ಬೋಗಸ್ ಕಂಪನಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ, ‘ಪ್ರಾಮಾಣಿಕ ತೆರಿಗೆದಾರರಿಗೆ ತೊಂದರೆ ಬೇಡ, ತೆರಿಗೆ ವಂಚನೆಗೆ ಅವಕಾಶ ಇಲ್ಲ’ – ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನ
ಬೆಂಗಳೂರು: ವಾಣಿಜ್ಯ ತೆರಿಗೆ ಅಧಿಕಾರಿಗಳು ಸರ್ಕಾರದ ಶಕ್ತಿಯಾಗಿದ್ದು, ತೆರಿಗೆ ಸಂಗ್ರಹದ ಗುರಿಯನ್ನು ಮೀರಿ ಸಾಧನೆ ಮಾಡಬೇಕು ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ನಡೆದ ವಾಣಿಜ್ಯ ತೆರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಇಲಾಖೆಯ ಕಾರ್ಯಕ್ಷಮತೆ, ತೆರಿಗೆ ಸೋರಿಕೆ ತಡೆ ಮತ್ತು ಜಿಎಸ್‌ಟಿ ಸಂಗ್ರಹ ಹೆಚ್ಚಿಸುವ ಕುರಿತು ಮಹತ್ವದ ನಿರ್ದೇಶನಗಳನ್ನು ನೀಡಿದರು.
ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಪ್ರಕರಣ: ಟ್ರಸ್ಟ್‌ನ ಇಬ್ಬರು ಪ್ರಮುಖರ ರಾಜೀನಾಮೆ
ಯಾವುದೇ ಸರಕು ಸಾಗಣೆ ವಾಹನವು ಸೂಕ್ತ ದಾಖಲೆಗಳಿಲ್ಲದೆ ಚೆಕ್‌ಪೋಸ್ಟ್ ಅಥವಾ ರಾಜ್ಯ ಗಡಿಯನ್ನು ದಾಟಬಾರದು. ತೆರಿಗೆ ಸೋರಿಕೆಗೆ ಯಾವುದೇ ಅವಕಾಶ ಇರಬಾರದು. ಇದರಲ್ಲಿ ಯಾವುದೇ ರೀತಿಯ ರಾಜಿ ಅಥವಾ ನಿರ್ಲಕ್ಷ್ಯ ಸಹಿಸಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಎಚ್ಚರಿಸಿದರು.
ರಾಜ್ಯದಲ್ಲಿ ಸುಮಾರು 12 ಲಕ್ಷ ತೆರಿಗೆದಾರರ ಮಾಹಿತಿ ಲಭ್ಯವಿದ್ದು, ತಂತ್ರಜ್ಞಾನ ಮತ್ತು ಡೇಟಾ ಅನಾಲಿಟಿಕ್ಸ್ ಬಳಸಿ 360 ಡಿಗ್ರಿ ದೃಷ್ಟಿಕೋನದಲ್ಲಿ ವಿಶ್ಲೇಷಣೆ ನಡೆಸುವ ಸಾಮರ್ಥ್ಯ ಇಲಾಖೆಗೆ ಇದೆ. ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ತೆರಿಗೆ ಸಂಗ್ರಹ ಗುರಿಯನ್ನು ಮೀರಿಸುವಂತೆ ಸೂಚಿಸಿದರು.
ಇದನ್ನೂ ಓದಿ: ಕೇಂದ್ರ ಸರ್ಕಾರದ ಹೊಸ ನಿಯಮ: ನಕಲಿ ಔಷಧ ತಡೆಗೆ QR code ಅಸ್ತ್ರ
ಪ್ರಾಮಾಣಿಕ ತೆರಿಗೆದಾರರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು. ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಆದರೆ ತೆರಿಗೆ ವಂಚನೆ ಹಾಗೂ ಸೋರಿಕೆ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಜಿಎಸ್‌ಟಿ ವಂಚನೆ ನಿಯಂತ್ರಣಕ್ಕೆ ಹೈದರಾಬಾದ್ ಐಐಟಿ ಸಹಯೋಗದಲ್ಲಿ ಜಿಎಸ್‌ಟಿ ಅನಾಲಿಟಿಕಲ್ ಪೋರ್ಟಲ್ ಅಭಿವೃದ್ಧಿಪಡಿಸಲಾಗಿದ್ದು, ಅದರ ಮೂಲಕ ಹಲವು ವಂಚನೆ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಬೋಗಸ್ ಕಂಪನಿಗಳನ್ನು ಪತ್ತೆಹಚ್ಚಿ ಈಗಾಗಲೇ ₹166 ಕೋಟಿ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಇದನ್ನೂ ಓದಿ: ಡಾಲಿ ನಿರ್ಮಾಣದ ‘ಮದರ್ ಪ್ರಾಮಿಸ್’ ಟ್ರೈಲರ್‌ನಲ್ಲಿ ಭಾವನೆಗಳ ಜಾತ್ರೆ
ಮೇ 2026ರವರೆಗೆ ಕರ್ನಾಟಕ ಜಿಎಸ್‌ಟಿ ಸಂಗ್ರಹದಲ್ಲಿ ಶೇ.9ರಷ್ಟು ಬೆಳವಣಿಗೆ ಸಾಧಿಸಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಿದೆ. ತೆಲಂಗಾಣದ ನಂತರ ದೇಶದಲ್ಲೇ ಎರಡನೇ ಸ್ಥಾನದಲ್ಲಿರುವ ಕರ್ನಾಟಕ ಮೊದಲ ಸ್ಥಾನ ಪಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.
ಇದೇ ವೇಳೆ ಬಾಕಿ ಇರುವ ಮೇಲ್ಮನವಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಹಾಗೂ ತೆರಿಗೆದಾರ ಸ್ನೇಹಿ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.






















