ಮುನಿರಾಬಾದ್‌ನಲ್ಲಿ ನಡೆದ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್, ನದಿ ಜೋಡಣೆ ಯೋಜನೆಗೆ ವೇಗ ನೀಡಲಾಗಿದ್ದು, ತುಂಗಭದ್ರಾ ಜಲಾಶಯದಲ್ಲಿನ ಹೂಳು ತೆರವಿಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಲಿದೆ ಎಂದು ಹೇಳಿದರು.
ಮುನಿರಾಬಾದ್ (ಕೊಪ್ಪಳ): ತುಂಗಭದ್ರಾ ಜಲಾಶಯದ 33 ನೂತನ ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್, ದೇಶದ ನೀರಿನ ಭದ್ರತೆ, ನದಿ ಜೋಡಣೆ ಯೋಜನೆ ಹಾಗೂ ಜಲಾಶಯಗಳ ಸಂರಕ್ಷಣೆ ಕುರಿತು ಮಹತ್ವದ ಹೇಳಿಕೆಗಳನ್ನು ನೀಡಿದರು.
ಮುನಿರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 73 ವರ್ಷಗಳ ಹಿಂದೆ ನಿರ್ಮಾಣಗೊಂಡ ತುಂಗಭದ್ರಾ ಜಲಾಶಯ ಇಂದಿಗೂ ಸುಭದ್ರವಾಗಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. “ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಹಕಾರದಿಂದಲೇ ತುಂಗಭದ್ರಾ ಜಲಾಶಯಕ್ಕೆ 33 ನೂತನ ಕ್ರಸ್ಟ್ ಗೇಟ್‌ಗಳನ್ನು ಅಳವಡಿಸಲು ಸಾಧ್ಯವಾಗಿದೆ. ಇದು ಸಮನ್ವಯ ಮತ್ತು ಸಹಕಾರದ ಪ್ರತೀಕವಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: ಮುನಿರಾಬಾದ್: ಕನ್ನಡದಲ್ಲೇ ಭಾಷಣ – ರೈತರ ಮನಗೆದ್ದ CM ನಾಯ್ಡು
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಲ ಸಂರಕ್ಷಣೆ ಮತ್ತು ಜನರ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ತಿಳಿಸಿದ ಪಾಟೀಲ್, “ನಲ್ ಜಲ್ ಯೋಜನೆಯ ಮೂಲಕ ದೇಶದ ಮಹಿಳೆಯರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ. ಜೊತೆಗೆ, ಸ್ವಚ್ಛ ಭಾರತ ಅಭಿಯಾನದಡಿ ದೇಶಾದ್ಯಂತ ಸುಮಾರು 12 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ” ಎಂದರು.
ನದಿ ಜೋಡಣೆ ಯೋಜನೆಯ ಕುರಿತು ಮಾತನಾಡಿದ ಅವರು, “ಮಳೆ ಕೊರತೆಯ ಹಿನ್ನೆಲೆ ದೇಶದಲ್ಲಿ ₹44 ಸಾವಿರ ಕೋಟಿ ವೆಚ್ಚದಲ್ಲಿ ನದಿ ಜೋಡಣೆ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ರಾಜಸ್ಥಾನದಲ್ಲಿ ಈ ಯೋಜನೆಯ ಮೂಲಕ 10.12 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಾಗುತ್ತಿದೆ” ಎಂದು ಹೇಳಿದರು.
ಇದನ್ನೂ ಓದಿ: 3 ರಾಜ್ಯಗಳು ಒಟ್ಟಾಗಿ ನೀರಾವರಿ ಸಮಸ್ಯೆ ಬಗೆಹರಿಸೋಣ: ಡಿಕೆ
ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆದಿದ್ದು, ಇದರ ಮೂಲಕ ಹರಿಯಾಣ, ದೆಹಲಿ ಮತ್ತು ಪಂಜಾಬ್ ರಾಜ್ಯಗಳಿಗೆ ನೀರು ಪೂರೈಸುವ ಯೋಜನೆಗೆ ಸೋಮವಾರ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ತಿಳಿಸಿದರು. “ಕಳೆದ 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆ ಈಗ ಸಾಕಾರಗೊಳ್ಳುತ್ತಿದೆ” ಎಂದರು.
ದೇಶದ 6,500 ಜಲಾಶಯಗಳಲ್ಲಿ ಶೇಕಡಾ 15ರಷ್ಟು ಹೂಳು ತುಂಬಿದ್ದು, ತುಂಗಭದ್ರಾ ಜಲಾಶಯದಲ್ಲಿಯೂ ಇದೇ ಪ್ರಮಾಣದ ಹೂಳು ಸಂಗ್ರಹವಾಗಿದೆ ಎಂದು ಪಾಟೀಲ್ ಹೇಳಿದರು. “ಈ ಹೂಳು ತೆರವಿಗೆ ಕೇಂದ್ರ ಸರ್ಕಾರ ವಿಶೇಷ ಯೋಜನೆ ರೂಪಿಸಲಿದ್ದು, ಅಗತ್ಯ ತಾಂತ್ರಿಕ ನೆರವು ಒದಗಿಸಲಾಗುವುದು” ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಕನ್ನಡ ಪಠ್ಯಪುಸ್ತಕ ವಿವಾದ: ‘ಕೃಷ್ಣ’ ಹೆಸರಿನ ಬಗ್ಗೆ NCERT ಸ್ಪಷ್ಟನೆ
“ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದಂತೆ ಭವಿಷ್ಯದಲ್ಲಿ ನೀರಿಗಾಗಿ ವಿಶ್ವಯುದ್ಧವೇ ಸಂಭವಿಸಬಹುದು. ಆದ್ದರಿಂದ ನೀರಿನ ಸಂರಕ್ಷಣೆ ಮತ್ತು ಸಮರ್ಪಕ ಬಳಕೆ ಅತ್ಯಂತ ಅಗತ್ಯವಾಗಿದೆ. ದೇಶದ ರೈತರಿಗೆ ನೀರು ಒದಗಿಸಲು ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ” ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಹೇಳಿದರು.






















