ಡ ಕೆಟ್ಟ ಹೆಸರು ಬರಲಿದೆ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹತೋಟಿ ತಪ್ಪಿದ್ದು, ಅಪರಾಧ ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ”ನಾವು ಕೂಡ 35 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇವೆ. ತಪ್ಪು ಮುಚ್ಚಿಕೊಳ್ಳಲು ಇಂತಹ ಹಾರಿಕೆ ಉತ್ತರಗಳು ನಡೆಯುವುದಿಲ್ಲ” ಎಂದ ಬೊಮ್ಮಾಯಿ, ಇಂತಹ ಶಕ್ತಿಗಳಿಗೆ ಮಣಿಯದೆ ತಕ್ಷಣ ಕಠಿಣ ಕ್ರಮ ಜರುಗಿಸಬೇಕೆಂದು ಮುಖ್ಯಮಂತ್ರಿಗಳಿಗೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆಗ್ರಹಿಸಿದರು.






















