SK Home Ad
Home ನಮ್ಮ ಜಿಲ್ಲೆ ಉಡುಪಿ ಅಯೋಧ್ಯೆ ಶ್ರೀರಾಮ ಮಂದಿರ ವಂಚನೆ ಪ್ರಕರಣದ ತನಿಖೆ ಸ್ವಾಗತಾರ್ಹ

ಅಯೋಧ್ಯೆ ಶ್ರೀರಾಮ ಮಂದಿರ ವಂಚನೆ ಪ್ರಕರಣದ ತನಿಖೆ ಸ್ವಾಗತಾರ್ಹ

0
83

ಉಡುಪಿ: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ನಡೆದಿರುವ ಕೋಟ್ಯಂತರ ರೂ.ಗಳ ವಂಚನೆ ಪ್ರಕರಣದ ತನಿಖೆ ಸ್ವಾಗತಾರ್ಹ ಎಂದು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥರೂ ಆಗಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು, ಅಯೋಧ್ಯೆ ಶ್ರೀರಾಮ ಮಂದಿರ ಕೇವಲ ಭಾರತೀಯರದ್ದು ಮಾತ್ರವಲ್ಲ ವಿದೇಶಿಯರ ಶ್ರದ್ಧಾಕೇಂದ್ರವೂ ಆಗಿದೆ. ಅದು ಈ ದೇಶದ ಅಸ್ಮಿತೆ. ಅಂಥಲ್ಲಿ ವಂಚನೆ ನಡೆದಿರುವುದು ಅಕ್ಷಮ್ಯ. ಆ ಕೃತ್ಯ ಮಾಡಿದ ಯಾರೇ ಆಗಲಿ ಅವರು ಶಿಕ್ಷಾರ್ಹರು ಎಂದು ಶ್ರೀಗಳು ಪ್ರತಿಪಾದಿಸಿದರು.

ತಾವು ಟ್ರಸ್ಟಿಯಾಗಿದ್ದು, ಅಲ್ಲಿ ಭೇಟಿ ನೀಡಿದಾಗ ಆಡಳಿತ ಮಂಡಳಿಗೆ ಕೆಲವು ಸಲಹೆ-ಸೂಚನೆ ನೀಡಲಾಗುತ್ತದೆಯೇ ಹೊರತು ಅಲ್ಲಿಯೇ ಇದ್ದು ಎಲ್ಲವನ್ನೂ ನಿಭಾಯಿಸುವುದು ಕಷ್ಟದ ಮಾತು. ಅದೊಂದು ಟ್ರಸ್ಟ್. ಹಾಗಾಗಿ ವಿಶ್ವಾಸವಿಟ್ಟು ಕಾರ್ಯನಿರ್ವಹಿಸಲಾಗುತ್ತಿತ್ತು ಎಂದ ಶ್ರೀಪಾದರು, ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ರಾಜೀನಾಮೆ ನೀಡಿರುವ‌ ವಿಚಾರ ಅವರಾಗಿಯೇ ತಮಗೆ ತಿಳಿಸಿಲ್ಲ. ಟ್ರಸ್ಟ್‌ನ ವಾಟ್ಸಾಪ್‌ನಲ್ಲೂ ಮಾಹಿತಿ ಹಂಚಿಕೊಂಡಿಲ್ಲ ಎಂದರು.

ಅಯೋಧ್ಯೆ ಶ್ರೀರಾಮ‌ ಮಂದಿರದಲ್ಲಿ ಯಾವುದೇ ಸೇವೆ, ವಿಶೇಷ ಪೂಜೆ ಇತ್ಯಾದಿಗಳಿಲ್ಲ. ಅಲ್ಲಿ ತೆರಳುವ ಭಕ್ತಾದಿಗಳು ಕಾಣಿಕೆ ನೀಡುವುದಕ್ಕಿಂತಲೂ ಸಾಮಾಜಿಕ‌ ಕಾರ್ಯ ನಡೆಸುವ ಸಂಕಲ್ಪ ತೊಡುವುದು ರಾಮಸೇವೆಯೇ‌ ಆಗುತ್ತದೆ. ಸಮಾಜದ ಬಡವರು, ದೀನ-ದಲಿತರಿಗೆ ಮನೆ ನಿರ್ಮಾಣ, ಆರೋಗ್ಯ ನೆರವು ಇತ್ಯಾ ನಡೆಸುವುದು ಉತ್ತಮ. ಇದು ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ‌ಆಶಯವೂ ಆಗಿತ್ತು. ನಾವು ಟ್ರಸ್ಟಿಯಾದ ಬಳಿಕ ಅದನ್ನು ಕಾರ್ಯರೂಪಕ್ಕೆ ತಂದಿರುವುದಾಗಿ ತಿಳಿಸಿದರು. ಭಕ್ತರ‌ ನೆರವು ಹಾಗೂ ಮಠದಿಂದಲೂ ಅನೇಕ ಸಾಮಾಜಿಕ ಸೇವಾ ಕಾರ್ಯ ನಡೆಸುತ್ತಿರುವುದಾಗಿ ಪೇಜಾವರ ಶ್ರೀಗಳು ತಿಳಿಸಿದರು.