SK Home Ad
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಹೆದ್ದಾರಿ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ

ಹೆದ್ದಾರಿ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ

0
43

ಮಂಗಳೂರು: ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಕಾರು ಅಡ್ಡಗಟ್ಟಿ ಕುಟುಂಬವನ್ನು ಬೆದರಿಸಿ ಸುಮಾರು ₹23.10 ಲಕ್ಷ ಮೌಲ್ಯದ ಚಿನ್ನಾಭರಣ, ಕಾರು ಹಾಗೂ ಮೊಬೈಲ್‌ಗಳನ್ನು ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯದಲ್ಲಿ ಭಾಗಿಯಾಗಿದ್ದ ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದ್ದ ಮೂವರು ಆರೋಪಿಗಳನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

ಜೂನ್ 29ರಂದು ನಸುಕಿನ ಸುಮಾರು 2.45ಕ್ಕೆ ಮಹಾರಾಷ್ಟ್ರದಿಂದ ಕೇರಳದ ಪಯ್ಯನ್ನೂರಿಗೆ ಕುಟುಂಬದೊಂದಿಗೆ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ತೆರಳುತ್ತಿದ್ದ ವಿಕಾಸ್ ಸುಬ್ಬರಾವ್ ಧನವಡೆ ಅವರ ಕಾರನ್ನು ಬೈಕಂಪಾಡಿ ಸಮೀಪ ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದ 6-7 ಮಂದಿ ಮುಸುಕುಧಾರಿಗಳು ಅಡ್ಡಗಟ್ಟಿದ್ದರು. ತಲವಾರು ತೋರಿಸಿ ಬೆದರಿಕೆ ಹಾಕಿದ ಆರೋಪಿಗಳು ವಿಕಾಸ್ ಅವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದರು. ಬಳಿಕ ಅವರ ಪತ್ನಿ ಹಾಗೂ ಮಗನನ್ನು ಬಲವಂತವಾಗಿ ಅಪಹರಿಸಿ ಕೆಲ ಕಿಲೋಮೀಟರ್ ದೂರದಲ್ಲಿ ಬಿಟ್ಟು, ಕಾರಿನಲ್ಲಿದ್ದ ಸುಮಾರು 180 ಗ್ರಾಂ ಚಿನ್ನಾಭರಣ (ಅಂದಾಜು ಮೌಲ್ಯ ₹20 ಲಕ್ಷ), ಎರಡು ಮೊಬೈಲ್‌ಗಳು ಹಾಗೂ ಕಾರು ಸೇರಿದಂತೆ ಒಟ್ಟು ₹23.10 ಲಕ್ಷ ಮೌಲ್ಯದ ಆಸ್ತಿಯನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾರು ಪತ್ತೆ: ತನಿಖೆ ವೇಳೆ ಜೂನ್ 30ರಂದು ದರೋಡೆಕೋರರು ಕೊಂಡೊಯ್ದಿದ್ದ ದೂರುದಾರರ ಮಾರುತಿ ಡಿಜೈರ್ ಕಾರು ಬಂಟ್ವಾಳ ತಾಲೂಕಿನ ಪಚ್ಚಿನಡ್ಕದ ಗುಡ್ಡ ಪ್ರದೇಶದಲ್ಲಿ ನಂಬರ್ ಪ್ಲೇಟ್ ಇಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ.

ಮೂವರು ಆರೋಪಿಗಳ ಬಂಧನ: ಜುಲೈ 2ರಂದು ಕೇರಳದ ಕಣ್ಣೂರು ಜಿಲ್ಲೆಯ ಚಾಲದಲ್ಲಿರುವ ಅಸ್ಟರ್ ಮಿಮ್ಸ್ ಆಸ್ಪತ್ರೆ ಸಮೀಪದಿಂದ ಪ್ರಮುಖ ಆರೋಪಿ ನಿಮಿಲ್ ಆರ್.ಕೆ. (37) ಎಂಬಾತನನ್ನು ಬಂಧಿಸಲಾಗಿತ್ತು. ಅದೇ ದಿನ ಪ್ರಕರಣದಲ್ಲಿ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಡಿ ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಇರ್ಷಾದ್ (40) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಆರೋಪಿ ಮುಸ್ತಾಫ (49) ಎಂಬಾತನನ್ನು ಮಡಿಕೇರಿ ತಾಲೂಕಿನ ಮೂರ್ನಾಡು ಜಂಕ್ಷನ್ ಸಮೀಪದ ಬಸ್ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಮುಸ್ತಾಫ ಪ್ರಮುಖ ಆರೋಪಿಗಳಿಗೆ ಕಾರು ಒದಗಿಸಿ ಆಶ್ರಯ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೂ 13 ಆರೋಪಿಗಳ ಪತ್ತೆಗೆ ಶೋಧ: ಪ್ರಾಥಮಿಕ ತನಿಖೆಯ ಪ್ರಕಾರ, ಪ್ರಕರಣದಲ್ಲಿ ಒಟ್ಟು 16 ಮಂದಿ ಭಾಗಿಯಾಗಿದ್ದು, ಅವರಲ್ಲಿ 14 ಮಂದಿ ನೇರವಾಗಿ ದರೋಡೆ ಕೃತ್ಯದಲ್ಲಿ ಭಾಗವಹಿಸಿದ್ದರೆ, ಇಬ್ಬರು ಆರೋಪಿಗಳಿಗೆ ಆಶ್ರಯ ಹಾಗೂ ನೆರವು ನೀಡಿದ್ದರು. ಬಂಧಿತ ಮೂವರನ್ನು ಜುಲೈ 3ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳು ಸೇರಿ ಇನ್ನೂ 13 ಮಂದಿ ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಇನ್ನೂ ಸೊತ್ತು ಪತ್ತೆಯಾಗಿಲ್ಲ: ಆರೋಪಿಗಳು ಬಳಸಿದ್ದ ನಾಲ್ಕು ಕಾರುಗಳಲ್ಲಿ ಒಂದು ಇನ್ನೋವಾ ಕ್ರಿಸ್ಟಾ ಕಾರನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಮೂರು ಕಾರುಗಳು, ದರೋಡೆ ಮಾಡಿದ್ದ 180 ಗ್ರಾಂ ಚಿನ್ನಾಭರಣ ಹಾಗೂ ಎರಡು ಮೊಬೈಲ್ ಫೋನ್‌ಗಳು ಇನ್ನೂ ಪತ್ತೆಯಾಗಬೇಕಿದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳೆಲ್ಲರೂ ಕೊಡಗು ಜಿಲ್ಲೆ ಹಾಗೂ ಕೇರಳ ರಾಜ್ಯದವರಾಗಿರುವುದು ಬೆಳಕಿಗೆ ಬಂದಿದೆ.