SK Home Ad
Home ಸುದ್ದಿ ರಾಜ್ಯ ರೈತರ ಮೊದಲ ಹಬ್ಬ ಕಾರಹುಣ್ಣಿಮೆ ಸಂಭ್ರಮಕ್ಕೆ ಕರುನಾಡು ಸಜ್ಜು

ರೈತರ ಮೊದಲ ಹಬ್ಬ ಕಾರಹುಣ್ಣಿಮೆ ಸಂಭ್ರಮಕ್ಕೆ ಕರುನಾಡು ಸಜ್ಜು

0
41

ಯಂತ್ರಗಳ ಯುಗದಲ್ಲೂ ಜೀವಂತವಾಗಿರುವ ಕಾರಹುಣ್ಣಿಮೆ ಸಂಪ್ರದಾಯ : ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವ ಕಾರಹುಣ್ಣಿಮೆ ವಿಶೇಷತೆ ಏನು?

ಕೃಷಿ ಪ್ರಧಾನ ನಾಡು ಕರ್ನಾಟಕದಲ್ಲಿ ರೈತರ ಬದುಕು, ಭಾವನೆ ಮತ್ತು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಪ್ರಮುಖ ಹಬ್ಬಗಳಲ್ಲಿ ‘ಕಾರಹುಣ್ಣಿಮೆ’ಗೂ ವಿಶೇಷ ಸ್ಥಾನವಿದೆ. ರೈತನ ಜೀವನದಲ್ಲಿ ವರ್ಷವಿಡೀ ಹೊಲದಲ್ಲಿ ಜೊತೆಗೂಡಿ ದುಡಿಯುವ ಎತ್ತು, ದನ-ಕರುಗಳಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವೇ ಕಾರಹುಣ್ಣಿಮೆ. ಇದು ಕೇವಲ ಒಂದು ಆಚರಣೆಯಲ್ಲ, ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ಜೀವಂತ ಸಂಸ್ಕೃತಿಯಾಗಿದೆ.

ಜ್ಯೇಷ್ಠ ಹುಣ್ಣಿಮೆ ದಿನ ಆಚರಿಸಲಾಗುವ ಕಾರಹುಣ್ಣಿಮೆ ಹಬ್ಬಕ್ಕೆ ಗ್ರಾಮೀಣ ಭಾಗಗಳಲ್ಲಿ ವಿಶೇಷ ಮಹತ್ವವಿದೆ. ಈ ಹಬ್ಬದ ಅಂಗವಾಗಿ ರೈತರು ತಮ್ಮ ಎತ್ತುಗಳನ್ನು ವಿಶೇಷವಾಗಿ ಸಿಂಗರಿಸಿ ಪೂಜಿಸುತ್ತಾರೆ. ಎತ್ತುಗಳಿಗೆ ಸ್ನಾನ ಮಾಡಿಸಿ, ಕೊಂಬುಗಳನ್ನು ಕೆತ್ತಿ ಆಕರ್ಷಕ ರೂಪ ನೀಡಲಾಗುತ್ತದೆ. ಬಳಿಕ ಎಣ್ಣೆ ಮಿಶ್ರಿತ ಅರಿಶಿನ ಹಚ್ಚಿ, ಬಣ್ಣ ಬಣ್ಣದ ರಿಬ್ಬನ್, ಹಣೆಕಟ್ಟು, ಹಿತ್ತಾಳೆಯ ಕೊಡೆನ್ಸ್, ಕಾಲುಗೆಜ್ಜೆ ಸೇರಿದಂತೆ ವಿವಿಧ ಅಲಂಕಾರಗಳಿಂದ ಸಿಂಗರಿಸಲಾಗುತ್ತದೆ.

ಇದನ್ನೂ ಓದಿ: ವರುಣನ ಕೃಪೆಗಾಗಿ ದುರ್ಗಾಂಬಿಕಾ ಸನ್ನಿಧಿಯಲ್ಲಿ ವಾರದ ಸಂತೆ ಶುರು

ರೈತರು ತಮ್ಮ ಎತ್ತುಗಳನ್ನು ಬಸವಣ್ಣನ ಪ್ರತಿರೂಪವೆಂದು ಭಾವಿಸಿ ಭಕ್ತಿಯಿಂದ ಪೂಜಿಸುತ್ತಾರೆ. ಕಾರಹುಣ್ಣಿಮೆಯ ಪ್ರಮುಖ ಆಕರ್ಷಣೆಯೆಂದರೆ ‘ಕರಿ ಹರಿಸುವ’ ಆಚರಣೆ. ಊರ ಅಗಸಿ ಬಾಗಿಲಲ್ಲಿ ಎತ್ತುಗಳನ್ನು ಓಡಿಸಿ ‘ಕರಿ’ ಹರಿಸಲಾಗುತ್ತದೆ. ಕಂದು ಬಣ್ಣದ ಎತ್ತು ಕರಿ ಹರಿದರೆ ಉತ್ತಮ ಮುಂಗಾರು, ಬಿಳಿ ಬಣ್ಣದ ಎತ್ತು ಕರಿ ಹರಿದರೆ ಉತ್ತಮ ಹಿಂಗಾರು ಮಳೆಯಾಗುತ್ತದೆ ಎಂಬುದು ಗ್ರಾಮೀಣ ಜನರ ನಂಬಿಕೆಯಾಗಿದೆ.

ಹಬ್ಬದ ದಿನ ಗ್ರಾಮಗಳಲ್ಲಿ ಹಲಗೆ, ಡೊಳ್ಳು ಹಾಗೂ ವಿವಿಧ ವಾದ್ಯಮೇಳಗಳೊಂದಿಗೆ ಎತ್ತುಗಳ ಮೆರವಣಿಗೆ ನಡೆಯುತ್ತದೆ. ರೈತರು ಪರಸ್ಪರ ಗುಲಾಲ್ ಎರಚಿಕೊಂಡು ಸಂಭ್ರಮಿಸುತ್ತಾರೆ. ನಿಂಬೆಹಣ್ಣು ಎಸೆಯುವುದು, ಕಣ್ಣು ಕಟ್ಟಿ ಗುರಿ ಮುಟ್ಟುವುದು ಸೇರಿದಂತೆ ವಿವಿಧ ಸಾಂಪ್ರದಾಯಿಕ ಆಟಗಳು ಹಬ್ಬದ ಮೆರುಗನ್ನು ಹೆಚ್ಚಿಸುತ್ತವೆ.

ಇದನ್ನೂ ಓದಿ: ‘ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್’ ಪ್ರಶಸ್ತಿ ಸ್ವೀಕರಿಸಿದ ಮೋದಿ

ಕಾರಹುಣ್ಣಿಮೆ ದಿನ ಮನೆಗಳಲ್ಲಿ ಹೋಳಿಗೆ, ಕರಿಗಡುಬು, ವಡೆ, ಪಾಯಸ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ತಯಾರಿಸಿ ಬಂಧು-ಬಳಗದೊಂದಿಗೆ ಹಂಚಿಕೊಳ್ಳುವುದು ವಾಡಿಕೆಯಾಗಿದೆ.

ಇಂದು ಯಾಂತ್ರೀಕರಣದ ಯುಗದಲ್ಲಿ ಕೃಷಿ ಪದ್ಧತಿಗಳು ಬದಲಾಗುತ್ತಿದ್ದರೂ, ಕಾರಹುಣ್ಣಿಮೆಯಂತಹ ಹಬ್ಬಗಳು ಗ್ರಾಮೀಣ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳನ್ನು ಜೀವಂತವಾಗಿರಿಸುತ್ತಿವೆ. ಕಾರಹುಣ್ಣಿಮೆ ಕೇವಲ ಹಬ್ಬವಲ್ಲ; ಅನ್ನದಾತ ಮತ್ತು ಆತನ ಜೀವಾಳವಾದ ಎತ್ತುಗಳ ನಡುವಿನ ಪ್ರೀತಿ, ಕೃತಜ್ಞತೆ ಹಾಗೂ ಬಾಂಧವ್ಯದ ಪ್ರತೀಕವಾಗಿದೆ.