SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಅಂಬೇಡ್ಕರ್ ನಾಮಫಲಕಕ್ಕೆ ಸಗಣಿ: ಗ್ರಾಮದಲ್ಲಿ ಉದ್ವಿಗ್ನ ವಾತಾವರಣ

ಅಂಬೇಡ್ಕರ್ ನಾಮಫಲಕಕ್ಕೆ ಸಗಣಿ: ಗ್ರಾಮದಲ್ಲಿ ಉದ್ವಿಗ್ನ ವಾತಾವರಣ

0
89

ದಾವಣಗೆರೆ: ಜಗಳೂರು ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ತಡರಾತ್ರಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವಿರುವ ನಾಮಫಲಕಕ್ಕೆ ಕಿಡಿಗೇಡಿಗಳು ಸಗಣಿ ಬಳಿದು ವಿಕೃತಿ ಮೆರೆದಿರುವ ಘಟನೆ ನಡೆದಿದೆ.

ಘಟನೆಯ ಹಿನ್ನೆಲೆ: ಕೆಲ ದಿನಗಳ ಹಿಂದೆ ಗ್ರಾಮದಲ್ಲಿ ನಡೆದಿದ್ದ ಮೊಹರಂ ಹಬ್ಬದ ಸಂದರ್ಭದಲ್ಲಿ ʻತಪ್ಪಡಿʼ ಬಾರಿಸುವ ವಿಚಾರವಾಗಿ ನಾಯಕ ಹಾಗೂ ಮಾದಿಗ ಸಮುದಾಯಗಳ ಮಧ್ಯೆ ಗಲಾಟೆ ನಡೆದಿತ್ತು. ಈ ಸಂಬಂಧ ಗ್ರಾಮದ ರಂಗಪ್ಪ ಎಂಬುವವರು ನಾಯಕ ಸಮುದಾಯದ ಕೆಲವು ಯುವಕರ ವಿರುದ್ಧ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ವೈಷಮ್ಯದ ಕಿಡಿ: ದೂರು ದಾಖಲಾದ ಹಿನ್ನೆಲೆಯಲ್ಲಿ ಉಂಟಾಗಿದ್ದ ವೈಮನಸ್ಸಿನಿಂದಲೇ ಕಿಡಿಗೇಡಿಗಳು ಅಂಬೇಡ್ಕರ್ ನಾಮಫಲಕಕ್ಕೆ ಸಗಣಿ ಬಳಿದಿರಬಹುದು ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಅನುಮಾನಕ್ಕೆ ಪುಷ್ಟಿ ನೀಡುವಂತೆ, ಪೊಲೀಸ್ ಠಾಣೆಗೆ ದೂರು ನೀಡಿದ್ದ ರಂಗಪ್ಪ ಅವರಿಗೆ ಸೇರಿದ ಅಂಗಡಿಯ ಶೆಡ್ ಅನ್ನು ಸಹ ಕಿಡಿಗೇಡಿಗಳು ಒಡೆದು ಹಾಕಿ ಆಕ್ರೋಶ ತೀರಿಸಿಕೊಂಡಿದ್ದಾರೆ. ದೂರು ನೀಡಿದ್ದಕ್ಕಾಗಿಯೇ ಈ ನೀಚ ಕೃತ್ಯ ಎಸಗಲಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಗ್ರಾಮಸ್ಥರ ಆಕ್ರೋಶ, ಪ್ರತಿಭಟನೆ: ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಜಮಾಯಿಸಿದ್ದು, ಕೃತ್ಯ ಎಸಗಿದ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.