ಹುಬ್ಬಳ್ಳಿ: ಬಹುಚರ್ಚಿತ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ' (ಎಸ್‌ಐಆರ್) ಮಂಗಳವಾರದಿಂದ ಆರಂಭವಾಗುತ್ತಿದೆ. ಈ ಕುರಿತು ಜನರಲ್ಲಿ ತುಂಬಿರುವ ದುಗುಡ, ಆತಂಕ ಮತ್ತು ಚಿಂತೆಗಳು ಒಂದೆರಡಲ್ಲ. ಪ್ರಶ್ನೆಗಳಿಗೆ ಲೆಕ್ಕವಿಲ್ಲ. ಇವೆಲ್ಲವುಗಳನ್ನು ಪರಿಹರಿಸಲುಸಂಯುಕ್ತ ಕರ್ನಾಟಕ’ ಪತ್ರಿಕೆಯು ಎಸ್‌ಐಆರ್ ಆರಂಭದ ದಿನವೇ (ಜೂನ್ 30) ಜಿಲ್ಲಾಧಿಕಾರಿ ಆರ್.ಸ್ನೇಹಲ್ ಅವರ ಫೋನ್ ಇನ್ ಏರ್ಪಡಿಸಿದೆ.
ಬೆಳಿಗ್ಗೆ 11ರಿಂದ 12 ಗಂಟೆಯವರೆಗೆ ಫೋನ್ ಇನ್ ನಡೆಯಲಿದ್ದು ಸಾರ್ವಜನಿಕರು ಎಸ್‌ಐಆರ್ ಕುರಿತು ತಮಗಿರುವ ಎಲ್ಲ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಅವಕಾಶವಿದೆ. ಎಸ್‌ಐಆರ್ ಉದ್ದೇಶವೇನು? ಸಾರ್ವಜನಿಕರಿಗೆ ಏನು ಲಾಭ? ಈ ಪ್ರಕ್ರಿಯೆಯನ್ನು ಏಕೆ ಕೈಗೆತ್ತಿಕೊಳ್ಳಲಾಗಿದೆ? ಇದು ಕಾನೂನು ಬದ್ಧವೇ? ಹಿಂದೆಂದಾದರೂ ಎಸ್‌ಐಆರ್ ನಡೆದಿತ್ತೇ? ಇವೇ ಮೊದಲಾದ ಪ್ರಶ್ನೆಗಳಿಗೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಸ್ನೇಹಲ್ ಉತ್ತರ ನೀಡುವರು. ಹಾಗೆಯೇ ಎಸ್‌ಐಆರ್ ನಂತರ ಹೆಸರು ಡಿಲೀಟ್ ಆಗುವುದೇ ಮತ್ತು ಆದಲ್ಲಿ ಏನು ಮಾಡಬೇಕು ಎನ್ನುವ ಮೂಲ ಪ್ರಶ್ನೆಗಳಿಗೂ ಜಿಲ್ಲಾಧಿಕಾರಿಗಳು ಪರಿಹಾರ ಸೂಚಿಸಲಿದ್ದಾರೆ.
ಎಸ್‌ಐಆರ್ ಬಗ್ಗೆ ಸರಿಯಾದ ಮಾಹಿತಿಗಳನ್ನು ನೀಡಬೇಕು ಎನ್ನುವ ಉದ್ದೇಶದಿಂದ `ಸಂಯುಕ್ತ ಕರ್ನಾಟಕ’ ಪತ್ರಿಕೆಯು ಜಿಲ್ಲಾಧಿಕಾರಿ ಆರ್.ಸ್ನೇಹಲ್ ಅವರ ಫೋನ್ ಇನ್ ಕಾರ್ಯಕ್ರಮವನ್ನು ಏರ್ಪಡಿಸಿದೆ.ಒಂದು ತಾಸಿನ ಫೋನ್ ಇನ್‌ನಲ್ಲಿ ಜಿಲ್ಲಾಧಿಕಾರಿಗಳು ಎಸ್‌ಐಆರ್ ಕುರಿತು ಎದ್ದಿರುವ ಎಲ್ಲ ಗೊಂದಲಗಳನ್ನು ನಿವಾರಿಸುವಂತಾಗಲಿ ಎಂಬುದೇ ಪತ್ರಿಕೆಯ ಸದಾಶಯವಾಗಿದೆ. ಆದ್ದರಿಂದ ಕೇಳುಗರು ಸರಿಯಾದ ಸಿದ್ಧತೆ ಮಾಡಿಕೊಂಡು ಈ ಫೋನ್ ಇನ್‌ನಲ್ಲಿ ತಮ್ಮೆಲ್ಲ ಅನುಮಾನಗಳನ್ನು ಪರಿಹರಿಸಿಕೊಳ್ಳಬೇಕು. ಪ್ರಶ್ನೆಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕೇಳಬೇಕು. ಜಿಲ್ಲಾಧಿಕಾರಿಗಳ ಸಮಯ ಅಮೂಲ್ಯವಾದುದರಿಂದ ಅನಗತ್ಯ ಚರ್ಚೆಗಳಿಗೆ ಅವಕಾಶವಿಲ್ಲ.
ಪ್ರಶ್ನೆಗಳನ್ನು ಕೇಳಲು 9902098730, 9916591157 ಈ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ.
ಎಸ್‌ಐಆರ್ ಆರಂಭ: ಜೂನ್ 30, 2026.
ಎಸ್‌ಐಆರ್ ಅಂತ್ಯ: ಜುಲೈ 29, 2026.
ಪರಿಷ್ಕೃತ ಮತದಾರರ ಕರಡು ಪಟ್ಟಿ ಪ್ರಕಟಣೆ: 5ನೇ ಆಗಸ್ಟ್, 2026.
ಆಕ್ಷೇಪಣೆಗಳನ್ನು ಸಲ್ಲಿಸುವುದು: 5ನೇ ಆಗಸ್ಟ್ನಿಂದ, 4ನೇ ಸೆಪ್ಟೆಂಬರ್ 2026ರವರೆಗೆ.
ಆಕ್ಷೇಪಣೆಗಳ ವಿಲೇವಾರಿ ಅವಧಿ: 5ನೇ ಸೆಪ್ಟೆಂಬರ್‌ನಿಂದ 3ನೇ ಅಕ್ಟೋಬರ್ 2026ರವರೆಗೆ.
ಎಸ್‌ಐಆರ್ ಅನ್ವಯ ಅಂತಿಮ ಮತದಾರರ ಪಟ್ಟಿ ಪ್ರಕಟಣೆ: 7ನೇ ಅಕ್ಟೋಬರ್ 2026.




















