ಸಿದ್ದಗಂಗಾ ಮಠದ ಅಂಗಳದಲ್ಲಿ ಮಕ್ಕಳೊಂದಿಗೆ ಮಕ್ಕಳಾದ ಮದರ್ ಪ್ರಾಮಿಸ್ ಚಿತ್ರತಂಡ : ಡಾಲಿಯ ಮೊದಲ ಪ್ರಾರ್ಥನಾ ಗೀತೆ ವೈರಲ್ – ಸಿದ್ದಗಂಗಾ ಮಠದಲ್ಲಿ ಚಿತ್ರೀಕರಿಸಿದ ‘ಓ ಬೆಳಕೆ ಬಾ ಬೆಳಕೆ’ ಹಾಡಿಗೆ ಮೆಚ್ಚುಗೆ
ಬೆಂಗಳೂರು: ಈಗಾಗಲೇ ವಿಭಿನ್ನ ರೀತಿಯ ಪ್ರಚಾರ, ಆಕರ್ಷಕ ಹಾಡುಗಳು ಹಾಗೂ ಹೊಸತನದ ಕಂಟೆಂಟ್ ಮೂಲಕ ಸಿನಿಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವ ‘ಮದರ್ ಪ್ರಾಮಿಸ್’ ಚಿತ್ರದ ಮತ್ತೊಂದು ವಿಶೇಷ ಹಾಡು ಬಿಡುಗಡೆಯಾಗಿದೆ. ಡಾಲಿ ಧನಂಜಯ ನಿರ್ಮಿಸಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದ ‘ಓ ಬೆಳಕೆ ಬಾ ಬೆಳಕೆ’ ಹಾಡು ಭಾವನಾತ್ಮಕ ಪ್ರಾರ್ಥನಾ ಗೀತೆಯಾಗಿ ಎಲ್ಲರ ಗಮನ ಸೆಳೆಯುತ್ತಿದೆ.
ಈ ಹಾಡಿನ ವಿಶೇಷವೆಂದರೆ, ನಟ ಡಾಲಿ ಧನಂಜಯ ಮೊದಲ ಬಾರಿಗೆ ಮಕ್ಕಳಿಗಾಗಿ ಪ್ರಾರ್ಥನಾ ಗೀತೆಯೊಂದನ್ನು ರಚಿಸಿದ್ದಾರೆ. ಪ್ರೇಮಗೀತೆಗಳು ಹಾಗೂ ಹಳ್ಳಿಯ ಸೊಗಡಿನ ಹಾಡುಗಳನ್ನು ಬರೆದಿದ್ದ ಡಾಲಿ, ಈ ಬಾರಿ ಮಕ್ಕಳ ಭಾವನೆಗಳನ್ನು ಪ್ರತಿಬಿಂಬಿಸುವ ಸಾಹಿತ್ಯದ ಮೂಲಕ ಹೊಸ ಪ್ರಯೋಗ ಮಾಡಿದ್ದಾರೆ.
ಇದನ್ನೂ ಓದಿ: ಗಣೇಶ್ 2 ದಶಕದ ಸಂಭ್ರಮ: ‘ಬೃಂದಾವಿಹಾರಿ’ ರಿಲೀಸ್ ಡೇಟ್ ಫಿಕ್ಸ್!
ಹಾಡಿನ ಚಿತ್ರೀಕರಣವನ್ನು ತುಮಕೂರಿನ ಪ್ರಸಿದ್ಧ ಸಿದ್ದಗಂಗಾ ಮಠದ ಆವರಣದಲ್ಲಿ ನಡೆಸಲಾಗಿದೆ. ಮಠದ ಶಾಲೆ, ಅಡುಗೆಮನೆ ಹಾಗೂ ವಿವಿಧ ಸ್ಥಳಗಳಲ್ಲಿ ಮಕ್ಕಳೊಂದಿಗೆ ಇಡೀ ದಿನ ಕಳೆದ ಚಿತ್ರತಂಡ, ಹಾಡಿಗೆ ನೈಜತೆಯ ಸ್ಪರ್ಶ ನೀಡುವ ಪ್ರಯತ್ನ ಮಾಡಿದೆ. ಮಕ್ಕಳ ಸಹಜ ಅಭಿನಯ ಹಾಗೂ ಹಾಡಿನ ಭಾವನಾತ್ಮಕ ನಿರೂಪಣೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
ಕಮರ್ಷಿಯಲ್ ಹಾಗೂ ರೊಮ್ಯಾಂಟಿಕ್ ಹಾಡುಗಳ ನಡುವೆ ವಿಭಿನ್ನವಾಗಿ ಮೂಡಿಬಂದಿರುವ ಈ ಪ್ರಾರ್ಥನಾ ಗೀತೆ ಸಾಮಾಜಿಕ ಜಾಲತಾಣಗಳಲ್ಲಿಯೂ ಮೆಚ್ಚುಗೆ ಗಳಿಸುತ್ತಿದೆ. ಚಿತ್ರದ ಸಂಗೀತಕ್ಕೆ ನವನೀತ್ ಶ್ಯಾಮ್ ಸಂಯೋಜನೆ ನೀಡಿದ್ದು, ರಾಹುಲ್ ರಾಯ್ ಛಾಯಾಗ್ರಹಣ ಚಿತ್ರದ ದೃಶ್ಯ ವೈಭವವನ್ನು ಹೆಚ್ಚಿಸಿದೆ.
ಇದನ್ನೂ ಓದಿ: 30 ವರ್ಷಗಳ ಬಳಿಕ ‘ಅಮೇರಿಕಾ ಅಮೇರಿಕಾ’ ಹೆಸರಿನಲ್ಲಿ ಹೊಸ ಸಿನಿಮಾ
‘ಮದರ್ ಪ್ರಾಮಿಸ್’ ಚಿತ್ರವನ್ನು ಡಾಲಿ ಪಿಕ್ಚರ್ಸ್ ಸಹಯೋಗದಲ್ಲಿ ಡಾಲಿ ಧನಂಜಯ ಅವರ ಸ್ನೇಹಿತ ಹರ್ಷ ಮುರುಂಡಿ ಶಿವಲಿಂಗಪ್ಪ ನಿರ್ಮಿಸಿದ್ದಾರೆ. ಪೂರ್ಣ ನಿರ್ದೇಶನದ ಈ ಚಿತ್ರಕ್ಕೆ ‘ಡೇರ್ ಡೆವಿಲ್ ಮುಸ್ತಾಫ’ ಖ್ಯಾತಿಯ ಶಶಾಂಕ್ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ.
ಚಿತ್ರದಲ್ಲಿ ಡಾಲಿ ಧನಂಜಯ ಜೊತೆಗೆ ನಾಗಭೂಷಣ್, ಹಿರಿಯ ನಟಿಯರಾದ ವಿನಯ ಪ್ರಸಾದ್, ಗೀತಾ ಹಾಗೂ ಗುರುದತ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಭಾವನಾತ್ಮಕತೆ, ಕಾಮಿಡಿ ಹಾಗೂ ಥ್ರಿಲ್ಲರ್ ಅಂಶಗಳ ಸಂಯೋಜನೆಯೊಂದಿಗೆ ಮೂಡಿಬಂದಿರುವ ‘ಮದರ್ ಪ್ರಾಮಿಸ್’ ಸಿನಿಮಾ ಜುಲೈ 10ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.






















