SK Home Ad
Home ನಮ್ಮ ಜಿಲ್ಲೆ ಉಡುಪಿ ಹಾಡಹಗಲೇ ಗುಂಡಿಕ್ಕಿ ಕಾಂಗ್ರೆಸ್ ಮುಖಂಡ, ಗ್ರಾಪಂ ಮಾಜಿ ಅಧ್ಯಕ್ಷನ ಹತ್ಯೆ

ಹಾಡಹಗಲೇ ಗುಂಡಿಕ್ಕಿ ಕಾಂಗ್ರೆಸ್ ಮುಖಂಡ, ಗ್ರಾಪಂ ಮಾಜಿ ಅಧ್ಯಕ್ಷನ ಹತ್ಯೆ

0
219

ಉಡುಪಿ: ಕಾಂಗ್ರೆಸ್ ಮುಖಂಡ, ಮುದರಂಗಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಡೇವಿಡ್ ಡಿಸೋಜಾ (55) ಹಾಡಹಗಲೇ ನಡೆದ ಗುಂಡಿನ ದಾಳಿಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದಾರೆ.

ಉಡುಪಿಯ ಮುದರಂಗಡಿ ಪೇಟೆಯಲ್ಲಿರುವ ಡೇವಿಡ್ ಡಿಸೋಜಾ ಅವರ ಕಚೇರಿ ಸಮೀಪ ಮಧ್ಯಾಹ್ನ ಈ ಶೂಟೌಟ್ ನಡೆದಿದ್ದು, ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ದಾಳಿಯಲ್ಲಿ ಒಂದು ಗುಂಡು ಡೇವಿಡ್ ಅವರ ಹಣೆಗೆ ತಗುಲಿದ್ದು, ಇನ್ನೆರಡು ಗುಂಡುಗಳು ಕೈಗೆ ತಗುಲಿವೆ.

ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆಯ ಬಳಿಕ ಮೃತದೇಹವನ್ನು ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಗಿದ್ದು, ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪಡುಬಿದ್ರೆ ಹಾಗೂ ಶಿರ್ವ ಪೊಲೀಸ್ ಠಾಣೆಗಳ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಹತ್ಯೆಯ ಹಿಂದಿನ ಉದ್ದೇಶ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವೈಯಕ್ತಿಕ ದ್ವೇಷ, ವ್ಯವಹಾರಿಕ ವೈಷಮ್ಯ ಅಥವಾ ಇತರೆ ಕಾರಣಗಳ ಬಗ್ಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಘಟನೆಯಿಂದ ಮುದರಂಗಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.