SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಸಚಿವ ಸ್ಥಾನಕ್ಕೆ ಅರ್ಹತೆ ಇದೆ, ಆದರೆ ಬೇಡಿಕೆ ಇಡುವುದಿಲ್ಲ:ಶಾಂತನಗೌಡ

ಸಚಿವ ಸ್ಥಾನಕ್ಕೆ ಅರ್ಹತೆ ಇದೆ, ಆದರೆ ಬೇಡಿಕೆ ಇಡುವುದಿಲ್ಲ:ಶಾಂತನಗೌಡ

0
88

ದಾವಣಗೆರೆ: ಸಚಿವ ಸ್ಥಾನಕ್ಕೆ ತಾನು ಅರ್ಹನಾಗಿದ್ದರೂ, ಅದಕ್ಕಾಗಿ ಯಾರ ಬಳಿಯೂ ಬೇಡಿಕೆ ಇಡುವುದಿಲ್ಲ ಎಂದು ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನ ನೀಡುವ ಪ್ರಕ್ರಿಯೆ ವೈಯಕ್ತಿಕ ಒತ್ತಾಯ ಅಥವಾ ಬೇಡಿಕೆಯ ಆಧಾರದ ಮೇಲೆ ನಡೆಯುವುದಿಲ್ಲ, ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

ಸೋಮವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟ ಪುನಾರಚನೆ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯ, ಜಾತಿ ಸಮೀಕರಣ, ಪ್ರಾದೇಶಿಕ ಸಮತೋಲನ ಹಾಗೂ ಆಡಳಿತಾತ್ಮಕ ಅಗತ್ಯಗಳನ್ನು ಪರಿಗಣಿಸಿ ಸಚಿವ ಸಂಪುಟ ರಚನೆ ಮಾಡುತ್ತದೆ ಎಂದರು.

ಇದನ್ನೂ ಓದಿ: ವಿಜಯೇಂದ್ರರನ್ನು ಕಿಕ್ ಔಟ್ ಮಾಡಿ: ವೈರಲ್‌ Audio ಸೃಷ್ಟಿಸಿದ ತಲ್ಲಣ

“ನನಗೆ ಸಚಿವ ಸ್ಥಾನದ ಅರ್ಹತೆ ಹಾಗೂ ಆಕಾಂಕ್ಷೆ ಎರಡೂ ಇವೆ. ಆದರೆ, ನಾನು ಯಾರ ಬಳಿಯೂ ಸಚಿವ ಸ್ಥಾನಕ್ಕಾಗಿ ಮನವಿ ಮಾಡಿಲ್ಲ. ಪಕ್ಷ ಜವಾಬ್ದಾರಿ ನೀಡಿದರೆ ಅದನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ. ಕೊಟ್ಟರೆ ಬಿಡುವುದಿಲ್ಲ, ಕೊಡದಿದ್ದರೆ ಜನಸೇವೆಯನ್ನು ಮುಂದುವರಿಸುತ್ತೇನೆ,” ಎಂದು ಶಾಂತನಗೌಡ ತಿಳಿಸಿದರು.

ರಾಜ್ಯದಲ್ಲಿ ಸಂಪುಟ ಪುನಾರಚನೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಇನ್ನೂ ಪ್ರಾತಿನಿಧ್ಯ ಸಿಗದಿರುವ ಜಿಲ್ಲೆಗಳಿಗೂ ಅವಕಾಶ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲಿಯವರೆಗೆ ಹಾಲಿ ಸಚಿವರೇ ತಮ್ಮ ಜವಾಬ್ದಾರಿಗಳನ್ನು ಮುಂದುವರಿಸಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಭೂಕುಸಿತದಲ್ಲಿ ಸಿಲುಕಿ ಪಾರಾದ ಬೈಕ್ ಸವಾರ: Video ವೈರಲ್

ಇತ್ತೀಚೆಗೆ ಹೊನ್ನಾಳಿ ತಾಲೂಕಿನ ಮುಖಂಡರೊಂದಿಗೆ ದೆಹಲಿಗೆ ಭೇಟಿ ನೀಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, “ನಾವು ದೆಹಲಿಗೆ ಹೋಗಿದ್ದು ಸೌಜನ್ಯದ ಭೇಟಿಗಾಗಿ ಮಾತ್ರ. ಸಚಿವ ಸ್ಥಾನಕ್ಕಾಗಿ ಯಾರನ್ನೂ ಭೇಟಿ ಮಾಡಿಲ್ಲ. ಅದನ್ನು ರಾಜಕೀಯವಾಗಿ ಅರ್ಥೈಸುವ ಅಗತ್ಯವಿಲ್ಲ,” ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿಯ ‘ಸೂಟ್‌ಕೇಸ್ ಸಂಸ್ಕೃತಿ’ಗೆ ಅವಕಾಶವಿಲ್ಲ ಎಂದು ಹೇಳಿದ ಅವರು, ಪಕ್ಷದಲ್ಲಿ ನಿಷ್ಠೆ, ಅರ್ಹತೆ ಮತ್ತು ಜನಸೇವೆ ಆಧಾರದ ಮೇಲೆ ಮಾತ್ರ ಅವಕಾಶಗಳು ದೊರೆಯುತ್ತವೆ ಎಂದು ತಿಳಿಸಿದರು.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ಮತ್ತೆ ಖರ್ಗೆ ಪಯಣ: ಪ್ರಮಾಣ ವಚನ ಸ್ವೀಕಾರ

ದಾವಣಗೆರೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದು, ಪಕ್ಷದ ಹಿರಿಯ ನಾಯಕತ್ವ ಹಾಗೂ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ಶಾಂತನಗೌಡ ಹೇಳಿದರು.

ರಾಜಕೀಯ ವಲಯದಲ್ಲಿ ಸಚಿವ ಸ್ಥಾನಕ್ಕಾಗಿ ಹಲವು ನಾಯಕರು ಲಾಬಿ ನಡೆಸುತ್ತಿದ್ದಾರೆ ಎಂಬ ಚರ್ಚೆಗಳ ನಡುವೆಯೇ, ಡಿ.ಜಿ. ಶಾಂತನಗೌಡ ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಮಹತ್ವ ಪಡೆದಿದೆ.