ಮುಂಬೈ: ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಸಮರ್ಥಿಸಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಖಿಲ ಭಾರತ ದಂತ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಶಸ್ತ್ರಚಿಕಿತ್ಸಕರ ಸಂಘ (ಎಐಡಿಎಸ್‌ಎ) ತನ್ನ ರಾಷ್ಟ್ರೀಯ ಖಜಾಂಚಿ ಡಾ. ಮುಸ್ಕಾನ್ ಸೋನಿ ಅವರನ್ನು ಹುದ್ದೆಯಿಂದ ಹಾಗೂ ಸಂಘದ ಸದಸ್ಯತ್ವದಿಂದ ಐದು ವರ್ಷಗಳ ಕಾಲ ಅಮಾನತುಗೊಳಿಸಿದೆ.
ಇತ್ತೀಚೆಗೆ ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕರಣದ ಬಳಿಕ ಡಾ. ಮುಸ್ಕಾನ್ ಸೋನಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದ ಪೋಸ್ಟ್‌ನಲ್ಲಿ ಕೊಲೆಯನ್ನು ಪರೋಕ್ಷವಾಗಿ ಸಮರ್ಥಿಸುವ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೆ, ಅವರು “I Hate Men” ಎಂಬ ಹ್ಯಾಶ್‌ಟ್ಯಾಗ್ ಬಳಸಿದ್ದೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅನೇಕರು ಡಾ. ಮುಸ್ಕಾನ್ ಅವರ ನಿಲುವನ್ನು ಖಂಡಿಸಿದ್ದು, ವೈದ್ಯಕೀಯ ವೃತ್ತಿಯಲ್ಲಿರುವ ವ್ಯಕ್ತಿಯೊಬ್ಬರು ಇಂತಹ ಹೇಳಿಕೆ ನೀಡಿರುವುದು ಅತ್ಯಂತ ಬೇಜವಾಬ್ದಾರಿಯ ನಡೆ ಎಂದು ಟೀಕಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ, ಮುಸ್ಕಾನ್ ಸೋನಿ ತಮ್ಮ ಪೋಸ್ಟ್ ಬಗ್ಗೆ ವಿಷಾದ ವ್ಯಕ್ತಪಡಿಸಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ತಮ್ಮ ಉದ್ದೇಶವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದರೂ, ಸಂಘವು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಕೈಗೊಂಡಿದೆ.
ಎಐಡಿಎಸ್‌ಎ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಡಾ. ದಿವಾಕರ್ ಮೂಡೌಟಿಯಾ ಪ್ರಕಟಣೆ ಹೊರಡಿಸಿ, “ಹಿಂಸಾಚಾರವನ್ನು ಸಮರ್ಥಿಸುವುದು, ವೈಭವೀಕರಿಸುವುದು ಅಥವಾ ಮೃತರ ಬಗ್ಗೆ ಗೌರವವಿಲ್ಲದಿರುವುದನ್ನು ತೋರಿಸುವ ಯಾವುದೇ ಹೇಳಿಕೆಗಳನ್ನು ಸಂಘ ಸಹಿಸುವುದಿಲ್ಲ. ಇಂತಹ ನಡವಳಿಕೆ ಎಐಡಿಎಸ್‌ಎಯ ತತ್ವ, ಮೌಲ್ಯಗಳು ಹಾಗೂ ವೃತ್ತಿಪರ ನೈತಿಕತೆಗೆ ವಿರುದ್ಧವಾಗಿದೆ. ಯಾವುದೇ ಪದಾಧಿಕಾರಿ ಅಥವಾ ಸದಸ್ಯರಿಗೆ ಇಂತಹ ವರ್ತನೆಗೆ ಅವಕಾಶವಿಲ್ಲ” ಎಂದು ತಿಳಿಸಿದ್ದಾರೆ.
ಸಂಘದ ಶಿಸ್ತು ಸಮಿತಿಯ ಶಿಫಾರಸಿನ ಮೇರೆಗೆ, ಡಾ. ಮುಸ್ಕಾನ್ ಸೋನಿ ಅವರನ್ನು ರಾಷ್ಟ್ರೀಯ ಖಜಾಂಚಿ ಹುದ್ದೆಯಿಂದ ತಕ್ಷಣದಿಂದಲೇ ತೆಗೆದುಹಾಕಲಾಗಿದ್ದು, ಸಂಘದ ಸದಸ್ಯತ್ವವನ್ನೂ ಐದು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೇತನ್ ಅಗರ್ವಾಲ್ ಕೊಲೆ ಪ್ರಕರಣವೇನು?: ಜೂನ್ 18ರಂದು ಪುಣೆ ಸಮೀಪದ ಲೋಹಗಢ ಕೋಟೆ ಪ್ರದೇಶದಲ್ಲಿ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಕಣಿವೆಗೆ ತಳ್ಳಿ ಹತ್ಯೆ ಮಾಡಲಾಗಿತ್ತು. ತನಿಖೆಯಲ್ಲಿ ಅವರ ಭಾವಿ ಪತ್ನಿ ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರ ಚೇತನ್ ಚೌಧರಿ ಸಂಚು ರೂಪಿಸಿ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿತ್ತು. ಪೊಲೀಸರು ಇಬ್ಬರನ್ನೂ ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಈ ಹತ್ಯೆ ಪ್ರಕರಣ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದರೆ, ಅದನ್ನು ಸಮರ್ಥಿಸುವ ರೀತಿಯ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಮತ್ತಷ್ಟು ವಿವಾದ ಹುಟ್ಟುಹಾಕಿವೆ. ಈ ಹಿನ್ನೆಲೆಯಲ್ಲಿ ಎಐಡಿಎಸ್‌ಎ ಕೈಗೊಂಡಿರುವ ಶಿಸ್ತು ಕ್ರಮವೂ ವ್ಯಾಪಕ ಗಮನ ಸೆಳೆದಿದೆ.




















