ಬೆಳಗಾವಿ: ದೇಶದ ಗಡಿ ಕಾಯ್ದ ಮಾಜಿ ಯೋಧನೊಬ್ಬನ ಹೊಲಕ್ಕೆ ಕೇಂದ್ರ ಸಚಿವರು ತೆರಳಿ, ಕಾರಹುಣ್ಣಿಮೆಯ ವಿಶೇಷ ಭೋಜನ ಸವಿದ ಅಪರೂಪದ ಕ್ಷಣಕ್ಕೆ ತೇಗೂರ ಗ್ರಾಮ ಸಾಕ್ಷಿಯಾಯಿತು.
ಜೇಷ್ಠ ಪೂರ್ಣಿಮೆ ಹಾಗೂ ರೈತರ ಪಾಲಿನ ಪವಿತ್ರ ಹಬ್ಬವಾದ ಕಾರಹುಣ್ಣಿಮೆ ದಿನ ಬೆಳಗಾವಿಯ ಕಾರ್ಯಕ್ರಮ ಮುಗಿಸಿ ಹಿಂದಿರುಗುತ್ತಿದ್ದ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ತೇಗೂರ ಗ್ರಾಮದ ರೈತ ರಮೇಶ್ ಗೋಕಾವಿ ಅವರ ಹೊಲಕ್ಕೆ ಭೇಟಿ ನೀಡಿದರು. ಅಲ್ಲಿಯೇ ರೈತ ಕುಟುಂಬದ ಆತಿಥ್ಯ ಸ್ವೀಕರಿಸಿ, ಆತ್ಮೀಯವಾಗಿ ಭೋಜನ ಮಾಡಿದರು.
ರಮೇಶ್ ಗೋಕಾವಿ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಮಣ್ಣಿನ ಸೇವೆಗೆ ಮರಳಿದ ಮಾಜಿ ಯೋಧ. ದೇಶದ ಗಡಿಯಲ್ಲಿ ಸೈನಿಕನಾಗಿ ಕರ್ತವ್ಯ ನಿರ್ವಹಿಸಿದ ಅವರು, ಇದೀಗ ಕೃಷಿಯ ಮೂಲಕ ಅನ್ನದಾತನಾಗಿ ಬದುಕು ಕಟ್ಟಿಕೊಂಡಿದ್ದಾರೆ.
“ಕಾರಹುಣ್ಣಿಮೆಯ ಪವಿತ್ರ ದಿನವೇ ಕೇಂದ್ರ ಸಚಿವರು ನಮ್ಮ ಹೊಲಕ್ಕೆ ಆಗಮಿಸಿ, ನಮ್ಮೊಂದಿಗೆ ಕುಳಿತು ಊಟ ಮಾಡಿರುವುದು ಜೀವನದಲ್ಲಿ ಮರೆಯಲಾಗದ ಕ್ಷಣ. ಇದು ನಮ್ಮ ಕುಟುಂಬಕ್ಕೆ ಮಾತ್ರವಲ್ಲ, ಇಡೀ ರೈತ ಸಮುದಾಯಕ್ಕೆ ದೊರೆತ ಗೌರವ” ಎಂದು ರಮೇಶ್ ಗೋಕಾವಿ ಸಂತಸ ವ್ಯಕ್ತಪಡಿಸಿದರು.
ಯಾವುದೇ ಆಡಂಬರವಿಲ್ಲದೆ ರೈತನ ಹೊಲಕ್ಕೆ ತೆರಳಿ, ಕುಟುಂಬದ ಆತಿಥ್ಯ ಸ್ವೀಕರಿಸಿದ ಸಚಿವರ ಸರಳ ನಡೆ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಯಿತು. ಸಚಿವರಿಗೆ ರೈತ ಕುಟುಂಬದವರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಗಡಿ ಕಾಯುವ ಯೋಧ ಮತ್ತು ದೇಶಕ್ಕೆ ಅನ್ನ ನೀಡುವ ರೈತ—ಈ ಎರಡೂ ಶಕ್ತಿಗಳು ಒಂದೇ ವ್ಯಕ್ತಿಯಲ್ಲಿ ಮೇಳೈಸಿದ ಹೊಲದಲ್ಲಿ ನಡೆದ ಈ ಭೋಜನ, ‘ಅನ್ನದಾತನೇ ರಾಷ್ಟ್ರದ ನಿಜವಾದ ಶಕ್ತಿ’ ಎಂಬ ಸಂದೇಶವನ್ನು ಮತ್ತೊಮ್ಮೆ ಸಾರಿತು.



















